ಸರ್ಕಾರದ ವಿರುದ್ಧ ಗೌರ್ನರ್‌ ಲೋಕಾಯುಕ್ತ ತನಿಖೆ ದಾಳ - ಮುಖ್ಯ ಕಾರ್ಯದರ್ಶಿಗೆ ರಾಜ್ಯಪಾಲರ ಪತ್ರ

| Published : Sep 17 2024, 07:18 AM IST

thavar chand gehlot

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಲೋಕಾಯುಕ್ತ ಸಂಸ್ಥೆಯು ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸಲ್ಲಿಸಿರುವ ಪ್ರಸ್ತಾವಗಳ ಮಾಹಿತಿಯನ್ನು ಒದಗಿಸುವಂತೆ ರಾಜ್ಯಪಾಲರು ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ.  

ಬೆಂಗಳೂರು   :  ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಇದುವರೆಗೆ ಸರ್ಕಾರಿ ಅಧಿಕಾರಿ/ನೌಕರರ ವಿರುದ್ಧ ಲೋಕಾಯುಕ್ತ ಸಂಸ್ಥೆಯು ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸಲ್ಲಿಸಿರುವ ಪ್ರಸ್ತಾವಗಳ ಸಮಗ್ರ ಮಾಹಿತಿ ಒದಗಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಪತ್ರ ಬರೆದಿದ್ದಾರೆ.

ಈ ಸಂಬಂಧ ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿರುವ ರಾಜ್ಯಪಾಲರು, ‘ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳನ್ನು ಅವಲೋಕಿಸಿದಾಗ, ಲೋಕಾಯುಕ್ತ ಸಂಸ್ಥೆಯು ಪ್ರಾಸಿಕ್ಯೂಷನ್‌ಗೆ ಕೋರಿದ ಕೆಲವು ಪ್ರಕರಣಗಳಲ್ಲಿ ನಿರ್ಧಾರ ತೆಗೆದುಕೊಂಡಿರುವುದನ್ನು ಗಮನಿಸಿದ್ದೇನೆ. ಕೆಲವು ಪ್ರಕರಣಗಳಲ್ಲಿನ ಪ್ರಸ್ತಾವಗಳನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ. ಇನ್ನು ಕೆಲವು ಪ್ರಕರಣಗಳಲ್ಲಿ ಮಂಜೂರಾತಿ ನೀಡಲಾಗಿದೆ. ಮತ್ತೆ ಕೆಲವು ಪ್ರಕರಣಗಳಲ್ಲಿ ಎಚ್ಚರಿಕೆ ನೀಡಿ ತಿರಸ್ಕರಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಲೋಕಾಯುಕ್ತದಿಂದ ಸ್ವೀಕೃತವಾದ ಪ್ರಕರಣಗಳಲ್ಲಿ ಯಾವ ಆಧಾರದಲ್ಲಿ ಸಚಿವ ಸಂಪುಟ ಸಭೆ ತೀರ್ಮಾನಗಳನ್ನು ತೆಗೆದುಕೊಳ್ಳುತ್ತದೆ ಎಂಬ ವಿವರಗಳನ್ನು ಪಡೆಯಲು ನಾನು ಇಚ್ಛಿಸುತ್ತೇನೆ. ಹೀಗಾಗಿ, ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ 2023ರ ಮೇ 20ರಿಂದ ಇಲ್ಲಿಯವರೆಗೆ ಲೋಕಾಯುಕ್ತದಿಂದ ರಾಜ್ಯ ಸರ್ಕಾರವು ಸ್ವೀಕರಿಸಿದ ಎಲ್ಲ ಪ್ರಸ್ತಾವಗಳ ಸಮಗ್ರ ವಿವರಗಳನ್ನು ನಾನು ನೀಡಿರುವ ನಮೂನೆಯಲ್ಲಿ ಒದಗಿಸಬೇಕು’ ಎಂದು ರಾಜ್ಯಪಾಲರು ನಿರ್ದೇಶನ ನೀಡಿದ್ದಾರೆ.

 ಮಾಹಿತಿಗೆ ಎಲ್ಲ ಇಲಾಖೆಗಳಿಗೆ ಸರ್ಕಾರದ ಟಿಪ್ಪಣಿ: 

ರಾಜ್ಯಪಾಲರ ಪತ್ರದ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ, ರಾಜ್ಯಪಾಲರ ನಿರ್ದೇಶನವನ್ನು ತುರ್ತು ಎಂದು ಪರಿಗಣಿಸಿ ತಮ್ಮ ಇಲಾಖೆಗಳಲ್ಲಿ ಯಾವ್ಯಾವ ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ 2023ರ ಮೇ 20ರಿಂದ ಇಲ್ಲಿಯವರೆಗೆ ಲೋಕಾಯುಕ್ತದಿಂದ ಬಂದಿರುವ ಪ್ರಸ್ತಾವಗಳ ಸಮಗ್ರ ಮಾಹಿತಿ ಒದಗಿಸುವಂತೆ ಎಲ್ಲ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಗಳಿಗೆ ಟಿಪ್ಪಣಿ ಹೊರಡಿಸಿದೆ.

 ಸಂಘರ್ಷ ತೀವ್ರ ಸಾಧ್ಯತೆ:  ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ತರಾತುರಿಯಲ್ಲಿ ಅನುಮತಿ ನೀಡಿರುವ ರಾಜ್ಯಪಾಲರು ಬಿಜೆಪಿ, ಜೆಡಿಎಸ್‌ನ ವಿವಿಧ ನಾಯಕರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಲೋಕಾಯುಕ್ತ ಸಂಸ್ಥೆ ಈ ಹಿಂದೆಯೇ ಪ್ರಸ್ತಾವನೆ ಸಲ್ಲಿಸಿದ್ದರೂ ಪರಿಗಣಿಸಿಲ್ಲ ಎಂದು ಆಡಳಿತ ಪಕ್ಷ ಕಾಂಗ್ರೆಸ್‌ ನಾಯಕರು ಆರೋಪಿಸಿ ರಾಜಭವನ ಚಲೋ ನಡೆಸಿದ್ದರು. ಇದರ ಬೆನ್ನಲ್ಲೇ ರಾಜ್ಯಪಾಲರು ಸರ್ಕಾರದಿಂದ ಈ ಮಾಹಿತಿ ಕೋರಿರುವುದು ತೀವ್ರ ಕುತೂಹಲ ಮೂಡಿಸಿದೆ. ತನ್ಮೂಲಕ ಈಗಾಗಲೇ ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಉದ್ಭವಿಸಿರುವ ಸಂಘರ್ಷ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.