ಚುಂಚನಗಿರಿ ಶ್ರೀಗಳಷ್ಟು ವಿದ್ಯಾವಂತ ಸ್ವಾಮೀಜಿ ರಾಜ್ಯದಲ್ಲಿ ಮತ್ತೊಬ್ಬರಿಲ್ಲ.    ಅವರಿಗೆ ಅಗೌರವ ಆಗಬಾರದು ಎಂಬ ದೃಷ್ಟಿಯಿಂದ ನಾನು ಕೆಲವು ಮಾತಗಳನ್ನು ಆಡಿದ್ದೆ. ಅದರಿಂದ ಶ್ರೀಗಳ ಮನಸ್ಸಿಗೆ ನೋವಾಗಿದ್ದರೆ ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯ : ಚುಂಚನಗಿರಿ ಶ್ರೀಗಳಷ್ಟು ವಿದ್ಯಾವಂತ ಸ್ವಾಮೀಜಿ ರಾಜ್ಯದಲ್ಲಿ ಮತ್ತೊಬ್ಬರಿಲ್ಲ. ಸ್ವಾಮೀಜಿಗಳು ಅವರದ್ದೇ ಆದ ಕಲ್ಪನೆಗಳನ್ನು ಹೊಂದಿರುತ್ತಾರೆ. ಇಂತಹ ಸ್ವಾಮೀಜಿಗಳು ರಾಜಕೀಯಕ್ಕೆ ಬರಬಾರದು. ಅವರಿಗೆ ಅಗೌರವ ಆಗಬಾರದು ಎಂಬ ದೃಷ್ಟಿಯಿಂದ ನಾನು ಕೆಲವು ಮಾತಗಳನ್ನು ಆಡಿದ್ದೆ. ಅದರಿಂದ ಶ್ರೀಗಳ ಮನಸ್ಸಿಗೆ ನೋವಾಗಿದ್ದರೆ ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಕೃಷಿಮೇಳದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು

ತಾಲೂಕಿನ ವಿ.ಸಿ.ಫಾರಂನಲ್ಲಿ ನಡೆಯುತ್ತಿರುವ ಕೃಷಿಮೇಳದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ‘ಮಠದ ದೊಡ್ಡ ಸ್ವಾಮೀಜಿ ಬಾಲಗಂಗಾಧರನಾಥ ಸ್ವಾಮೀಜಿಯವರು ಸಮಾಜದ ಗೌರವ ಉಳಿಸಲಿಕ್ಕೆ ಬೀದಿಗೆ ಬಂದವರು. ದೇವೇಗೌಡರು ಸಿಎಂ ಆಗಲಿ ಎನ್ನುವುದು ಅವರ ಮನಸ್ಸಿನಲ್ಲಿತ್ತು. ನನ್ನನ್ನು ಕಂಡರೂ ಅವರಿಗೆ ತುಂಬಾ ವಾತ್ಸಲ್ಯವಿತ್ತು. ನನ್ನಿಂದ ನಿರ್ಮಲಾನಂದನಾಥ ಸ್ವಾಮೀಜಿಗೆ ಅಪಚಾರವಾಗಿದ್ದರೆ ಸಾರ್ವಜನಿಕವಾಗಿ ಕ್ಷಮೆ ಕೇಳುತ್ತೇನೆ’ ಎಂದು ವೇದಿಕೆ ಮೇಲೆಯೇ ಕ್ಷಮೆಯಾಚಿಸಿದರು.

ಪ್ರಸಕ್ತ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳು ಎಲ್ಲರಿಗೂ ಗೊತ್ತು. ಈ ಬಗ್ಗೆ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿದ್ದಾರೆ. ಅವರು ಮಾತಾಡಿದ್ದಕ್ಕೆ ಇನ್ಯಾರೋ ಮಾತನಾಡಿದ್ದಾರೆ. ಆ ದೃಷ್ಟಿಯಿಂದ ಶ್ರೀಗಳನ್ನು ರಾಜಕೀಯ ವಿಷಯಕ್ಕೆ ಬಳಕೆ ಮಾಡಿಕೊಳ್ಳಬಾರದು ಎಂದು ಹೇಳಿದ್ದೆ ಎಂದು ಸಮಜಾಯಿಷಿ ನೀಡಿದರು.

ಎಚ್ಡಿಕೆ ಹೇಳಿದ್ದೇನು?:

‘ದೇವೇಗೌಡರ ಪರ ಸ್ವಾಮೀಜಿಗಳು ಬೀದಿಗೆ ಇಳಿದಿರಲಿಲ್ಲವೇ?’ ಎಂಬ ಡಿಕೆಶಿ ಮಾತಿಗೆ ತಿರುಗೇಟು ನೀಡಿದ್ದ ಎಚ್ಡಿಕೆ, ‘ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೆ. ಅಧಿಕಾರ ಹೋದಾಗ ನಾನು ಮಠಾಧೀಶರ ನೆರವು ಕೇಳಿಲ್ಲ. ದೇವೇಗೌಡರನ್ನು ಯಾವುದೇ ಸ್ವಾಮೀಜಿ ಮುಖ್ಯಮಂತ್ರಿ ಮಾಡಿರಲಿಲ್ಲ. ಸ್ವಾಮೀಜಿಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಿದ್ದರೆ, ಅವರು 1977ರಲ್ಲಿಯೇ ಮುಖ್ಯಮಂತ್ರಿ ಆಗುತ್ತಿದ್ದರು. 1994ರವರೆಗೆ ಕಾಯುವ ಅಗತ್ಯ ಇರಲಿಲ್ಲ. ದೇವೇಗೌಡರನ್ನು ಸಿಎಂ ಮಾಡಿ ಎಂದು ಯಾವ ಸ್ವಾಮೀಜಿ ಆಗ ಹೇಳಿಕೆ ನೀಡಿರಲಿಲ್ಲ. ಸಭೆ ಕೂಡ ಮಾಡಿರಲಿಲ್ಲ. 1994ರಲ್ಲಿ ದೇವೇಗೌಡರು ಸಿಎಂ ಆಗಿದ್ದು ಯಾವುದೇ ಧಾರ್ಮಿಕ ಬೆಂಬಲದಿಂದಲ್ಲ, ಬದಲಾಗಿ ರಾಜಕೀಯ ಬಲದಿಂದ’ ಎಂದಿದ್ದರು.

ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್‌ ಸಿಎಂ ಆಗಬೇಕೆಂದುದು ಸಮುದಾಯದ ಬೇಡಿಕೆ

ಅಧಿಕಾರ ಹಂಚಿಕೆ ಒಪ್ಪಂದ ಆಗಿದ್ದರೆ ಅದನ್ನು ಪಕ್ಷ ಸೂಕ್ತವಾಗಿ ನಿರ್ವಹಿಸಲಿ ಎಂದಿದ್ದ ಚುಂಚಶ್ರೀ

ಈ ವೇಳೆ ಮಠಾಧೀಶರ ರಾಜಕೀಯ ಸರಿಯಲ್ಲ ಎಂದು ಚುಂಚಶ್ರೀ ಹೇಳಿಕೆಗೆ ಎಚ್‌ಡಿಕೆ ಆಕ್ಷೇಪ

ಇದಕ್ಕೆ ದೇವೇಗೌಡರ ಪರ ಮಠಾಧೀಶರು ಬೀದಿಗೆ ಇಳಿದಿರಲಿಲ್ಲವೇ ಎಂದು ಡಿಸಿಎಂ ಡಿಕೆಶಿ ಪ್ರಶ್ನೆ

ನಾನಾಗಲೀ, ದೇವೇಗೌಡರಾಗಲೀ ಮಠಗಳ ನೆರವು ಕೇಳಿರಲಿಲ್ಲ ಎಂದು ಎಚ್‌ಡಿಕೆ ತಿರುಗೇಟು