ಹಾಸನ ಸಿದ್ದು ಸಮಾವೇಶ ಹೆಸರೇ ಬದಲು : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತೆಕ್ಕೆಗೆ ಕಾರ್ಯಕ್ರಮ

| Published : Dec 03 2024, 12:31 AM IST / Updated: Dec 03 2024, 06:00 AM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಅವರ ಬೆಂಬಲಿಗರು ಡಿ.5ರಂದು ಹಾಸನದಲ್ಲಿ ನಡೆಸಲು ಉದ್ದೇಶಿಸಿದ್ದ ಸಮಾವೇಶ ಇದೀಗ ಹೊಸ ಸ್ವರೂಪ ಪಡೆದುಕೊಂಡಿದೆ.

  ಹಾಸನ/ತುಮಕೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಅವರ ಬೆಂಬಲಿಗರು ಡಿ.5ರಂದು ಹಾಸನದಲ್ಲಿ ನಡೆಸಲು ಉದ್ದೇಶಿಸಿದ್ದ ಸಮಾವೇಶ ಇದೀಗ ಹೊಸ ಸ್ವರೂಪ ಪಡೆದುಕೊಂಡಿದೆ.

 ಕಾರ್ಯಕ್ರಮದ ಸ್ವರೂಪದ ಕುರಿತು ಭಿನ್ನಾಭಿಪ್ರಾಯ ವ್ಯಕ್ತವಾದ ಬೆನ್ನಲ್ಲೇ ಪ್ರಕರಣದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಮಧ್ಯಪ್ರವೇಶ ಮಾಡಿದೆ. ಅದರ ಬೆನ್ನಲ್ಲೇ ಇದೀಗ ಸಮಾವೇಶವನ್ನು ಕೆಪಿಸಿಸಿ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪಕ್ಷದ ನಿಯಂತ್ರಣಕ್ಕೆ ಪಡೆದುಕೊಂಡಿದ್ದಾರೆ.ಸೋಮವಾರ ಹಾಸನಕ್ಕೆ ಭೇಟಿ ನೀಡಿದ ಡಿಕೆಶಿ, ಸಮಾವೇಶ ನಡೆಯಲಿರುವ ಸ್ಥಳ, ಸಿದ್ಧತೆಗಳ ಪರಿಶೀಲನೆ ನಡೆಸಿದರು. 

ಬಳಿಕ ಮಾತನಾಡಿ, ಪಕ್ಷದ ಅಡಿಯಲ್ಲಿ ಸಮಾವೇಶ ನಡೆಯಲಿದೆ. ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷದ ಸಿಎಂ. ಜನರ ಹಿತಕ್ಕಾಗಿ ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ಇಂತಹ ಜನಕಲ್ಯಾಣ ಸಮಾವೇಶಗಳನ್ನು ಇತರ ಜಿಲ್ಲೆಗಳಲ್ಲಿಯೂ ಆಯೋಜಿಸಲು ಮುಖ್ಯಮಂತ್ರಿಯವರು ಸೂಚನೆ ನೀಡಿದ್ದಾರೆ ಎಂದು ಹೇಳಿದರು.

ಹೆಸರೇ ಬದಲು!:

ಮೊದಲಿಗೆ ‘ಸಿದ್ದರಾಮಯ್ಯ ಸ್ವಾಭಿಮಾನಿ ಸಮಾವೇಶ’ದ ಹೆಸರಲ್ಲಿ ಶೋಷಿತ ವರ್ಗಗಳ ಒಕ್ಕೂಟ ಕಾರ್ಯಕ್ರಮಕ್ಕೆ ನಿರ್ಧರಿಸಿತ್ತು. ಆದರೆ ಈ ಹಂತದಲ್ಲಿ ಮಧ್ಯಪ್ರವೇಶ ಮಾಡಿದ ಹೈಕಮಾಂಡ್‌, ಶೋಷಿತ ವರ್ಗಗಳ ಒಕ್ಕೂಟ ಹಾಗೂ ಪಕ್ಷದ ಜಂಟಿ ಆಶ್ರಯದಲ್ಲಿ ಸಮಾವೇಶ ನಡೆಸಲು ಸೂಚಿಸಿದೆ ಎನ್ನಲಾಗಿದೆ. ಅದರ ಬೆನ್ನಲ್ಲೇ ಡಿ.ಕೆ.ಶಿವಕುಮಾರ್‌ ಕಾರ್ಯಕ್ರಮದ ರೂಪುರೇಷೆಯನ್ನೇ ಬದಲಿಸಿ ಇದು ‘ಸ್ವಾಭಿಮಾನಿ ಸಮಾವೇಶ ಅಲ್ಲ, ಜನ ಕಲ್ಯಾಣ ಸಮಾವೇಶ’ ಎಂದು ಸ್ಪಷ್ಟಪಡಿಸಿದ್ದಾರೆ.

ಎಲ್ಲ ಜಿಲ್ಲೆಗಳಿಂದಲೂ ಆಗಮನ:

ಹಾಸನ ಜಿಲ್ಲೆಯನ್ನು ಕೇಂದ್ರೀಕರಿಸಿ ಸಮಾವೇಶ ಮಾಡುತ್ತಿದ್ದೇವೆ. ಆದರೆ, ಸಮಾವೇಶದಲ್ಲಿ ಕೇವಲ ಆರು ಜಿಲ್ಲೆಗಳ ಕಾರ್ಯಕರ್ತರು ಮಾತ್ರ ಪಾಲ್ಗೊಳ್ಳುವುದಿಲ್ಲ. ಇತರ ಜಿಲ್ಲೆಗಳ ಕಾರ್ಯಕರ್ತರೂ ಪಾಲ್ಗೊಳ್ಳುತ್ತಾರೆ. ಎಷ್ಟು ಜನ ಸೇರುತ್ತಾರೆ ಎಂದು ಲೆಕ್ಕ ಹಾಕುವ ಶಕ್ತಿ ನನಗಿಲ್ಲ. ಹಾಸನ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ನಾವು ಒಂದೇ ಒಂದನ್ನು ಗೆದ್ದಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಕಾಂಗ್ರೆಸ್‌ ಮಯವಾಗಿಸುವ ನಿಟ್ಟಿನಲ್ಲಿ ಹಾಸನದಲ್ಲಿ ಈ ಸಮಾವೇಶ ಆಯೋಜಿಸಿದ್ದು, ಈ ಸಮಾವೇಶ ಹಾಸನ ಕೇಂದ್ರೀಕೃತವಾಗಲಿದೆ ಎಂದರು.

ಹಾಸನದಲ್ಲೇ ಏಕೆ?:

ಹಾಸನದಲ್ಲಿಯೇ ಏಕೆ ಸಮಾವೇಶ ಮಾಡುತ್ತಿದ್ದೇವೆ ಎಂದರೆ, ನಮಗೆ ಇಲ್ಲಿ ಇರುವುದು ಒಬ್ಬನೇ ಒಬ್ಬ ಎಂಎಲ್‌ಎ. ಇನ್ನು ಮಂಡ್ಯ ಜಿಲ್ಲೆಯಲ್ಲಿ ಕೆ.ಆರ್.ಪೇಟೆ ಕ್ಷೇತ್ರ ಬಿಟ್ಟರೆ ಐದಾರು ಜನ ಗೆದ್ದಿದ್ದಾರೆ. ಮೈಸೂರಿನಲ್ಲಿ ಒಂದೆರಡು ಸೀಟ್ ಬಿಟ್ಟರೆ ಇನ್ನೆಲ್ಲಾ ಗೆದ್ದಿದ್ದೇವೆ. ಚಾಮರಾಜನಗರ, ಕೊಡಗು ಫುಲ್ ಗೆದ್ದಿದ್ದೇವೆ. ರಾಮನಗರ ಒಂದು ಖಾಲಿ ಇತ್ತು, ಈಗ ಅದೂ ತುಂಬಿ ಹೋಯ್ತು. ಹಾಗಾಗಿ, ಈ ಭಾಗದಲ್ಲಿ ನಮ್ಮ ಮನೆ ತುಂಬಿಸಬೇಕಲ್ಲ. ಅದಕ್ಕೆ ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದರು.