ಸಾರಾಂಶ
ಕೆರಗೋಡು ಗ್ರಾಮದಲ್ಲಿ ಉಂಟಾಗಿರುವ ಹನುಮಧ್ವಜ ಘಟನೆ ವಿಚಾರಕ್ಕೆ ಯಾರು ರಾಜಕಾರಣ ಬೆರಸುತ್ತಿದ್ದಾರೋ ಗೊತ್ತಿಲ್ಲ. ಅಲ್ಲಿ ಯಾರು ಮಧ್ಯ ಪ್ರವೇಶ ಮಾಡಿದ್ದಾರೋ ಗೊತ್ತಿಲ್ಲ, ಪಂಚಾಯ್ತಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಧ್ವಜ ಹಾರಿಸಬಹುದು. ಅದನ್ನು ಹೊರತು ಪಡಿಸಿ ಸರ್ಕಾರಿ ಜಾಗದಲ್ಲಿ ಬೇರೆ ಧ್ವಜವನ್ನು ಹಾರಿಸುವಂತಿಲ್ಲ.
ಕನ್ನಡಪ್ರಭ ವಾರ್ತೆ ಮಂಡ್ಯ
ಕೆರಗೋಡು ಗ್ರಾಮದಲ್ಲಿ ಉಂಟಾಗಿರುವ ಹನುಮಧ್ವಜ ಹಾರಾಟ ವಿವಾದದಲ್ಲಿ ರಾಜಕೀಯ ನಡಿತಿರೋದು ನಿಜ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ .ಚಲುವರಾಯಸ್ವಾಮಿ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆ ವಿಚಾರಕ್ಕೆ ಯಾರು ರಾಜಕಾರಣ ಬೆರಸುತ್ತಿದ್ದಾರೋ ಗೊತ್ತಿಲ್ಲ. ಅಲ್ಲಿ ಯಾರು ಮಧ್ಯ ಪ್ರವೇಶ ಮಾಡಿದ್ದಾರೋ ಗೊತ್ತಿಲ್ಲ ಎಂದರು.
ಪಂಚಾಯ್ತಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಧ್ವಜ ಹಾರಿಸಬಹುದು. ಅದನ್ನು ಹೊರತು ಪಡಿಸಿ ಸರ್ಕಾರಿ ಜಾಗದಲ್ಲಿ ಬೇರೆ ಧ್ವಜವನ್ನು ಹಾರಿಸುವಂತಿಲ್ಲ. ತ್ರಿವರ್ಣ ಧ್ವಜಕ್ಕೆ ಅನುಮತಿ ಪಡೆದು ಈಗ ಬೇರೆ ಧ್ವಜ ಹಾರಿಸೋದು ತಪ್ಪು ಎಂದರು.ಈಗ ಸರ್ಕಾರಿ ಜಾಗದಲ್ಲಿ ಧ್ವಜ ಹಾರಿಸಿರುವವರು ನಾಳೆ ಬೆಳಗ್ಗೆ ಡಿಸಿ ಕಚೇರಿ ಎದುರು ಹಾರಿಸ್ತೀನಿ ಅಂತಾರೆ. ಇದಕ್ಕೆ ಅವಕಾಶ ಕೊಡಲು ಆಗುತ್ತಾ. ಒಂದು ಕಡೆ ಅವಕಾಶ ಕೊಟ್ಟರೆ ಎಲ್ಲಾ ಕಡೆ ಕೇಳ್ತಾರೆ ಎಂದರು.
ಸ್ಥಳೀಯ ಯುವಕರು ಒಳ್ಳೆಯವರೇ. ಆದರೆ, ಅವರನ್ನು ದಾರಿ ತಪ್ಪಿಸಲಾಗುತ್ತಿದೆ. ಧ್ವಜ ಹಾರಾಟ ವಿಚಾರವಾಗಿ ನಾವು ಎಲ್ಲರ ಜೊತೆ ಕೂತು ಮಾತನಾಡುತ್ತೇನೆ. ಮತ್ತೊಂದು ಕಡೆ ಹನುಮ ಧ್ವಜ ಕಟ್ಟಲು ಅವಕಾಶ ಮಾಡಿಕೊಡೋಣ. ಖಾಸಗಿ ಜಾಗದಲ್ಲಿ ಅಥವಾ ದೇವಾಲಯದ ಮುಂದೆ ಹಾಕಲು ಅವಕಾಶ ಕೊಡೋಣ ಎಂದರು.ನಾನು ಕೂಡ ರಾಮನ ಭಕ್ತ, ನಮ್ಮ ಮನೆ ದೇವರು ವಿಷ್ಣು. ನಾವು ಯಾವುದೇ ಧ್ವಜದ ವಿರೋಧಿಗಳಲ್ಲ. ಈ ವಿಚಾರದಲ್ಲಿ ಇದರಲ್ಲಿ ನಾವಾಗಲಿ, ಸ್ಥಳೀಯ ಶಾಸಕರಾಗಲಿ ರಾಜಕೀಯ ಮಾಡುತ್ತಿಲ್ಲ. ಸಂವಿಧಾನ ವಿರುದ್ಧವಾಗಿರುವುದರಿಂದ ಧ್ವಜ ತೆರವು ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಗ್ರಾಮ ಪಂಚಾಯ್ತಿಯಲ್ಲಿ ರಾಷ್ಟ್ರಧ್ವಜ, ನಾಡಧ್ವಜ ಹಾರಾಟಕ್ಕೆ ಮಾತ್ರ ಅನುಮತಿ ಪಡೆಯಲಾಗಿದೆ. ಹನುಮಧ್ವಜ ಹಾರಿಸಲು ಅನುಮೋದನೆ ನೀಡಿದ್ದರೆ ಅದು ತಪ್ಪು. ಅವರ ವಿರುದ್ಧವೂ ಕ್ರಮ ಆಗುತ್ತದೆ ಎಂದರು.