ಮನ್ಸೂರ್‌ಗೆ ಅವಕಾಶ ನೀಡಿ: ತೆಲಂಗಾಣ ಸಿಎಂ

| Published : Apr 21 2024, 02:19 AM IST / Updated: Apr 21 2024, 04:47 AM IST

ಸಾರಾಂಶ

ಘೋಷಿಸಿದ ಐದು ಗ್ಯಾರಂಟಿಗಳನ್ನು ನೀಡಿ ನುಡಿದಂತೆ ನಡೆದಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರಿಗೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಜನತೆ ಒಮ್ಮೆ ಅವಕಾಶ ಮಾಡಿಕೊಡಬೇಕು ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಮನವಿ ಮಾಡಿದರು.

 ಬೆಂಗಳೂರು:  ಘೋಷಿಸಿದ ಐದು ಗ್ಯಾರಂಟಿಗಳನ್ನು ನೀಡಿ ನುಡಿದಂತೆ ನಡೆದಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರಿಗೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಜನತೆ ಒಮ್ಮೆ ಅವಕಾಶ ಮಾಡಿಕೊಡಬೇಕು ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಮನವಿ ಮಾಡಿದರು.

ಶನಿವಾರ ನಗರದ ಮಹದೇವಪುರದಲ್ಲಿ ಆಯೋಜಿಸಿದ್ದ ಬಹಿರಂಗ ಸಮಾವೇಶ ಉದ್ದೇಶಿಸಿ ಮಾತನಾಡಿದ ರೇವಂತ್ ರೆಡ್ಡಿ, ಹಾಲಿ ಸಂಸದ ಪಿ.ಸಿ. ಮೋಹನ್ ಅವರಿಗೆ 3 ಬಾರಿ ಅವಕಾಶ ನೀಡಿದ್ದಿರಾ. ಈ ಬಾರಿ ಮನ್ಸೂರ್ ಅವರಿಗೆ ಒಂದು ಅವಕಾಶ ನೀಡಿ. ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾ ಎಲ್ಲ ವರ್ಗದ ಜನರ ಏಳಿಗೆಗೆ, ವ್ಯಾಪಾರ, ಉದ್ಯಮಗಳಿಗೆ ನೆರವಾಗುತ್ತಾರೆ. ಕಾಂಗ್ರೆಸ್ ಪಕ್ಷ ಮತ್ತು ನಾನು ಕೂಡ ನಿಮ್ಮ ಜೊತೆ ನಿಲ್ಲುತ್ತೇನೆ. ಒಟ್ಟಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾ ಮುಂದೆ ಸಾಗೋಣಾ ಎಂದು ಹೇಳಿದರು.

ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರೇವಂತ್ ರೆಡ್ಡಿ, ಮೋದಿಯವರದ್ದು ಬರೀ ಬಾಯಿ ಮಾತಷ್ಟೇ. ಹೇಳಿದ್ದನ್ನು ಮಾಡುವುದಿಲ್ಲ. ಇಷ್ಟು ವರ್ಷಗಳಿಂದ ಜೆಡಿಎಸ್‌ ಪಕ್ಷವನ್ನು ಅಪ್ಪ-ಮಕ್ಕಳ ಪಕ್ಷ ಎಂದು ಕರೆಯುತ್ತಿದ್ದ ನೀವು ಈಗ ಅವರನ್ನು ಜೊತೆಗೆ ಸೇರಿಸಿಕೊಂಡು ಚುನಾವಣಾ ನಡೆಸುತ್ತಿದ್ದಿರಿ. ಅವರ ಭ್ರಷ್ಟಾಚಾರ ಅಷ್ಟು ಬೇಗ ಮರೆತು ಹೋಯಿತೇ? ಅಲ್ಲದೇ ಜನಾರ್ಧನ ರೆಡ್ಡಿಯನ್ನು ಮೋದಿಯವರು ತೋಳಿನಲ್ಲಿ ಕೂರಿಸಿಕೊಂಡಿದ್ದಾರೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ 5 ಗ್ಯಾರಂಟಿ ಯೋಜನೆ ಜಾರಿ ಮಾಡಿದೆ. ತೆಲಂಗಾಣದಲ್ಲಿ ನಾವು 6 ಗ್ಯಾರಂಟಿ ಜಾರಿ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುತ್ತದೆ. ಆದರೆ, ಕರ್ನಾಟಕದ ಜನತೆ ಬಿಜೆಪಿಯಿಂದ 25 ಜನರನ್ನು ಸಂಸತ್ತಿಗೆ ಕಳುಹಿಸಿದ್ದಾರೆ. ಆದರೆ, ಕೇಂದ್ರ ಸರ್ಕಾರ ರಾಜ್ಯಕ್ಕೆ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಸಚಿವ ಸಂಪುಟದಲ್ಲೂ ಕೇವಲ ಒಂದೇ ಒಂದು ಕ್ಯಾಬಿನೇಟ್ ಸ್ಥಾನ ನೀಡಲಾಗಿದೆ. ಆದರೆ, ಗುಜರಾತ್‌ಗೆ 7 ಸಚಿವ ಸ್ಥಾನ ನೀಡಲಾಗಿದೆ. ಉತ್ತರ ಪ್ರದೇಶಕ್ಕೆ ಎಲ್ಲಾ ಪ್ರಮುಖ ಸ್ಥಾನ ನೀಡಲಾಗಿದೆ. ಕನ್ನಡಿಗರಿಗೆ ಮೋದಿ ದ್ರೋಹ ಮಾಡಿದ್ದಾರೆ ಎಂದು ರೆಡ್ಡಿ ವಾಗ್ದಾಳಿ ನಡೆಸಿದರು.ಕಾರ್ಯಕ್ರಮದಲ್ಲಿ ಶಾಸಕ ರಿಜ್ವಾನ್ ಅರ್ಷದ್ ಉಪಸ್ಥಿತರಿದ್ದರು.

ಎರಡು ಪರಿವಾರ ನಡುವಿನ ಯುದ್ಧ:

ಈ ಬಾರಿಯ ಚುನಾವಣೆ ಕೇವಲ ಚುನಾವಣೆಯಲ್ಲ. ಇದು ಎರಡು ಪರಿವಾರಗಳ ನಡುವಿನ ಯುದ್ಧವಾಗಿದೆ. ಮೋದಿ ಪರಿವಾರದಲ್ಲಿ ಇವಿಎಂ ಯಂತ್ರ, ಐಟಿ, ಇ.ಡಿ, ಸಿಬಿಐ, ಅದಾನಿ, ಅಂಬಾನಿ ಇದ್ದಾರೆ. ನಮ್ಮ ಪರಿವಾರದಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮನ್ಸೂರ್ ಅಲಿ ಖಾನ್‌ನಂತಹ ಅನೇಕರು ಇದ್ದಾರೆ. ಅವರೊಂದಿಗೆ140 ಕೋಟಿ ಜನ ಜೊತೆಗಿದ್ದಾರೆ. ಕನ್ನಡಿಗ ಮಲ್ಲಿಕಾರ್ಜುನ ಖರ್ಗೆಗೆ ಕಾಂಗ್ರೆಸ್ ಪಕ್ಷ ಉನ್ನತ ಸ್ಥಾನ ನೀಡಿದೆ. ಈ ಬಾರಿ ಇಂಡಿಯಾ ಕೂಟ ಕೇಂದ್ರದಲ್ಲಿ ಸರ್ಕಾರ ರಚಿಸುತ್ತದೆ ಎಂದು ರೇವಂತ್‌ ರೆಡ್ಡಿ ಹೇಳಿದರು.

ಮಹದೇವಪುರದ ವಿವಿಧೆಡೆ ಪ್ರಚಾರ:

ಇದಕ್ಕೂ ಮುನ್ನ ಮಹದೇವಪುರದ ಹೂಡಿ ಬ್ಲಾಕ್, ಗುಟ್ಟ ವೃತ್ತ, ಕಾಡುಗೋಡಿಯಲ್ಲಿ ರೋಡ್‌ ಶೋ ನಡೆಸಿದ ಮನ್ಸೂರ್ ಅಲಿ ಖಾನ್ ಮತಯಾಚನೆ ಮಾಡಿದರು. ವಿವಿಧ ಅಪಾರ್ಟ್‌ಮೆಂಟ್‌ ನಿವಾಸಿಗಳ ಜೊತೆ ಸಮಾಲೋಚನೆ ನಡೆಸಿ ಬೆಂಬಲ ಕೋರಿದರು. ಮಾಜಿ ಸಚಿವ ಎಚ್.ನಾಗೇಶ್, ಹೂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ.ಅನಿಲ್ ಕುಮಾರ್, ಸ್ಥಳೀಯ ಕಾಂಗ್ರೆಸ್ ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.