ದಾದಾಗಿರಿ ಎಲ್ಲ ನಡೆಯಲ್ಲ: ಪರಮೇಶ್ವರ್

| Published : May 27 2024, 09:31 AM IST

Parameshwar

ಸಾರಾಂಶ

ಗೂಂಡಾವರ್ತನೆ, ದಾದಾಗಿರಿ ಮಾಡಿ ಉಳಿದುಕೊಳ್ಳುತ್ತೇವೆ ಎಂದು ತಿಳಿದಿದ್ದರೆ ಅದು ಸಾಧ್ಯವಿಲ್ಲ. ಶಾಸಕರಾಗಿರಲಿ, ಸಂಸದರಾಗಿರಲಿ‌ ಬೇರೆ ಯಾರಾದರೂ ಆಗಲಿ. ಕಾನೂನನ್ನು ಕೈಗೆತ್ತಿಕೊಂಡರೆ ಯಾರನ್ನು ಕೂಡ ಬಿಡುವುದಿಲ್ಲ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು :  ‘ಗೂಂಡಾವರ್ತನೆ, ದಾದಾಗಿರಿ ಮಾಡಿ ಉಳಿದುಕೊಳ್ಳುತ್ತೇವೆ ಎಂದು ತಿಳಿದಿದ್ದರೆ ಅದು ಸಾಧ್ಯವಿಲ್ಲ. ಶಾಸಕರಾಗಿರಲಿ, ಸಂಸದರಾಗಿರಲಿ‌ ಬೇರೆ ಯಾರಾದರೂ ಆಗಲಿ. ಕಾನೂನನ್ನು ಕೈಗೆತ್ತಿಕೊಂಡರೆ ಯಾರನ್ನು ಕೂಡ ಬಿಡುವುದಿಲ್ಲ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಬಿಜೆಪಿ ಶಾಸಕ ಹರೀಶ್‌ ಪೂಂಜಾ ವಿರುದ್ಧ ಎಫ್‌ಐಆರ್‌ ದಾಖಲಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಇಂತಹ ಘಟನೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಶಾಸಕರು ಠಾಣೆಯೊಳಗೆ ಹೋಗಿ ಗಲಾಟೆ ಮಾಡಿದ್ದಾರೆ. ಪೊಲೀಸರ ಮೇಲೆ ದಾಂಧಲೆ ಎಸಗಿದ್ದಾರೆ. ಈ ರೀತಿ ಆಗುವುದಾದರೆ ಸಮಾಜದಲ್ಲಿ ಶಾಂತಿ ಹೇಗಿರುತ್ತದೆ? ಯಾರು ಸಹ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಪದೇ ಪದೇ ಹೇಳುತ್ತಿದ್ದೇನೆ. ಶಾಸಕರಾಗಿರಲಿ, ಸಂಸದರಾಗಿರಲಿ‌ ಯಾರನ್ನು ಕೂಡ ಬಿಡುವ ಪ್ರಶ್ನೆಯೇ ಇಲ್ಲ. ಕಾನೂನು ಉಲ್ಲಂಘಿಸಿದರೆ ಕ್ರಮ ಅನಿವಾರ್ಯ’ ಎಂದು ಸ್ಪಷ್ಟಪಡಿಸಿದರು.

ಇನ್ನು ದಾವಣಗೆರೆಯ ಚನ್ನಗಿರಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ತೋರಿದ ಇನ್ಸ್‌ಪೆಕ್ಟರ್, ಸಬ್‌ ಇನ್ಸ್‌ಪೆಕ್ಟರ್‌ ಅವರನ್ನು ಅಮಾನತುಗೊಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸರಿಯಾದ ರೀತಿಯಲ್ಲಿ ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ ಕ್ರಮ ಜರುಗಿಸಲಾಗಿದೆ ಎಂದು ಹೇಳಿದರು.

ಚನ್ನಗಿರಿ ವ್ಯಕ್ತಿಯನ್ನು ಮಟ್ಕಾ ಆಡಿಸುವುದರಲ್ಲಿ ಭಾಗಿಯಾಗಿದ್ದ ಆರೋಪದ‌ ಮೇಲೆ ಠಾಣೆಗೆ ಕರೆದುಕೊಂಡು ಬಂದಿದ್ದರು. ಮರಣೋತ್ತರ ಪರೀಕ್ಷೆಯ ವರದಿ ಬಂದ‌ ನಂತರ ಆತನ ಸಾವಿಗೆ ನಿಖರವಾದ ಕಾರಣ ಗೊತ್ತಾಗಲಿದೆ ಎಂದು ತಿಳಿಸಿದರು.

ಪೊಲೀಸರು ಹಣಕ್ಕಾಗಿ ಪೀಡಿಸುತ್ತಿದ್ದರು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ತನಿಖೆಯಲ್ಲಿ ಎಲ್ಲವೂ ಗೊತ್ತಾಗುತ್ತದೆ. ಅಧಿಕಾರಿಗಳು ಆ ರೀತಿ ಭಾಗಿಯಾಗಿರುವುದು ಕಂಡು ಬಂದರೆ, ಅಂಥವರನ್ನು ಸೇವೆಯಿಂದ ವಜಾಗೊಳಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ಅಂತಹವರು ಸೇವೆಯಲ್ಲಿ ಇರಬಾರದು ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು.

ಗುಜರಾತ್ ಬೆಂಕಿ ದುರಂತಕ್ಕೆ ಯಾರು ಹೊಣೆ?

-ಕರ್ನಾಟಕ ಬಿಹಾರ ಆಗ್ತಿದೆ ಎಂದ ಬಿವೈವಿಗೆ ತಿರುಗೇಟು

ಕರ್ನಾಟಕ ಬಿಹಾರವಾಗುತ್ತಿದೆ ಎಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್‌, ವಿಜಯೇಂದ್ರ ಮೊದಲು ಬಿಜೆಪಿ ರಾಜ್ಯಗಳನ್ನು ನೋಡಲಿ. ಗುಜರಾತ್‌ನಲ್ಲಿ ಬೆಂಕಿ ಹೊತ್ತಿಕೊಂಡು 27 ಜನ ಸಾವಿಗೀಡಾಗಿದ್ದಾರೆ. ಅದಕ್ಕೆ ಯಾರು ಹೊಣೆ? ಅಲ್ಲಿನ ಮುಖ್ಯಮಂತ್ರಿ, ಗೃಹ ಸಚಿವರು ರಾಜೀನಾಮೆ ಕೊಡಬೇಕಲ್ಲ ಎಂದು ತಿರುಗೇಟು ನೀಡಿದರು.