ಐದು ವರ್ಷದಲ್ಲಿ ಮೇಕೆದಾಟು ಯೋಜನೆಗೆ ಶಂಕುಸ್ಥಾಪನೆ: ಎಚ್‌ಡಿಕೆ

| Published : Apr 17 2024, 01:16 AM IST

ಐದು ವರ್ಷದಲ್ಲಿ ಮೇಕೆದಾಟು ಯೋಜನೆಗೆ ಶಂಕುಸ್ಥಾಪನೆ: ಎಚ್‌ಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯದಲ್ಲಿ ಕಬ್ಬು, ಭತ್ತ ನಾಟಿ ಮಾಡದಂತೆ ರೈತರಿಗೆ ಕಾಂಗ್ರೆಸ್ ಸರ್ಕಾರ ಹೇಳಿದೆ. ೯೮ ಅಡಿ ನೀರು ಇದ್ದಾಗ ನಾಟಿ ಮಾಡಬೇಡಿ ಎನ್ನುವವರು ನಾನು ಕೊಟ್ಟ ಕೊಡುಗೆ ಬಗ್ಗೆ ಮಾತನಾಡುತ್ತಾರೆ. ನನಗೆ ಸಿಕ್ಕ ಅಲ್ಪಾವಧಿಯಲ್ಲಿ ಮಂಡ್ಯ ಜನರಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಮಂಡ್ಯ ಜನರ ಋಣ ತೀರಿಸಲು ಕೆಲಸ ಮಾಡಿದ್ದೇನೆ. ಬರಗಾಲದಿಂದ ಮಂಡ್ಯದಲ್ಲಿ ಬೆಳೆಗಳು ಒಣಗುತ್ತಿವೆ. ಈ ಸರ್ಕಾರಕ್ಕೆ ರೈತರ ಮೇಲೆ ಕಿಂಚಿತ್ತೂ ಅನುಕಂಪ ಇಲ್ಲ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಮುಂದಿನ ಐದು ವರ್ಷದೊಳಗೆ ಮೇಕೆದಾಟು ಯೋಜನೆಗೆ ಶಂಕುಸ್ಥಾಪನೆ ಮಾಡುತ್ತೇವೆ. ಒಂದು ವೇಳೆ ಯೋಜನೆಗೆ ಶಂಕುಸ್ಥಾಪನೆ ಮಾಡಲಿಲ್ಲವೆಂದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ನಡೆದ ಜೆಡಿಎಸ್-ಬಿಜೆಪಿ ಮೈತ್ರಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ದೇವೇಗೌಡರು ಕಾವೇರಿ ನೀರಿನ ರಕ್ಷಣೆಗಾಗಿ ಹಲವು ದಶಕಗಳಿಂದ ಹೋರಾಟ ನಡೆಸಿದ್ದಾರೆ. ೧೪.೭೫ ಟಿಎಂಸಿ ಅಡಿ ನೀರನ್ನು ಕರ್ನಾಟಕಕ್ಕೆ ಉಳಿಸಿಕೊಟ್ಟಿದ್ದಾರೆ. ಇನ್ನೂ ಕಾವೇರಿ ನೀರಿನ ಮೇಲೆ ಕನ್ನಡಿಗರಿಗೆ ಹಕ್ಕು ಸಿಗಬೇಕಿರುವುದರಿಂದ ಹೋರಾಟ ಮಾಡಲು ನಾವು ಮೈತ್ರಿಯಾಗಿದ್ದೇವೆ ಎಂದರು.

ಮಂಡ್ಯದಲ್ಲಿ ಕಬ್ಬು, ಭತ್ತ ನಾಟಿ ಮಾಡದಂತೆ ರೈತರಿಗೆ ಕಾಂಗ್ರೆಸ್ ಸರ್ಕಾರ ಹೇಳಿದೆ. ೯೮ ಅಡಿ ನೀರು ಇದ್ದಾಗ ನಾಟಿ ಮಾಡಬೇಡಿ ಎನ್ನುವವರು ನಾನು ಕೊಟ್ಟ ಕೊಡುಗೆ ಬಗ್ಗೆ ಮಾತನಾಡುತ್ತಾರೆ. ನನಗೆ ಸಿಕ್ಕ ಅಲ್ಪಾವಧಿಯಲ್ಲಿ ಮಂಡ್ಯ ಜನರಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಮಂಡ್ಯ ಜನರ ಋಣ ತೀರಿಸಲು ಕೆಲಸ ಮಾಡಿದ್ದೇನೆ. ಬರಗಾಲದಿಂದ ಮಂಡ್ಯದಲ್ಲಿ ಬೆಳೆಗಳು ಒಣಗುತ್ತಿವೆ. ಈ ಸರ್ಕಾರಕ್ಕೆ ರೈತರ ಮೇಲೆ ಕಿಂಚಿತ್ತೂ ಅನುಕಂಪ ಇಲ್ಲ ಎಂದು ಟೀಕಿಸಿದರು.

ಕನಕಪುರದ ಮಹಾನುಭಾವರು ನಮ್ಮ ನೀರು ನಮ್ಮ ಹಕ್ಕು ಎಂದು ಬೆಂಗಳೂರಿನವರೆಗೆ ಹೋರಾಟ ಮಾಡಿದರು. ನನಗೂ ಒಂದು ಅವಕಾಶ ಕೊಡಿ. ಪೇಪರ್ ಪೆನ್ನು ಕೊಟ್ಟು ಅಧಿಕಾರ ಕೊಡಿ ಎಂದು ಆ ಮಹಾನುಭಾವ ಕೇಳಿದರು. ಜನರು ನಮ್ಮವನು ಎಂಬ ಕಾರಣಕ್ಕೆ ಅಧಿಕಾರ ಕೊಟ್ಟರು. ನಮ್ಮ ನೀರು ನಮ್ಮ ಹಕ್ಕು ಎಂದು ಹೋರಾಟ ಮಾಡಿದವರು ಈಗ ಎಲ್ಲಿದ್ದಾರೆ. ಈಗ ನಮ್ಮ ನೀರು ತಮಿಳುನಾಡು ಹಕ್ಕು ಎನ್ನುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ದೇವೇಗೌಡರು ಈ ಇಳಿ ವಯಸ್ಸಿನಲ್ಲೂ ಸಂಸತ್‌ನಲ್ಲಿ ಕಾವೇರಿ ಪರ ಧ್ವನಿ ಎತ್ತಿದ್ದಾರೆ. ಈಗ ಕಾಂಗ್ರೆಸ್‌ನವರು ನಮ್ಮನ್ನು ಮೋದಿ ಭೇಟಿ ಮಾಡಿಸಿ ಅಂತ ಕೇಳುತ್ತಿದ್ದಾರೆ. ಹಾಗಿದ್ದರೆ ನೀವು ಏಕೆ ಅಧಿಕಾರಕ್ಕೆ ಬರಬೇಕಿತ್ತು, ನಮ್ಮ ನೀರು ನಮ್ಮ ಹಕ್ಕು ಎಂದು ಏಕೆ ಹೋರಾಟ ಮಾಡಬೇಕಿತ್ತು ಎಂದು ಪ್ರಶ್ನಿಸಿದರು.

ಇಡೀ ದೇಶದಾದ್ಯಂತ ಮೋದಿ ಅವರು ಮತ್ತೆ ಪಿಎಂ ಆಗಬೇಕು ಎಂಬ ಕೂಗು ಕೇಳಿಬರುತ್ತಿದೆ. ಅದೇ ಕಾರಣಕ್ಕೆ ದೇವೇಗೌಡರು ಮೋದಿ ಅವರ ಜೊತೆ ಕೈ ಜೊಡಿಸಲು ತೀರ್ಮಾನ ಮಾಡಿದರು. ಜೆಡಿಎಸ್-ಬಿಜೆಪಿ ಮೈತ್ರಿ ಕಾವೇರಿ ನದಿ ನೀರಿನ ರಕ್ಷಣೆಗಾಗಿಯೇ ವಿನಃ ಸ್ವಾರ್ಥಕ್ಕಲ್ಲ ಎಂದರು.

ನಾನು ಚುನಾವಣೆಗೆ ನಿಲ್ಲಬಾರದು ಎಂದುಕೊಂಡಿದ್ದೆ. ನನ್ನ ಆರೋಗ್ಯದ ದೃಷ್ಟಿಯಿಂದ ಸ್ಪರ್ಧೆ ಬೇಡಾ ಎಂದಿದ್ದೆ. ಮಂಡ್ಯ ಜನರ ಒತ್ತಾಯ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಸ್ಪರ್ಧೆ ಮಾಡಿದ್ದೇವೆ. ಮಂಡ್ಯ ಜಿಲ್ಲೆಗೆ ಏನು ಮಾಡಿದ್ದಾನೆ ಎಂದು ಕೇಳುತ್ತಾರೆ. ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಾಗ ಬಂದಿದ್ದು ನಾನು. ಆಗ ನನಗೆ ಯಾವ ಅಧಿಕಾರವೂ ಇರಲಿಲ್ಲ. ರೈತರ ಕುಟುಂಬಗಳಿಗೆ ಆರ್ಥಿಕ ಸಹಾಯ ಮಾಡಿದ್ದು ಕುಮಾರಸ್ವಾಮಿ ಮಾತ್ರ. ದೇವೇಗೌಡರನ್ನು ನಾವು ಪ್ರಧಾನಿ ಮಾಡಿದೆವು ಎಂದು ಹೇಳುವವರು ಅವರನ್ನು ಕೆಳಗಿಳಿಸಿದ್ದು ಕಾಂಗ್ರೆಸ್‌ನವರೇ ಎನ್ನುವುದನ್ನು ಹೇಳೋಲ್ಲ. ನನ್ನನ್ನು ಮುಖ್ಯಮಂತ್ರಿ ಮಾಡಿದ್ದು ನಾವೇ ಅಂತಾರೆ. ನನ್ನನ್ನು ಮುಖ್ಯಮಂತ್ರಿ ಮಾಡುವಂತೆ ನಾನೇನು ಅವರ ಮನೆ ಬಾಗಿಲಿಗೆ ಹೋಗಿರಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡುವಂತೆ ದೇವೇಗೌಡರು ಹೇಳಿದ್ದರು. ಆದರೆ ದಲಿತರನ್ನು ಬೆಳಸಬಾರದು ಎಂದು ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಲಿಲ್ಲ ಎಂದು ದೂರಿದರು.

ಕಾಂಗ್ರೆಸ್‌ನವರು ಪ್ರತಿ ಕುಟುಂಬಕ್ಕೆ ೧ ಲಕ್ಷ ರು. ಕೊಡುವ ಗ್ಯಾರಂಟಿ ಕೊಟ್ಟಿದ್ದಾರೆ. ಅವರು ಅಧಿಕಾರಕ್ಕೆ ಬರೋಲ್ಲ. ಗ್ಯಾರಂಟಿ ಕೊಡಲು ಅಪಾರ ದುಡ್ಡು ಬೇಕು. ಅದು ಸಾಧ್ಯವೇ ಇಲ್ಲ. ಜನರಿಗೆ ಅವರು ಟೋಪಿ ಹಾಕುತ್ತಿದ್ದಾರೆ. ನನ್ನ ತಾಯಂದಿರು ಮೋಸ ಹೋಗಬೇಡಿ ಎಂದು ಮನವಿ ಮಾಡಿದರು.

ವಿ.ಸಿ.ಚಾನಲ್ ರೆಡಿ ಆಗುತ್ತಿದೆ ಎಂದು ನಿಮಗೆ ನೀರು ಕೊಟ್ಟಿಲ್ಲ. ವಿಸಿ ಚಾನಲ್ ಗುತ್ತಿಗೆ ತೆಗೆದುಕೊಂಡಿರೋದು ಕಾಂಗ್ರೆಸ್ ಅಭ್ಯರ್ಥಿ. ವಿಸಿ ನಾಲೆಯ ಹೆಸರಿನಲ್ಲಿ ಕೋಟಿ ಕೋಟಿ ಹಣ ಮಾಡುತ್ತಿದ್ದಾರೆ. ಮಂಡ್ಯದವನು ಹೊರಗಿನವನು ಎಂದೆಲ್ಲಾ ಪ್ರಚಾರ ಮಾಡುತ್ತಿದ್ದಾರೆ. ಈ ಗುತ್ತಿಗೆದಾರ ಏನೂ ಮಾಡೋಲ್ಲ. ಕೇವಲ ಹಣ ಮಾಡಲು ಬಂದಿದ್ದಾನೆ ಅಷ್ಟೇ. ನಾನು ನಿಮ್ಮ ಕಷ್ಟ ಸುಖಗಳಿಗೆ ಆಗುತ್ತೇನೆ. ಜೆಡಿಎಸ್ ಎಲ್ಲಿದೆ ಸತ್ತೋಗಿದೆ ಎಂದು ಕಾಂಗ್ರೆಸ್ ಅವರು ಹೇಳುತ್ತಿದ್ದಾರೆ. ಅವರಿಗೆ ನೀವು ತಕ್ಕ ಪಾಠ ಕಲಿಸಬೇಕು ಎಂದರು.

ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಚಿವರಾದ ಜಿ.ಟಿ.ದೇವೇಗೌಡ, ಹೆಚ್,ವಿಶ್ವನಾಥ್, ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಅಬ್ಬಾಸ್ ಅಲಿ ಬೋಹ್ರಾ, ಬಿಜೆಪಿ ಮುಖಂಡ ಮುನಿರಾಜು ಸೇರಿದಂತೆ ಇತರರಿದ್ದರು.