ಮಾಜಿ ಸಚಿವ ಕೆಸಿಎನ್ ‘ಕೈ’ ಸೇರ್ಪಡೆಗೆ ಅಡ್ಡಿಯಾದ ಮಾಜಿ ಸಿಎಂ ‘ಎಚ್‌ಡಿಕೆ’..!

| Published : Mar 28 2024, 12:52 AM IST

ಮಾಜಿ ಸಚಿವ ಕೆಸಿಎನ್ ‘ಕೈ’ ಸೇರ್ಪಡೆಗೆ ಅಡ್ಡಿಯಾದ ಮಾಜಿ ಸಿಎಂ ‘ಎಚ್‌ಡಿಕೆ’..!
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿಯೊಳಗೆ ಅತೃಪ್ತರಾಗಿದ್ದ ಕೆ.ಸಿ.ನಾರಾಯಣಗೌಡ ಮತ್ತವರ ಬೆಂಬಲಿಗರನ್ನು ಸೆಳೆಯುವುದಕ್ಕೆ ಕಾಂಗ್ರೆಸ್ ವ್ಯೂಹ ರಚನೆ ಮಾಡಿತ್ತು. ಶೀಘ್ರದಲ್ಲೇ ನಾರಾಯಣಗೌಡರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ ಕೂಡ ಹೇಳಿದ್ದರು. ಅಷ್ಟರಲ್ಲಿಯೇ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ನಾರಾಯಣಗೌಡರ ಮನೆಗೆ ತೆರಳಿ ನಡೆಸಿದ ಸಂಧಾನ ಮಾತುಕತೆ ಯಶಸ್ವಿಯಾಗಿದೆ. ಇದೀಗ ಗೌಡರು ಪಕ್ಷ ತೊರೆಯುವ ಆಲೋಚನೆಯಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಆಪರೇಷನ್ ಹಸ್ತ ಕಾರ್ಯಾಚರಣೆ ನಡೆಸುವ ಮೂಲಕ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಮತ್ತವರ ಬೆಂಬಲಿಗರನ್ನು ಕಾಂಗ್ರೆಸ್‌ಗೆ ಸೆಳೆಯುವ ತಂತ್ರಗಾರಿಕೆಗೆ ಇದೀಗ ಬ್ರೇಕ್ ಬಿದ್ದಿದೆ. ಅದಕ್ಕೆ ಬ್ರೇಕ್ ಹಾಕಿರುವವರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎನ್ನುವುದು ಮತ್ತೊಂದು ವಿಶೇಷ.

ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿಯಲ್ಲಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಮಂಗಳವಾರದಿಂದಲೇ ಲೋಕಸಭಾ ಚುನಾವಣಾ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ನಿರ್ಧರಿಸಿರುವ ಕುಮಾರಸ್ವಾಮಿ ಅವರು ಕಾಂಗ್ರೆಸ್‌ನ ತಂತ್ರಗಳಿಗೆ ಪ್ರತಿತಂತ್ರ ಹೆಣೆಯಲಾರಂಭಿಸಿದ್ದಾರೆ.

ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಮುನಿಸು ಪ್ರದರ್ಶಿಸುತ್ತಾ ಪಕ್ಷದ ಎಲ್ಲ ಕಾರ್ಯ ಚಟುವಟಿಕೆಗಳಿಂದ ಮಾಜಿ ಸಚಿವ ಕೆ.ಸಿ. ನಾರಾಯಣಗೌಡ ಅವರು ದೂರವೇ ಉಳಿದಿದ್ದರು. ಹಾಲಿ ಸಂಸದೆ ಸುಮಲತಾ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕು, ಜೆಡಿಎಸ್‌ಗೆ ಮಂಡ್ಯ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಬಾರದು ಎಂಬ ಬಗ್ಗೆ ಪ್ರಬಲವಾದ ದನಿ ಎತ್ತಿದ್ದರು. ಸುಮಲತಾ ಅವರಿಗೆ ಟಿಕೆಟ್ ನೀಡುವಂತೆ ಹಾಲಿ ಸಂಸದರ ಪರ ಬ್ಯಾಟಿಂಗ್ ನಡೆಸಿದ್ದರು. ಮೈತ್ರಿಯಿಂದ ಬೇಸರಗೊಂಡಿದ್ದ ನಾರಾಯಣಗೌಡರುಉ ನೆಪಮಾತ್ರಕ್ಕೆ ಅಲ್ಲೊಂದು ಇಲ್ಲೊಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಬಹುತೇಕ ನಾರಾಯಣಗೌಡರು ಪಕ್ಷ ತೊರೆಯಲು ನಿರ್ಧರಿಸಿದ್ದಾರೆಂಬ ಕೂಗು ರಾಜಕೀಯ ವಲಯದಲ್ಲಿ ದಟ್ಟವಾಗಿ ಕೇಳಿಬಂದಿತ್ತು.

ಬಿಜೆಪಿಯೊಳಗೆ ಅತೃಪ್ತರಾಗಿದ್ದ ಕೆ.ಸಿ.ನಾರಾಯಣಗೌಡ ಮತ್ತವರ ಬೆಂಬಲಿಗರನ್ನು ಸೆಳೆಯುವುದಕ್ಕೆ ಕಾಂಗ್ರೆಸ್ ವ್ಯೂಹ ರಚನೆ ಮಾಡಿತ್ತು. ಶೀಘ್ರದಲ್ಲೇ ನಾರಾಯಣಗೌಡರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ ಕೂಡ ಹೇಳಿದ್ದರು. ಅಷ್ಟರಲ್ಲಿಯೇ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ನಾರಾಯಣಗೌಡರ ಮನೆಗೆ ತೆರಳಿ ನಡೆಸಿದ ಸಂಧಾನ ಮಾತುಕತೆ ಯಶಸ್ವಿಯಾಗಿದೆ. ಇದೀಗ ಗೌಡರು ಪಕ್ಷ ತೊರೆಯುವ ಆಲೋಚನೆಯಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾಜಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಿ.ಎಸ್.ಪುಟ್ಟರಾಜು, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪಿ.ಉಮೇಶ್ ಸೇರಿದಂತೆ ಇತರರು ಭೇಟಿ ನೀಡಿ ನಾರಾಯಣಗೌಡರ ಜೊತೆ ಮಾತುಕತೆ ನಡೆಸಿದರು. ಇದರಿಂದ ಕುಮಾರಸ್ವಾಮಿ ಅವರ ಬಗ್ಗೆ ನಾರಾಯಣಗೌಡರಲ್ಲಿದ್ದ ಮುನಿಸು ದೂರಾಗಿ, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಜೊತೆಗೆ ಮಾಜಿ ಸಿಎಂ ನಮ್ಮ ಮನೆಗೆ ಭೇಟಿ ನೀಡಿ ಬೆಂಬಲ ಕೋರಿದ್ದಾರೆ. ಅವರ ಋಣ ನನ್ನ ಮೇಲಿರುವ ಕಾರಣ ಅವರನ್ನೇ ಈ ಬಾರಿ ಬೆಂಬಲಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆಂದು ಗೊತ್ತಾಗಿದೆ.

ಕುಮಾರಸ್ವಾಮಿ ಮಂಡ್ಯ ಅಖಾಡ ಪ್ರವೇಶಿಸುವ ಮುನ್ನವೇ ಚುನಾವಣೆ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ.

ಮೊದಲಿಗೆ ಕೆ.ಸಿ.ನಾರಾಯಣಗೌಡರನ್ನು ಭೇಟಿಯಾಗಿ ಮನವೊಲಿಸಿದ್ದು, ಮುಂದೆ ಸಂಸದೆ ಸುಮಲತಾ ಅಂಬರೀಶ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲು ನಿರ್ಧರಿಸಿದ್ದಾರೆ. ಟಿಕೆಟ್ ವಂಚಿತರಾಗಿ ಅಸಮಾಧಾನಗೊಂಡಿರುವ ಸುಮಲತಾ ಮೌನಕ್ಕೆ ಶರಣಾಗಿದ್ದು, ಅವರನ್ನೂ ಸಂಧಾನ ಮಾತುಕತೆ ನಡೆಸಲಿದ್ದಾರೆ. ಸುಮಲತಾ ಅವರನ್ನೂ ಜೊತೆಗೂಡಿಸಿಕೊಂಡೇ ಚುನಾವಣಾ ಪ್ರಚಾರಕ್ಕಿಳಿಯುವ ಕಾರ್ಯತಂತ್ರ ರೂಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಒಟ್ಟಾರೆ ಕೆ.ಸಿ.ನಾರಾಯಣಗೌಡ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಾರೆಂಬ ವದಂತಿಗೆ ಸಧ್ಯ ತೆರೆ ಬಿದ್ದಿದೆ. ಇಷ್ಟಕ್ಕೇ ಕಾಂಗ್ರೆಸ್ ತನ್ನ ಪ್ರಯತ್ನ ಬಿಟ್ಟಿಲ್ಲ. ರಾಜಕೀಯ ಚಾಣಾಕ್ಷರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಜೆಡಿಎಸ್‌ನಿಂದ ಬೇರ್ಪಟ್ಟು ಬಿಜೆಪಿ ಸೇರ್ಪಡೆಗೊಂಡಿರುವ ಎಲ್ಲ ಮುಖಂಡರಿಗೂ ಗಾಳ ಹಾಕುವ ಕಾರ್ಯಾಚರಣೆ ಕೈಗೊಂಡಿದ್ದಾರೆ. ಸದ್ದಿಲ್ಲದೇ ಒಂದೊಂದೇ ದಾಳವನ್ನು ಉರುಳಿಸುತ್ತಿದ್ದಾರೆ. ಮುಂದೆ ಏನಾಗಬಹುದು ಎಂಬುದನ್ನು ಕಾದುನೋಡಬೇಕಿದೆ.