ಹರ್ಯಾಣ ಚುನಾವಣೆ : ಭರವಸೆ ನೀಡಿದ ಬಿಜೆಪಿ - ಕಾಂಗ್ರೆಸ್‌ ರೀತಿಯಲ್ಲೇ ಉಚಿತ ಗ್ಯಾರಂಟಿ ಯೋಜನೆ

| Published : Sep 20 2024, 01:40 AM IST / Updated: Sep 20 2024, 04:59 AM IST

ಸಾರಾಂಶ

ಹರ್ಯಾಣದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬರಲು ಬಿಜೆಪಿ ಹಲವು ಉಚಿತ ಭರವಸೆಗಳನ್ನು ಘೋಷಿಸಿದೆ. ಮಹಿಳೆಯರಿಗೆ ಮಾಸಾಶನ, ಸಿಲಿಂಡರ್ ಸಬ್ಸಿಡಿ, ಉಚಿತ ಸ್ಕೂಟಿಗಳು ಮತ್ತು ಉಚಿತ ಆರೋಗ್ಯ ಸೇವೆ ಇವುಗಳಲ್ಲಿ ಸೇರಿವೆ.

 ಚಂಡೀಗಢ :  ಹರ್ಯಾಣದಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಬಿಜೆಪಿ ಸತತ 3ನೇ ಬಾರಿ ಶತಾಯ ಗತಾಯ ಅಧಿಕಾರಕ್ಕೆ ಏರಲು ಕಾಂಗ್ರೆಸ್‌ ರೀತಿಯಲ್ಲೇ ಉಚಿತ ಗ್ಯಾರಂಟಿ ಯೋಜನೆಗಳನ್ನು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಕರ್ನಾಟಕದ ‘ಗೃಹಲಕ್ಷ್ಮಿ’ ಮಾದರಿಯಲ್ಲಿ ಮಹಿಳೆಯರಿಗೆ ತಿಂಗಳಿಗೆ 2,100 ರು. ಮಾಸಾಶನ, ಬಡವರಿಗೆ 500 ರು. ಸಬ್ಸಿಡಿ ದರದಲ್ಲಿ ಸಿಲಿಂಡರ್‌, ಕಾಲೇಜು ಹುಡುಗಿಯರಿಗೆ ಉಚಿತ ಸ್ಕೂಟಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಡಯಾಲಿಸಿಸ್‌- ಇವೇ ಮುಂತಾದವು ಆ ಭರವಸೆಗಳಲ್ಲಿ ಸೇರಿವೆ.ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ‘ಸಂಕಲ್ಪ ಪತ್ರ’ ಹೆಸರಿನ ಪ್ರಣಾಳಿಕೆಯನ್ನು ಗುರುವಾರ ರೋಹ್ಟಕ್‌ನಲ್ಲಿ ಬಿಡುಗಡೆ ಮಾಡಿದರು. ಕಾಂಗ್ರೆಸ್‌ ಕೂಡ ಬುಧವಾರ ಇಂಥದ್ದೇ ಪ್ರಣಾಳಿಕೆ ಬಿಡುಗಡೆ ಮಾಡಿತ್ತು.

ಪ್ರಣಾಳಿಕೆ ಮುಖ್ಯಾಂಶಗಳು:

ಹರ್ ಘರ್ ಗೃಹಿಣಿ ಯೋಜನೆ ಅಡಿ ಬಿಪಿಎಲ್‌ ಕುಟುಂಬಗಳಿಗೆ 500 ರು.ಗೆ ಎಲ್‌ಪಿಜಿ ಸಿಲಿಂಡರ್‌. ‘ಲಾಡೋ ಲಕ್ಷ್ಮಿ’ ಯೋಜನೆಯಡಿ ಎಲ್ಲ ಮಹಿಳೆಯರಿಗೆ 2100 ರು. ಮಾಸಾಶನ. ನಿರುದ್ಯೋಗ ನಿವಾರಣೆಗೆ 2 ಲಕ್ಷ ಉದ್ಯೋಗ ಸೃಷ್ಟಿ. ಕನಿಷ್ಠ ಬೆಂಬಲ ಬೆಲೆ ಯೋಜನೆ ಇನ್ನೂ 10 ಬೆಳೆಗಳಿಗೆ ವಿಸ್ತರಿಸಿ, ಒಟ್ಟು ಬೆಳೆ ಸಂಖ್ಯೆ 24ಕ್ಕೇರಿಕೆ. ರಾಜ್ಯದ ಗ್ರಾಮೀಣ ಭಾಗದ ಪ್ರತಿ ಕಾಲೇಜು ಹುಡುಗಿಗೆ ಸ್ಕೂಟರ್‌. ಗ್ರಾಮೀಣ ಹಾಗೂ ನಗರ ಭಾಗಗಳಲ್ಲಿ 5 ಲಕ್ಷ ಪಕ್ಕಾ ಮನೆಗಳ ನಿರ್ಮಾಣ. ಚಿರಾಯು ಆಯುಷ್ಮಾನ್‌ ಯೋಜನೆ ಅಡಿ ಪ್ರತಿ ಕುಟುಂಬಕ್ಕೆ 10 ಲಕ್ಷ ರು.ವರೆಗೆ ಉಚಿತ ಚಿಕಿತ್ಸೆ. 70 ವರ್ಷ ಮೇಲ್ಪಟ್ಟ ಪ್ರತಿ ಹಿರಿಯ ವ್ಯಕ್ತಿಗಳಿಗೆ 5 ಲಕ್ಷ ರು.ವರೆಗೆ ಉಚಿತ ಚಿಕಿತ್ಸೆ.

ಏನೇನು ಭರವಸೆ?

- ‘ಚಿರಾಯು ಆಯುಷ್ಮಾನ್‌’ ಯೋಜನೆಯಡಿ ಪ್ರತಿ ಕುಟುಂಬಕ್ಕೆ 10 ಲಕ್ಷ ರು.ವರೆಗೆ ಉಚಿತ ಚಿಕಿತ್ಸೆ

- ಹರ್‍ಯಾಣದ 70 ವರ್ಷ ಮೇಲ್ಟಟ್ಟ ಪ್ರತಿ ಹಿರಿಯ ನಾಗರಿಕರಿಗೆ 5 ಲಕ್ಷ ರು.ವರೆಗೆ ಉಚಿತ ಚಿಕಿತ್ಸೆ

- ‘ಹರ್‌ ಘರ್‌ ಗೃಹಿಣಿ’ ಯೋಜನೆಯಡಿ ಬಿಪಿಎಲ್‌ ಕುಟುಂಬಗಳಿಗೆ 500 ರು.ಗೆ ಅಡುಗೆ ಸಿಲಿಂಡರ್‌

- ‘ಲಾಡೋ ಲಕ್ಷ್ಮಿ’ ಯೋಜನೆಯಡಿ ರಾಜ್ಯದ ಎಲ್ಲ ಮಹಿಳೆಯರಿಗೆ ತಲಾ 2100 ರು. ಮಾಸಾಶನ

- ಗ್ರಾಮೀಣ ಭಾಗದ ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸ್ಕೂಟರ್‌ ವಿತರಣೆ: ಬಿಜೆಪಿ