ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುವ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರು ಥೂ ಅಂತ ಉಗಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್‌ಗೆ ಜನರು ತಕ್ಕಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.ಬೆಂಗಳೂರಿನಿಂದ ರಾ.ಹೆ.44ರ ಮೂಲಕ ರಾಯಚೂರು ಜಿಲ್ಲೆಗೆ ಪ್ರಯಾಣ ಬೆಳೆಸುವ ಮಾರ್ಗದಲ್ಲಿ ಬಾಗೇಪಲ್ಲಿ ತಾಲೂಕಿನ ಪರಗೋಡು ಗ್ರಾಮದ ಸಮೀಪದಲ್ಲಿರುವ ತಮ್ಮ ಬೆಂಬಲಿಗನ ಕೋಮಲ್ ಗಾರ್ಡನ್ ಹೋಟಲ್‍ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಪತ್ರಕರ್ತರ ಜತೆ ಮಾತನಾಡಿದರು.
ಶಾಲಾ ಮಕ್ಕಳಿಗೆ ಬಸ್ ಸಿಗುತ್ತಿಲ್ಲಹೆಣ್ಣು ಮಕ್ಕಳಿಗೆ ಉಚಿತ ಬಸ್ ಅಂತಾರೆ ಆದರೆ ಶಾಲಾ ಮಕ್ಕಳು ಓಡಾಡಲು ಸಹ ಬಸ್ ಸಿಗುತ್ತಿಲ್ಲ, ಬಸ್ ಮಾರ್ಗಗಳನ್ನು ಕಡಿತಗೊಳಿಸಿದ್ದಾರೆ, ಎಲ್ಲಾ ರೀತಿಯಲ್ಲಿ ತೆರಿಗೆ ಹೆಚ್ಚಳ ಮಾಡಿ ಒಂದು ಕೈಯಲ್ಲಿ ಕೊಟ್ಟು ಮೊತ್ತೊಂದು ಕೈಯಲ್ಲಿ ಜನರಿಂದ ಕಿತ್ತುಕೊಳ್ಳುವುದೇ ರಾಜ್ಯ ಸರ್ಕಾರದ ಗ್ಯಾರಂಟಿಗಳು ಎಂದು ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಬಿಜೆಪಿ ಪಾಲಿಗೆ ಬಸವನಗೌಡ ಪಾಟೀಲ್ ಯತ್ನಾಳ್ ರವರು ಬಿಸಿತುಪ್ಪವಾಗಿದ್ದಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಏನು ಇಲ್ಲ ಬಿಸಿತುಪ್ಪವನ್ನು ಈಗಾಗಲೇ ಕರಗಿಸಲಾಗಿದೆ. ಯತ್ನಳ್ ರವರು ಮೋದಿ ನಾಯಕತ್ವದ ಮೇಲೆ ವಿಶ್ವಾಸವಿಟ್ಟು ಸಮಾಧಾನದಿಂದ ಇದ್ದಾರೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಶ್ರಮಿಸುತ್ತಿದ್ದಾರೆ ಎಂದರು.ಶೆಟ್ಟರ್ ಆಗಮನದಿಂದ ಆನೆ ಬಲ
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರವರು ಮತ್ತೇ ಸ್ವಪಕ್ಷಕ್ಕೆ ಮರಳಿರುವುದು ಬಿಜೆಪಿ ಪಕ್ಷಕ್ಕೆ ಆನೆ ಬಲಬಂತಾಗಿದೆ. ಶೆಟ್ಟರ್ ರವರು ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿಬೆಳೆಸಿದವರಲ್ಲಿ ಪ್ರಮುಖ ನಾಯಕರು. ಮೋದಿ ರವರ ನಾಯಕತ್ವ ಹಾಗೂ ಪಕ್ಷದ ಸಿದ್ದಾಂತಗಳನ್ನು ಮೆಚ್ಚಿ ಇನ್ನೂ ಅನೇಕರು ಪಕ್ಷಕ್ಕೆ ಸೇರುವ ಸಾಧ್ಯತೆ ಇದೆ ಎಂದರು.ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರೆಯೇ ಎಂಬ ಪ್ರಶ್ನೆಗೆ, ಈ ಬಗ್ಗೆ ಪಕ್ಷದಲ್ಲಿ ಯಾವುದೇ ತೀರ್ಮಾನವಾಗಲಿ ಚರ್ಚೆಯಾಗಲಿ ಇನ್ನೂ ಆಗಿಲ್ಲ, ಈ ಸಂಬಂಧ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಚರ್ಚೆ ಮಾಡಿ ತೀರ್ಮಾನಿಸಲಿದ್ದಾರೆ ಎಂದರು.
ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿಲ್ಲಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬಿಜೆಪಿ ಶಕ್ತಿ ಕಡಿಮೆ ಇದೆ. ಇಲ್ಲಿ ಶಕ್ತಿ ತುಂಬುವ ಕೆಲಸ ಮಾಡಲಾಗುವುದು ಅಲ್ಲದೆ ಮುಂದಿನ ದಿನಗಳಲ್ಲಿ ಈ ಜಿಲ್ಲೆಗಳಲ್ಲಿ ಪಕ್ಷದ ಶಾಸಕರನ್ನು ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಳ್ಳುವ ಕೆಲಸವನ್ನು ಮಾಡಲಾಗುವುದು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಕೋಮಲ್ ಗಾರ್ಡನ್ ಹೋಟಲ್ ಮಾಲೀಕ ಗೂಳೂರು ಬಾಬಾಜಾನ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ರಾಜ್ಯ ಕಾರ್ಯದರ್ಶಿ ಶರಣು ತಳ್ಳಕೆರೆ ಮತ್ತಿತರರು ಇದ್ದರು.