ಸಿ.ಟಿ.ರವಿ ಬಂಧಿಸಿದ್ದ ಪೊಲೀಸರ ವಿರುದ್ಧ ಕ್ರಮಕ್ಕೆ ಗೌರ್‍ನರ್‌ ಸೂಚನೆ? - ಸಿಎಂಗೆ ಬರೆದ ಪತ್ರ ವೈರಲ್‌

| Published : Jan 09 2025, 08:14 AM IST

Thawar Chand gehlot
ಸಿ.ಟಿ.ರವಿ ಬಂಧಿಸಿದ್ದ ಪೊಲೀಸರ ವಿರುದ್ಧ ಕ್ರಮಕ್ಕೆ ಗೌರ್‍ನರ್‌ ಸೂಚನೆ? - ಸಿಎಂಗೆ ಬರೆದ ಪತ್ರ ವೈರಲ್‌
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಬಂಧನ ಪ್ರಕರಣ ಸಂಬಂಧ ಅಮಾನವೀಯವಾಗಿ ನಡೆಸಿಕೊಂಡ ಪೊಲೀಸರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಬೆಂಗಳೂರು : ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಬಂಧನ ಪ್ರಕರಣ ಸಂಬಂಧ ಅಮಾನವೀಯವಾಗಿ ನಡೆಸಿಕೊಂಡ ಪೊಲೀಸರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ರಾಜ್ಯಪಾಲ ಥಾವರ್‌ ಚಂದ್ ಗೆಹಲೋತ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿದ್ದಾರೆ ಎನ್ನಲಾದ ಪತ್ರವೊಂದು ವೈರಲ್ ಆಗಿದೆ. ಆದರೆ, ಈ ಪತ್ರದ ಬಗ್ಗೆ ಸರ್ಕಾರದ ಮೂಲಗಳು ಖಚಿತಪಡಿಸಿಲ್ಲ.

ಪ್ರಕರಣವು ಜನಪ್ರತಿನಿಧಿಗೆ ಸಂಬಂಧಿಸಿದ ವಿಷಯವಾಗಿದ್ದು, ಮುಖ್ಯಮಂತ್ರಿಗಳ ಮಧ್ಯಪ್ರವೇಶ ಅಗತ್ಯವಾಗಿದೆ. ಪೊಲೀಸರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ರಾಜಭವನಕ್ಕೆ ಆಗಮಿಸಿದ್ದ ಸಿ.ಟಿ.ರವಿ ನೇತೃತ್ವದ ನಿಯೋಗ ಲಿಖಿತ ದೂರು ಸಲ್ಲಿಸಿದ್ದು ಜನಪ್ರತಿನಿಧಿಯಾಗಿರುವ ನನ್ನನ್ನು ಅತ್ಯಂತ ಅಗೌರವ ಮತ್ತು ಅಮಾನವೀಯವಾಗಿ ಪೊಲೀಸರು ನಡೆಸಿಕೊಂಡಿದ್ದಾರೆ. ಅವರನ್ನು ರಾಜ್ಯ ಸರ್ಕಾರ ರಕ್ಷಣೆ ಮಾಡುವ ಕೆಲಸ ಮಾಡುತ್ತಿದೆ ಎಂದು ದೂರು ನೀಡಿದ್ದಾರೆ. ದೂರಿನ ಪ್ರತಿಯನ್ನು ತಮಗೆ ಕಳುಹಿಸಿಕೊಡಲಾಗಿದ್ದು, ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಬೆಳಗಾವಿ ಅಧಿವೇಶನದ ವೇಳೆ ವಿಧಾನಪರಿಷತ್‌ನಲ್ಲಿ ನಡೆದ ಘಟನೆ ಬಳಿಕ ಸಿ.ಟಿ.ರವಿ ಅವರನ್ನು ಬಂಧಿಸಿದ ನಂತರ ಪೊಲೀಸರು ಒಂದು ರಾತ್ರಿ ಅಪಾಯಕಾರಿ ಪ್ರದೇಶದಲ್ಲಿ ತಿರುಗಾಡಿಸಿದ್ದಾರೆ. ಎಲ್ಲಿಗೆ ಕರೆದುಕೊಂಡು ಹೋಗಲಾಗುತ್ತಿದೆ ಎಂಬುದರ ಸಣ್ಣ ಸುಳಿವನ್ನೂ ನೀಡಲಿಲ್ಲ. ಪ್ರಭಾವಿ ಸಚಿವರ ನಿರ್ದೇಶನದ ಮೇರೆಗೆ ಪೊಲೀಸರು ಕಾರ್ಯ ನಿರ್ವಹಿಸಿದ್ದಾರೆ. ದೈಹಿಕ ಹಾಗೂ ಮಾನಸಿಕವಾಗಿಯೂ ಹಿಂಸೆ ನೀಡಿ ಹಲ್ಲೆ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹೀಗಾಗಿ ಪ್ರಕರಣ ಗಂಭೀರ ಸ್ವರೂಪದ್ದಾಗಿರುವುದರಿಂದ ಕ್ರಮ ಜರುಗಿಸಬೇಕು ಎಂದು ರಾಜ್ಯಪಾಲರು ಹೇಳಿದ್ದಾರೆ ಎನ್ನಲಾಗಿದೆ.

- ಸಿ.ಟಿ. ರವಿ ಬಂಧನ ವೇಳೆ ಅಮಾನವೀಯವಾಗಿ ನಡೆಸಿಕೊಂಡ ಪೊಲೀಸರ ಬಗ್ಗೆ ಪತ್ರದಲ್ಲಿ ಪ್ರಸ್ತಾಪ

- ಈ ವಿಷಯದಲ್ಲಿ ಸಿಎಂ ಮಧ್ಯಪ್ರವೇಶ ಅಗತ್ಯ. ಪೊಲೀಸರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು

- ರಾಜಭವನಕ್ಕೆ ಆಗಮಿಸಿ ಸಿ.ಟಿ. ರವಿ ಅವರು ಲಿಖಿತ ದೂರು ನೀಡಿದ್ದಾರೆ. ಅದರ ಪ್ರತಿ ಕಳುಹಿಸಿದ್ದೇನೆ

- ರಾಜ್ಯಪಾಲರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬಂದಿದೆ ಎಂದು ಪ್ರತಿ ವೈರಲ್‌

- ಆದರೆ ಇಂತಹ ಪತ್ರ ಬಂದಿದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸುತ್ತಿಲ್ಲ ಸರ್ಕಾರದ ಮೂಲಗಳು