ಸಾರಾಂಶ
ಕಾಂಗ್ರೆಸ್ ಸಮಾವೇಶದಲ್ಲಿ ಗೋ ಬ್ಯಾಕ್ ಕಾರಜೋಳ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಿದ ಮಾತಿಗೆ ಸ್ವತಹ ಗೋವಿಂದ ಕಾರಜೋಳ ಗರಂ ಆದ ಘಟನೆ ನಡೆಯಿತು
ಚಿತ್ರದುರ್ಗ : ಕಾಂಗ್ರೆಸ್ ಸಮಾವೇಶದಲ್ಲಿ ಗೋ ಬ್ಯಾಕ್ ಕಾರಜೋಳ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಿದ ಮಾತಿಗೆ ಸ್ವತಹ ಗೋವಿಂದ ಕಾರಜೋಳ ಗರಂ ಆದ ಘಟನೆ ನಡೆಯಿತು.
ಭೋವಿ ಗುರುಪೀಠದಲ್ಲಿ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳ ದರ್ಶನದ ನಂತರ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಾರಜೋಳ, 2018 ರಲ್ಲಿ ತವರು ಜಿಲ್ಲೆಯ ಜನ ಸಿದ್ದರಾಮಯ್ಯ ಅವರನ್ನು ಸೋಲಿಸಿದಾಗ ಬಾಗಲಕೋಟೆಯ ಜನ ಕಮ್ ಬ್ಯಾಕ್ ಸಿದ್ದರಾಮಯ್ಯ ಎಂದು ರಾಜಕೀಯ ಮರುಹುಟ್ಟು ನೀಡಿದರು. ಬಾದಾಮಿಯಲ್ಲಿ ಸಿದ್ದರಾಮಯ್ಯ 1600 ಮತಗಳ ಅಂತರದಿಂದ ಜಯಸಾಧಿಸಿದರು. ನನಗೆ ಗೋಬ್ಯಾಕ್ ಕಾರಜೋಳ ಎಂದು ಹೇಳುವ ಮೊದಲು ನಾನು ಎಲ್ಲಿಂದ ಗೆದ್ದಿದ್ದೆ ಎಂಬುದನ್ನು ಸಿದ್ದರಾಮಯ್ಯ ನೆನಪುಮಾಡಿಕೊಳ್ಳಲಿ ಎಂದರು.
ಬಾಗಲಕೋಟೆ ಜನ ಸಿದ್ದರಾಮಯ್ಯನವರನ್ನು ರಾಜಕೀಯವಾಗಿ ಜೀವಂತವಾಗಿ ಇಟ್ಟಿದ್ದಕ್ಕೆ ಅವರು ಗೆದ್ದು ಸಿಎಂ ಆದರು.
ಇಲ್ಲವಾಗಿದ್ರೆ ಮಾಜಿ ಸಿಎಂ ಸಿದ್ದರಾಮಯ್ಯ ಅಂತ ಬೋರ್ಡ್ ಹಾಕಬೇಕಿತ್ತು. ಬಾಗಲಕೋಟೆ ಜನರ ಋಣ ತೀರಿಸಲು ಸಾಧ್ಯವಾಗದ ಸಿದ್ದರಾಮಯ್ಯ ಬರೀ ಸುಳ್ಳುಗಳ ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದರು.
ಈ ದೇಶದ ಪ್ರಜೆಗಳಿಗೆ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ಚುನಾವಣೆಗೆ ನಿಲ್ಲಲು ಅವಕಾಶವಿದೆ. ನಾನು ವಿಜಯಪುರ, ಚಿತ್ರದುರ್ಗ ಎರಡಕ್ಕೂ ಆಕಾಂಕ್ಷಿ ಇರಲಿಲ್ಲ. ಕೊನೆಯವರೆಗೂ ನಾರಾಯಣಸ್ವಾಮಿ ನನಗೆ ಬೇಡ ಅಂತ ಹೇಳಿದ್ರು. ತಾವು ನಿಲ್ಲಬೇಕು ಎಂದು ವರಿಷ್ಠರು ಸೂಚನೆ ಕೊಟ್ಟಾಗ ಧಿಕ್ಕರಿಸುವ ಶಕ್ತಿ ನನ್ನಲ್ಲಿ ಇರಲಿಲ್ಲ. ನಾನು ಯಾವತ್ತಿಗೂ ಶಿಸ್ತಿನ ಮನುಷ್ಯ. ಪಕ್ಷ ಯಾವುದೇ ಜವಾಬ್ದಾರಿ ವಹಿಸಿದರೂ, ಲಾಭ ನಷ್ಟ ಲೆಕ್ಕ ಹಾಕದೇ ಮಾಡುತ್ತೇನೆ ಎಂದರು.
ಪಕ್ಷದ ಋಣ ನನ್ನ ಮೇಲಿದೆ, ಅದನ್ನು ತೀರಿಸುವ ಕೆಲಸ ಮಾಡ್ತೀನಿ. ಚಿತ್ರದುರ್ಗ ಕ್ಷೇತ್ರದಿಂದ ಗೆಲ್ಲುವೆ, ಅಷ್ಟೇ ಅಲ್ಲದೆ ರಾಜ್ಯದ 28 ಸ್ಥಾನಗಳನ್ನು ನಾವು ಗೆದ್ದು ಮತ್ತೆ ಮೋದಿಯವರನ್ನು ಪ್ರಧಾನಿಯನ್ನಾಗಿಸುತ್ತೇವೆ ಎಂದರು.
ದರ್ಶನಾಶೀರ್ವಾದ:
ಇದಕ್ಕೂ ಮೊದಲು ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳ ದರ್ಶನ ಮಾಡಿದ ಕಾರಜೋಳ ಆಶೀರ್ವಾದ ಪಡೆದರು. ಮೊದಲ ದಿನವೇ ಎಲ್ಲಾ ಮಠಗಳ ಭೇಟಿ ಕಾರ್ಯಕ್ರಮ ಹಾಕಿಕೊಂಡಿದ್ದೆ. ಅಂದು ಭೋವಿ ಶ್ರೀಗಳು ಊರಲ್ಲಿ ಇರಲ್ಲ ಅಂತ ಕರೆ ಮಾಡಿ ಹೇಳಿದರು.
ಗುರುವಾರ ಕರೆ ಮಾಡಿದಾಗ ಬೆಳಿಗ್ಗೆ ತಿಂಡಿಗೆ ಬನ್ನಿ ಎಂದು ಅಹ್ವಾನ ನೀಡಿದ ಮೇರೆ ಬಂದಿರುವುದಾಗಿ ಕಾರಜೋಳ ಹೇಳಿದರು.
ಲೋಕಸಭೆಗೆ ಭೋವಿ ಸಮುದಾಯಕ್ಕೆ ಟಿಕೆಟ್ ನೀಡದೇ ಇರುವ ಬಗ್ಗೆ ಅಸಮಧಾನ ಗೊಂಡಿದ್ದ ಇಮ್ಮಡಿ ಶ್ರೀಗಳಿಗೆ ಸಮಜಾಯಿಷಿ ನೀಡಿದ ಕಾರಜೋಳ, ರಾಜಕಾರಣ ಒಂದು ದಿನಕ್ಕೆ ಮುಗಿಯುವುದಲ್ಲ. ಮುಂದೆ ಹತ್ತು ಹಲವಾರು ಅವಕಾಶಗಳು ಇರುತ್ತವೆ.
ಬಿಜೆಪಿಯಿಂದ ಎಂಎಲ್ ಎ ಟಿಕೆಟ್ ಭೋವಿ ಸಮುದಾಯಕ್ಕೆ ಹೆಚ್ಚು ಕೊಟ್ಟಿದ್ದೀವಿ ಎಂದರು.
ಮಾಜಿ ಶಾಸಕ ಸೊಗಡು ಶಿವಣ್ಣ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಳಾದ ಸುರೇಶ್ ಸಿದ್ದಾಪುರ, ಜಿ .ಎಸ್ ಸಂಪತ್ ಕುಮಾರ್, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ರೈತ ಮೊರ್ಚಾ ಮಾಜಿ ಜಿಲ್ಲಾಧ್ಯಕ್ಷ ಡಿ ರಮೇಶ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತಿ ಇದ್ದರು