ನಿಷ್ಪಕ್ಷಪಾತ ತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿ : ವಿಜಯೇಂದ್ರ

| Published : Sep 26 2024, 04:42 AM IST

BY vijayendraa

ಸಾರಾಂಶ

ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸಹಕರಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.

  ಬೆಂಗಳೂರು : ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸಹಕರಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ವೇಳೆ ಮೇಲೆ ಆರೋಪಗಳು ಬಂದ ಸಂದರ್ಭದಲ್ಲಿ ಇದೇ ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗಿದ್ದರು. ಆಗ ಅವರು ‘ಅಧಿಕಾರದಲ್ಲಿ ಇರುವ ಕಾರಣ ತನಿಖೆ ಮೇಲೆ ಪ್ರಭಾವ ಆಗುತ್ತದೆ. ಪ್ರಭಾವ ಬೀರುವ ಸಾಧ್ಯತೆಗಳಿವೆ. ಈ ಸಾಧ್ಯತೆಗಳಿರುವ ಕಾರಣ ನ್ಯಾಯಯುತ ಮತ್ತು ನಿಷ್ಪಕ್ಷಪಾತ (ಫೇರ್ ಆಂಡ್ ಇಂಪಾರ್ಶಿಯಲ್) ತನಿಖೆ ಅಸಾಧ್ಯ. ಅದಕ್ಕೋಸ್ಕರ ಮಿಸ್ಟರ್ ಯಡಿಯೂರಪ್ಪ ಅಧಿಕಾರದಲ್ಲಿ ಇರಬಾರದು. ಹಿ ಶುಡ್ ರಿಸೈನ್ ಇಮ್ಮೀಡಿಯೆಟ್ಲಿ’ ಎಂದಿದ್ದರು ಎಂದು ನೆನೆಪಿಸಿದರು.

ಬಿಜೆಪಿಯು ಭ್ರಷ್ಟ ಕಾಂಗ್ರೆಸ್ ಮತ್ತು ಭ್ರಷ್ಟ ಮುಖ್ಯಮಂತ್ರಿ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತ ಬಂದಿದೆ. ಬೆಂಗಳೂರಿನಿಂದ ಮೈಸೂರಿಗೆ ‘ಮೈಸೂರು ಚಲೋ’ ಪಾದಯಾತ್ರೆ ನಡೆಸಿದ್ದೆವು. ಖಾಸಗಿ ದೂರಿನ ಆಧಾರದ ಮೇಲೆ ರಾಜ್ಯಪಾಲರು ಇವತ್ತು ತನಿಖೆಗೆ ಅನುಮತಿ ನೀಡಿ, ರಾಜ್ಯಪಾಲರ ಆದೇಶವನ್ನು ರಾಜ್ಯ ಹೈಕೋರ್ಟ್ ರಾಜ್ಯಪಾಲರು ನೀಡಿದ ಆದೇಶ ಕ್ರಮಬದ್ಧವಾಗಿದೆ ಎಂದು ಹೇಳಿದೆ. ಇದೀಗ ವಿಶೇಷ ನ್ಯಾಯಾಲಯವು ಮುಡಾ ಹಗರಣದ ತನಿಖೆಗೆ ಸೂಚಿಸಿದೆ. ಸಿದ್ದರಾಮಯ್ಯನವರು ಹಿಂದೆ ವಿಪಕ್ಷ ನಾಯಕರಾಗಿದ್ದಾಗ ಹೇಳಿದ ಮಾತನ್ನು ನೆನಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಮೈಸೂರು ಪೊಲೀಸರಿಂದ ತನಿಖೆ ಸಾಧ್ಯವೇ?:

ಮೈಸೂರಿನ ಲೋಕಾಯುಕ್ತ ಪೊಲೀಸರಿಂದ ತನಿಖೆ ಸಾಧ್ಯವೇ? ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿರುವ ಲೋಕಾಯುಕ್ತ ಪೊಲೀಸರು, ರಾಜ್ಯದಲ್ಲಿರುವ ಲೋಕಾಯುಕ್ತ ಪೊಲೀಸರಿಂದ ಯಾವುದೇ ರೀತಿ ನ್ಯಾಯಯುತ ತನಿಖೆ ನಡೆಸಲು ಅಸಾಧ್ಯ ಎಂದು ಇದೇ ವೇಳೆ ವಿಜಯೇಂದ್ರ ಹೇಳಿದರು.

ಇವತ್ತು ಕೋರ್ಟ್ ಆದೇಶ ಮಾಡಿರಬಹುದು; ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವ ಸಲುವಾಗಿ ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ರಾಜೀನಾಮೆ ನೀಡುವ ಮುನ್ನ ಈ ತನಿಖೆಯನ್ನು ಸ್ವತಂತ್ರ ತನಿಖಾ ಸಂಸ್ಥೆ, ಸಿಬಿಐಗೆ ವಹಿಸಬೇಕು. ಆಗ ಸಿದ್ದರಾಮಯ್ಯ ಅವರ ಗೌರವ ಹೆಚ್ಚಾಗುತ್ತದೆ ಎಂದು ತಿಳಿಸಿದರು.

ಮುಡಾ ಹಗರಣದ ಕುರಿತು ಬಿಜೆಪಿ ನಿಲುವು ಸ್ಪಷ್ಟವಿದೆ. ಈ ಹಗರಣ ಕೇವಲ 14 ನಿವೇಶನಗಳಿಗೆ ಸೀಮಿತವಲ್ಲ. ಒಂದೆಡೆ 14 ನಿವೇಶನಗಳಿದ್ದರೆ, ಇನ್ನೊಂದೆಡೆ 4ರಿಂದ 5 ಸಾವಿರ ಕೋಟಿ ರು. ಬೆಲೆಬಾಳುವ ನಿವೇಶನಗಳು ರಿಯಲ್ ಎಸ್ಟೇಟ್, ದಲ್ಲಾಳಿಗಳ ಪಾಲಾಗಿದೆ. ಇದೆಲ್ಲದರ ಸಮಗ್ರ ತನಿಖೆ ಆಗಬೇಕೆಂದರೆ ಅದು ಸಿಬಿಐನಿಂದ ಮಾತ್ರ ಸಾಧ್ಯ ಎಂದು ಪ್ರತಿಪಾದಿಸಿದರು.