ಸಾರಾಂಶ
ಅಮೆರಿಕದಲ್ಲಿ ಭಾರತದ ಪ್ರಜಾಪ್ರಭುತ್ವದ ಬಗ್ಗೆ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ದ್ವೇಷ ಮತ್ತು ನಕಾರಾತ್ಮಕತೆಯಿಂದ ತುಂಬಿರುವ ಕೆಲವರು ಭಾರತದ ಏಕತೆ ಮತ್ತು ಸಮಗ್ರತೆಯನ್ನು ವಿದೇಶದ ನೆಲ ಬಳಸಿಕೊಂಡು ನಾಶಮಾಡಲು ಹೊರಟಿದ್ದಾರೆ
ಅಹಮದಾಬಾದ್ : ‘ದ್ವೇಷ ಮತ್ತು ನಕಾರಾತ್ಮಕತೆಯಿಂದ ತುಂಬಿರುವ ಕೆಲವು ವ್ಯಕ್ತಿಗಳು ಭಾರತದ ಏಕತೆ ಮತ್ತು ಸಮಗ್ರತೆಯನ್ನು ವಿದೇಶದ ನೆಲ ಬಳಸಿಕೊಂಡು ನಾಶಮಾಡಲು ಹೊರಟಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಆರೋಪಿಸಿದ್ದಾರೆ.
ಈ ಮೂಲಕ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಅಮೆರಿಕದಲ್ಲಿ ಭಾರತದಲ್ಲಿನ ವ್ಯವಸ್ಥೆಯ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಪರೋಕ್ಷವಾಗಿ ಕಿಡಿಕಾರಿದ್ದಾರೆ.
ಭುಜ್-ಅಹಮದಾಬಾದ್ ನಡುವೆ ಸಂಚರಿಸುವ ದೇಶದ ಮೊದಲ ನಮೋ ಭಾರತ ರ್‍ಯಾಪಿಡ್ ರೈಲಿಗೆ (ವಂದೇ ಮೆಟ್ರೋ ರೈಲಿಗೆ) ಹಾಗೂ ಹುಬ್ಬಳ್ಳಿ-ಪುಣೆ ವಂದೇಭಾರತ್ ರೈಲು ಸೇರಿ ಹಲವು ವಂದೇಭಾರತ್ ರೈಲುಗಳಿಗೆ ಅಹಮದಾಬಾದ್‌ನಲ್ಲಿ ಸೋಮವಾರ ಸಂಜೆ ಚಾಲನೆ ನೀಡಿ ಮಾತನಾಡಿದ ಮೋದಿ, ‘ನನ್ನ ಮೂರನೇ ಅವಧಿಯ 100 ದಿನಗಳ ಆಡಳಿತದಲ್ಲಿ ನನ್ನನ್ನು ವಿಪಕ್ಷಗಳು ಅವಮಾನಿಸಿದವು. ಅಪಹಾಸ್ಯ ಮಾಡಿದವು. ಆದರೆ 100 ದಿನದ ಅಜೆಂಡಾ ಮುಗಿಸೋಣ ಎಂದು ಸುಮ್ಮನಿದ್ದೆ. ನನ್ನ ಮೌನದಿಂದ ಜನರು ಅಚ್ಚರಿಗೊಂಡಿದ್ದರು. ನಾನು ಬದುಕಿದರೆ ನಿಮಗಾಗಿ ಬದುಕುತ್ತೇನೆ, ಹೋರಾಟ ಮಾಡಿದರೆ ನಿಮಗಾಗಿ ಹಾಗೂ ತ್ಯಾಗ ಮಾಡಿದರೆ ಅದು ನಿಮಗಾಗಿ. ಹೀಗಾಗಿ ಸುಮ್ಮನಿದ್ದೆ’ ಎಂದರು.
ಆದರೆ, ‘ಇದು ದೇಶದ ಸುವರ್ಣ ಯುಗ, ಮುಂದಿನ 25 ವರ್ಷದ ಭಾರತಕ್ಕೆ ಎಲ್ಲರೂ ಒಗ್ಗಟ್ಟಾಗಿ ಅಡಿಪಾಯ ಹಾಕುತ್ತಿದ್ದೇವೆ. ಇಂಥ ಸಂದರ್ಭಲ್ಲಿ ಋಣಾತ್ಮಕ ಹಾಗೂ ದ್ವೇಷ ಮನೋಭಾವ ಹೊಂದಿದ ಕೆಲವರು ದೇಶದ ಏಕತೆಗೆ ಭಂಗ ತಂದು ದೇಶವನ್ನು ತುಂಡು ತುಂಡು ಮಾಡಲು (ಟುಕಡೇ ಟುಕಡೇ) ಬಯಸಿದ್ದಾರೆ. ಇವರು ದೇಶವನ್ನು ಅವಮಾನಿಸುವ ಒಂದೂ ಅವಕಾಶವನ್ನು ಬಿಡುವುದಿಲ್ಲ.
ಅವರು ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿಯನ್ನು ಪುನಸ್ಥಾಪಿಸಿ, ದೇಶಕ್ಕೆ 2 ಸಂವಿಧಾನ ಮತ್ತು ಕಾನೂನನ್ನು ತರಲು ಬಯಸಿದ್ದಾರೆ. ಅವರು ಭಾರತ ಹಾಗೂ ಗುಜರಾತನ್ನು ಅವಮಾನಿಸುತ್ತಿದ್ದಾರೆ. ಅವರು (ವಿರೋಧ ಪಕ್ಷದವರು) ತುಷ್ಟೀಕರಣದ ರಾಜಕೀಯಕ್ಕಾಗಿ ಯಾವುದೇ ಮಿತಿಯನ್ನು ದಾಟಬಹುದು’ ಎಂದು ಕಿಡಿಕಾರಿದರು.
ಇತ್ತೀಚೆಗೆ ರಾಹುಲ್ ಗಾಂಧಿ ಅಮೆರಿಕ ಪ್ರವಾಸ ಮಾಡಿದಾಗ, ‘ಭಾರತದಲ್ಲಿ ಪ್ರಜಾಪ್ರಭುತ್ವ ಕುಸಿದಿದೆ. ಸಾಂವಿಧಾನಿಕ ಸಂಸ್ಥೆಗಳನ್ನು ಹಾಳು ಮಾಡಲಾಗುತ್ತಿದೆ. ದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಇಲ್ಲ’ ಎಂಬ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿಗರು ಹಾಗೂ ಮೋದಿ, ರಾಹುಲ್ ಮೇಲೆ ಮುಗಿಬಿದ್ದಿದ್ದಾರೆ.
100 ದಿನ ಬೇಕಂತಲೇ ಸುಮ್ಮನಿದ್ದೆ
ನನ್ನ ಮೂರನೇ ಅವಧಿಯ 100 ದಿನಗಳ ಆಡಳಿತದಲ್ಲಿ ನನ್ನನ್ನು ವಿಪಕ್ಷಗಳು ಅವಮಾನಿಸಿದವು. ಆದರೆ 100 ದಿನದ ಅಜೆಂಡಾ ಮುಗಿಸೋಣ ಎಂದು ಸುಮ್ಮನಿದ್ದೆ. ನನ್ನ ಮೌನದಿಂದ ಜನರು ಅಚ್ಚರಿಗೊಂಡಿದ್ದರು. ನಾನು ಜನರಿಗಾಗಿ ಬದುಕುತ್ತಿದ್ದೇನೆ. ನಿಮಗಾಗಿ ಹೋರಾಟ, ತ್ಯಾಗ ಮಾಡುತ್ತಿದ್ದೇನೆ. ಹೀಗಾಗಿ ಸುಮ್ಮನಿದ್ದೆ.
- ನರೇಂದ್ರ ಮೋದಿ, ಪ್ರಧಾನ ಮಂತ್ರಿ