ಮಾಜಿ ಸಿಎಂ ಎಚ್‌ಡಿಕೆ ಆಟ ಮಂಡ್ಯದಲ್ಲಿ ನಡೆಯೋಲ್ಲ: ಶಾಸಕ ಕೆ.ಎಂ.ಉದಯ್

| Published : Mar 28 2024, 12:46 AM IST

ಮಾಜಿ ಸಿಎಂ ಎಚ್‌ಡಿಕೆ ಆಟ ಮಂಡ್ಯದಲ್ಲಿ ನಡೆಯೋಲ್ಲ: ಶಾಸಕ ಕೆ.ಎಂ.ಉದಯ್
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಎಚ್ಡಿಕೆ ಸ್ಪರ್ಧೆಯಿಂದ ದೊಡ್ಡಮಟ್ಟದ ಪರಿಣಾಮವೇನೂ ಬೀರುವುದಿಲ್ಲ. ಹಿಂದಿನಿಂದಲೂ ಎಂತೆಂಥಾ ಘಟಾನುಘಟಿ ನಾಯಕರನ್ನೇ ಈ ಜಿಲ್ಲೆಯ ಜನರು ಮೂಲೆಗುಂಪು ಮಾಡಿದರು. ಮಾಜಿ ಸಂಸದ ಜಿ. ಮಾದೇಗೌಡ, ನಟ ಹಾಗೂ ಮಾಜಿ ಸಂಸದ ಅಂಬರೀಶ್, ಕೆ.ವಿ.ಶಂಕರಗೌಡ, ಮಾಜಿ ಶಾಸಕ ಎಂ.ಎಸ್.ಸಿದ್ದರಾಜು ಅಂತಹ ಹಲವು ಕುಟುಂಬಗಳನ್ನೇ ಮೂಲೆಗುಂಪು ಮಾಡಿದರು. ಇನ್ನು ಕುಮಾರಸ್ವಾಮಿ ಯಾವುದೋ ಊರಿನಿಂದ ಬಂದವರು. ಅವರು ಯಾವ ಲೆಕ್ಕ..!

ಕನ್ನಡಪ್ರಭ ವಾರ್ತೆ ಮದ್ದೂರುಮಂಡ್ಯ ಜಿಲ್ಲೆಯೊಳಗೆ ಎಚ್.ಡಿ.ಕುಮಾರಸ್ವಾಮಿ ಆಟ ನಡೆಯುವುದಿಲ್ಲ. ಘಟಾನುಘಟಿ ನಾಯಕರನ್ನೇ ಸೋಲಿಸಿದ ಮಂಡ್ಯ ಜನಕ್ಕೆ ಕುಮಾರಸ್ವಾಮಿ ಯಾವ ಲೆಕ್ಕ ಎಂದು ಶಾಸಕ ಕೆ.ಎಂ.ಉದಯ್ ವ್ಯಂಗ್ಯವಾಡಿದರು.

ತಾಲೂಕಿನ ಕದಲೂರು ಗ್ರಾಮದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಎಚ್ಡಿಕೆ ಸ್ಪರ್ಧೆಯಿಂದ ದೊಡ್ಡಮಟ್ಟದ ಪರಿಣಾಮವೇನೂ ಬೀರುವುದಿಲ್ಲ. ಹಿಂದಿನಿಂದಲೂ ಎಂತೆಂಥಾ ಘಟಾನುಘಟಿ ನಾಯಕರನ್ನೇ ಈ ಜಿಲ್ಲೆಯ ಜನರು ಮೂಲೆಗುಂಪು ಮಾಡಿದರು. ಮಾಜಿ ಸಂಸದ ಜಿ. ಮಾದೇಗೌಡ, ನಟ ಹಾಗೂ ಮಾಜಿ ಸಂಸದ ಅಂಬರೀಶ್, ಕೆ.ವಿ.ಶಂಕರಗೌಡ, ಮಾಜಿ ಶಾಸಕ ಎಂ.ಎಸ್.ಸಿದ್ದರಾಜು ಅಂತಹ ಹಲವು ಕುಟುಂಬಗಳನ್ನೇ ಮೂಲೆಗುಂಪು ಮಾಡಿದರು. ಇನ್ನು ಕುಮಾರಸ್ವಾಮಿ ಯಾವುದೋ ಊರಿನಿಂದ ಬಂದವರು. ಅವರು ಯಾವ ಲೆಕ್ಕ ಎಂದು ಪ್ರಶ್ನಿಸಿದರು.

ಹಿಂದಿನಿಂದಲೂ ಜೆಡಿಎಸ್‌ನವರಿಂದ ಮಂಡ್ಯ ಜನರಿಗೆ ಅನ್ಯಾಯ ಆಗಿದೆ. ಜಿಲ್ಲೆಗೆ ಯಾವುದೇ ಕೊಡುಗೆ ನೀಡದೆ ಅಭಿವೃದ್ಧಿಯಲ್ಲಿ ಹಿಂದುಳಿಯುವಂತೆ ಮಾಡಿದ್ದಾರೆ. ಜಿಲ್ಲೆಯ ಜನತೆಯ ಆಶೀರ್ವಾದದಿಂದ ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು ಆದರೆ, ಜಿಲ್ಲೆಗೆ ಅವರು ನೀಡಿರುವ ಶಾಶ್ವತ ಕೊಡುಗೆಯಾದರು ಏನು ಎಂದರು.

ಕಳೆದ ಲೋಕಸಭಾ ಚುನಾವಣೆ ವೇಳೆ ತಮ್ಮ ಪುತ್ರನನ್ನು ಕಣಕ್ಕಿಳಿಸಲು ಮಂಡ್ಯ ಜಿಲ್ಲೆಗೆ ೮ ಸಾವಿರ ಕೋಟಿ ರುಪಾಯಿ ಬಜೆಟ್ ಮಂಡನೆ ಮಾಡಿದ್ದರು. ಚುನಾವಣೆಯಲ್ಲಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಸೋತರು ಎಂಬ ಕಾರಣಕ್ಕೆ ೮ ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡದೆ ಜಿಲ್ಲೆಯ ಜನತೆಗೆ ದ್ರೋಹ ಬಗೆದು ಪಲಾಯನ ಮಾಡಿದರು. ಐದು ವರ್ಷಗಳ ನಂತರ ಈಗ ನಾನೇ ಮೈತ್ರಿ ಅಭ್ಯರ್ಥಿ ಎಂದು ಕಣಕ್ಕಿಳಿಯಲು ಸಿದ್ದರಾಗಿದ್ದಿರಿ. ಯಾವ ಮುಖ ಇಟ್ಟುಕೊಂಡು ಜನತೆಯ ಬಳಿ ಮತ ಕೇಳಲು ಬರುತ್ತಿದ್ದೀರಿ ಎಂದು ಕಿಡಿಕಾರಿದರು.

ಪ್ರತಿ ಬಾರಿಯೂ ಜಿಲ್ಲೆಯ ಜನರಿಗೆ ಮಂಕು ಬೂದಿ ಎರಚಲು ಆಗೋಲ್ಲ. ಜಿಲ್ಲೆಯ ಜನತೆ ಅಭಿವೃದ್ಧಿಯತ್ತ ಮುಖ ಮಾಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ೭ ಕ್ಷೇತ್ರಗಳಲ್ಲಿ ೬ ಸ್ಥಾನಗಳನ್ನು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಹೀಗಾಗಿ ಈ ಬಾರಿ ಕುಮಾರಸ್ವಾಮಿಯವರ ಆಟ ಜಿಲ್ಲೆಯಲ್ಲಿ ನಡೆಯೋಲ್ಲ ಎಂದರು.

ಜಿಲ್ಲೆಗೆ ಶಾಶ್ವತ ಕೊಡುಗೆ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ಇಂದೆದೂ ಯಾವುದೇ ಸರ್ಕಾರ ಕೊಡದ ಕೊಡುಗೆಗಳನ್ನು ನಮ್ಮ ಸರ್ಕಾರ ನೀಡಿದೆ. ಮೊದಲ ಕ್ಯಾಬಿನೆಟ್ ಸಭೆಯಲ್ಲೆ ಮೈಷುರ್ಗ ಆರಂಭಕ್ಕೆ ೫೦ ಕೋಟಿ ನೀಡಿದೆ. ಹೊಸ ಕಾರ್ಖಾನೆ ನಿರ್ಮಾಣಕ್ಕೆ ೫೦೦ ಕೋಟಿ ನೀಡಲು ಸಿದ್ಧವಿದೆ. ವಿ.ಸಿ ಫಾರಂ ಅನ್ನು ವಿಶ್ವ ವಿದ್ಯಾನಿಲಯವಾಗಿ ಮೇಲ್ದರ್ಜೆ ಮಾಡಲಾಗುತ್ತಿದೆ. ನಾಲಾ ಆಧುನೀಕರಣಕ್ಕೆ ೮೦೦ ಕೋಟಿ ಕೊಟ್ಟಿದೆ. ಚುನಾವಣೆ ನಂತರ ಮತ್ತಷ್ಟು ಅನುದಾನವನ್ನು ಹಂತ ಹಂತವಾಗಿ ಬಿಡುಗಡೆ ಮಾಡಿಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ನಮ್ಮ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಕೈಗೊಳ್ಳಲಿದ್ದೇವೆ. ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಸಮಸ್ಯೆಗಳನ್ನು ಜನರ ನಿರೀಕ್ಷೆಗೂ ಮೀರಿ ಕೆಲಸ ಮಾಡುತ್ತೇವೆ. ಕಳೆದ ವಿಧಾನಸಭಾ ಚುನಾವಣೆಗಿಂತ ಈ ಬಾರಿ ನನ್ನ ಕ್ಷೇತ್ರದ ಜನತೆ ನಿರೀಕ್ಷೆಗೂ ಮೀರಿ ಬಹುಮತ ನೀಡಲಿದ್ದಾರೆ ಎಂದು ತಿಳಿಸಿದರು.