ಸಾರಾಂಶ
ಬೆಂಗಳೂರು : ಹಿರಿಯ ವಿಮರ್ಶಕ, ವಿದ್ವಾಂಸ ಪ್ರೊ.ಎಲ್.ಎಸ್.ಶೇಷಗಿರಿರಾವ್ ಅವರ ಜನ್ಮ ಶತಮಾನೋತ್ಸವವನ್ನು ಸರ್ಕಾರದಿಂದ ಆಚರಣೆ ಮಾಡಬೇಕಿತ್ತು. ಆದರೆ ಇದು ಆಗದಿರುವುದು ವಿಷಾದನೀಯ ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ಬೇಸರ ವ್ಯಕ್ತಪಡಿಸಿದರು.
ಕನ್ನಡ ಗೆಳೆಯರ ಬಳಗದಿಂದ ಜೆ.ಸಿ.ರಸ್ತೆಯ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ‘ಪ್ರೊ.ಎಲ್.ಎಸ್.ಶೇಷಗಿರಿರಾವ್ ಜನ್ಮ ಶತಮಾನೋತ್ಸವ ಸಮಾರೋಪ, ಎಲ್.ಎಸ್.ಎಸ್.ಜಾಲತಾಣ ಹಾಗೂ ಕನ್ನಡ ವಿಶೇಷ ಸಾಹಿತ್ಯ ಸಿರಿ ಗ್ರಂಥ ಲೋಕರ್ಪಣೆ, ವಿವಿಧ ಕ್ಷೇತ್ರಗಳ ಸಾಧಕರಿಗೆ ಜನ್ಮಶತಮಾನೋತ್ಸವ ಗೌರವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಲ್‌ಎಸ್‌ಎಸ್ ಅವರು ಸಾಹಿತ್ಯದ ಚರ್ಕವರ್ತಿ ಆಗಿದ್ದು, ಜ್ಞಾನದ ಮಹರ್ಷಿಯಾಗಿದ್ದರು. ಇವರು ನಮ್ಮ ಜೊತೆ ಇದ್ದದ್ದೇ ಸೌಭಾಗ್ಯವಾಗಿದೆ. ಆದರೆ ಇದನ್ನು ನಾಡಿನ ಸರ್ಕಾರ ಗುರುತಿಸದೇ ಇರುವುದು ದುರಂತವಾಗಿದೆ. ಈ ಕಾರ್ಯಕ್ರಮವನ್ನು ನೋಡಿ ನನಗೆ ಪಶ್ಚಾತ್ತಾಪ ಆಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಸಮಾಲೋಚನೆ ನಡೆಸಿ ಸರ್ಕಾರದಿಂದ ಅಧಿಕೃತವಾಗಿ ಸಮಾರಂಭ ಆಯೋಜಿಸುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ವಿವಿಧ ಕ್ಷೇತ್ರಗಳ ಸಾಧಕರಾದ ಡಾ.ಸಿ.ಎನ್.ರಾಮಚಂದ್ರನ್, ಡಾ.ದೊಡ್ಡ ರಂಗೇಗೌಡ, ನಾಗಮಣಿ ಎಸ್. ರಾವ್, ಡಾ.ವೂಡೇ ಪಿ.ಕೃಷ್ಣ, ಡಾ.ಬಾಬು ಕೃಷ್ಣಮೂರ್ತಿ, ಡಾ.ಪ್ರಧಾನ ಗುರುದತ್ತ, ವ.ಚ.ಚನ್ನೇಗೌಡ, ಆರ್.ರಾಮಕೃಷ್ಣ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ನಾಡೋಜ ಡಾ.ಗೊ.ರು.ಚನ್ನಬಸಪ್ಪ, ಕರ್ನಾಟಕ ಸಂಸ್ಕೃತ ವಿವಿ ಮಾಜಿ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ, ಭಾರತಿ ಶೇಷಗಿರಿರಾವ್, ಬಳಗದ ರಾ.ನಂ.ಚಂದ್ರಶೇಖರ್ ಉಪಸ್ಥಿತರಿದ್ದರು.