ನಿಮ್ಮ ಮನೆ ನೋಡಿಕೊಳ್ಳಿ: ಪಾಕ್‌ಗೆ ಕೇಜ್ರಿ ತಿರುಗೇಟು

| Published : May 26 2024, 01:30 AM IST / Updated: May 26 2024, 04:26 AM IST

Arvind Kejriwal

ಸಾರಾಂಶ

‘ಭಾರತದಲ್ಲಿ ತೀವ್ರವಾದವನ್ನು ಶಾಂತಿ, ಸೌಹಾರ್ದತೆ ಸೋಲಿಸಲಿ’ ಎಂದು ಭಾರತದ ವಿಪಕ್ಷ ನಾಯಕರನ್ನು ಉದ್ದೇಶಿಸಿ ಟ್ವೀಟ್‌ ಮಾಡಿದ್ದ ಪಾಕಿಸ್ತಾನಿ ರಾಜಕಾರಣಿ ಫವಾದ್‌ ಹುಸೇನ್‌ ಚೌಧರಿ ಅವರಿಗೆ ದೆಹಲಿ ಸಿಎಂ ಹಾಗೂ ಆಪ್‌ ನಾಯಕ ಅರವಿಂದ ಕೇಜ್ರಿವಾಲ್‌ ತಿರುಗೇಟು ನೀಡಿದ್ದಾರೆ.  

ನವದೆಹಲಿ: ‘ಭಾರತದಲ್ಲಿ ತೀವ್ರವಾದವನ್ನು ಶಾಂತಿ, ಸೌಹಾರ್ದತೆ ಸೋಲಿಸಲಿ’ ಎಂದು ಭಾರತದ ವಿಪಕ್ಷ ನಾಯಕರನ್ನು ಉದ್ದೇಶಿಸಿ ಟ್ವೀಟ್‌ ಮಾಡಿದ್ದ ಪಾಕಿಸ್ತಾನಿ ರಾಜಕಾರಣಿ ಫವಾದ್‌ ಹುಸೇನ್‌ ಚೌಧರಿ ಅವರಿಗೆ ದೆಹಲಿ ಸಿಎಂ ಹಾಗೂ ಆಪ್‌ ನಾಯಕ ಅರವಿಂದ ಕೇಜ್ರಿವಾಲ್‌ ತಿರುಗೇಟು ನೀಡಿದ್ದಾರೆ. ‘ನಿಮ್ಮ ಮನೆ ನೋಡಿಕೊಳ್ಳಿ’ ಎಂದು ಕೇಜ್ರಿವಾಲ್‌ ಗುಡುಗಿದ್ದಾರೆ.ಕೇಜ್ರಿವಾಲ್‌ರನ್ನು ಉದ್ದೇಶಿಸಿ ಎಕ್ಸ್‌ನಲ್ಲಿ (ಟ್ವೀಟರ್‌ನಲ್ಲಿ) ಪೋಸ್ಟ್‌ ಮಾಡಿದ್ದ ಪಾಕ್‌ ನಾಯಕ ಫವಾದ್ , ಶಾಂತಿ ಮತ್ತು ಸಾಮರಸ್ಯವು ದ್ವೇಷ ಮತ್ತು ತೀವ್ರವಾದ ಶಕ್ತಿಗಳನ್ನು ಸೋಲಿಸಲಿ ಎಂದು ಬರೆದಿದ್ದರು.

ಇದಕ್ಕೆ ಶನಿವಾರ ಕುಟುಂಬ ಸಮೇತ ಮತ ಚಲಾಯಿಸಿದ ಬಳಿಕ ತಿರುಗೇಟು ನೀಡಿದ ಅರವಿಂದ್ ಕೇಜ್ರಿವಾಲ್, ‘ ಫವಾದ್ ಹುಸೇನ್ ಭಾರತದ ಆಂತರಿಕ ವಿಷಯದಲ್ಲಿ ಮೂಗು ತೂರಿಸುವ ಬದಲು ತಮ್ಮ ದೇಶದ ಬಡ ರಾಜ್ಯಗಳ ಬಗ್ಗೆ ಗಮನ ಹರಿಸಲಿ. ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ನಾವು ಸಂಪೂರ್ಣವಾಗಿ ಸಮರ್ಥರಾಗಿದ್ದೇವೆ. ಆದರೆ ಪಾಕಿಸ್ತಾನದ ಪರಿಸ್ಥಿತಿ ಈಗ ತೀರಾ ಕಳಪೆಯಾಗಿದೆ. ನೀವು ನಿಮ್ಮ ದೇಶದ ಬಗ್ಗೆ ಕಾಳಜಿ ವಹಿಸಬೇಕು.’ ಎಂದು ತಿರುಗೇಟು ನೀಡಿದರು.

‘ಚುನಾವಣಾ ವಿಷಯಗಳು ನಮ್ಮ ಆಂತರಿಕ ವಿಷಯವಾಗಿದೆ. ಭಯೋತ್ಪಾದಕತೆಯ ದೊಡ್ಡ ಪ್ರಾಯೋಜಕತ್ವ ಹೊಂದಿರುವ ದೇಶ ಅದರಲ್ಲಿ ಹಸ್ತಕ್ಷೇಪ ಮಾಡುವುದನ್ನು ಸಹಿಸುವುದಿಲ್ಲ’ ಎಂದು ಇದೇ ವೇಳೆ ಟ್ವೀಟರ್‌ನಲ್ಲೂ ಕೇಜ್ರಿವಾಲ್‌ ಖಡಕ್‌ ಆಗಿ ಹೇಳಿದ್ದಾರೆ.

ಕೇಜ್ರಿಗೆ ಬಿಜೆಪಿ ಟಾಂಗ್‌: ಆದರೆ ಇತ್ತ ಫವಾದ್ ಹೇಳಿಕೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಕಿರಣ್ ರಿಜಿಜು ಕೂಡ ಪ್ರತಿಕ್ರಿಯಿಸಿದ್ದು,‘ ರಾಹುಲ್ ಗಾಂಧಿಗೆ ಮಾತ್ರವಲ್ಲ. ಅರವಿಂದ್‌ ಕೇಜ್ರಿವಾಲ್‌ಗೆ ಕೂಡ ಪಾಕಿಸ್ತಾನದಿಂದ ದೊಡ್ಡ ಮಟ್ಟಿಗಿನ ಬೆಂಬಲವಿದೆ’ ಎಂದು ವ್ಯಂಗ್ಯವಾಡಿದ್ದಾರೆ.