ಸಾರಾಂಶ
ಚನ್ನಪಟ್ಟಣ ‘ಕುಮಾರಸ್ವಾಮಿ ಅವರೇ ಚನ್ನಪಟ್ಟಣ ಚುನಾವಣೆಯಲ್ಲಿ ನಿಮ್ಮ ಯಾವ ಹಣ ಬಲವೂ ನಡೆಯುವುದಿಲ್ಲ. ಸ್ಟೀಲ್, ಗಣಿ ಯಾವ ದುಡ್ಡು ತಂದಿದ್ದರೂ ಜನರ ಮುಂದೆ ನಡೆಯುವುದಿಲ್ಲ. ಕಾಂಗ್ರೆಸ್ ಸರಕಾರದ ಅಭಿವೃದ್ಧಿ ಕೆಲಸಗಳು ಕೈ ಹಿಡಿಯಲಿವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗುಡುಗಿದ್ದಾರೆ.
ಚನ್ನಪಟ್ಟಣ ಉಪಚುನಾವಣೆ ಹಿನ್ನೆಲೆಯಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರವಾಗಿ ಮತ ಯಾಚಿಸಿದ ಶಿವಕುಮಾರ್ ಅವರು ಕೇಂದ್ರ ಸಚಿವ ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
‘ಕುಮಾರಸ್ವಾಮಿ ಅವರೇ ನಿಮ್ಮ ಬಳಿ ಹಣ ತೆಗೆದುಕೊಳ್ಳುತ್ತಾರೆ. ಮತವನ್ನು ಯೋಗೇಶ್ವರ್‌ಗೆ ಹಾಕುತ್ತಾರೆ. ಕುಮಾರಸ್ವಾಮಿ ನೋಟು, ಯೋಗೇಶ್ವರ್‌ಗೆ ಓಟು. ಚನ್ನಪಟ್ಟಣದಲ್ಲಿ ಅಭಿವೃದ್ಧಿಯ ಗಾಳಿ ಬೀಸಬೇಕು. ಅದಕ್ಕಾಗಿ ಸರ್ಕಾರದ ಎಲ್ಲಾ ಮಂತ್ರಿಗಳು ಇಲ್ಲಿಗೆ ಬಂದಿದ್ದೇವೆ. ಯೋಗೇಶ್ವರ್‌ಗೆ ಬೆಂಬಲ ನೀಡಿ ಚನ್ನಪಟ್ಟಣದ ಅಭಿವೃದ್ಧಿ ಮಾಡುತ್ತೇವೆ’ ಎಂದರು.
ಅಧಿಕಾರ ನಶ್ವರ, ಮತದಾರ ಈಶ್ವರ: ‘ನಮ್ಮ ಅಧಿಕಾರ ನಶ್ವರ, ನಾವು ಮಾಡುವ ಸಾಧನೆ ಅಜರಾಮರ, ಮತದಾರರೇ ಈಶ್ವರ. ಹೀಗಾಗಿ ನಾವು ನಿಮ್ಮ ಮುಂದೆ ಕೈಮುಗಿದು ನಿಂತಿದ್ದೇವೆ. ನೀವು ಅಭಿವೃದ್ಧಿಗಾಗಿ ಮತ ಹಾಕಬೇಕು ಎಂದು ನಿಮ್ಮಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ’ ಎಂದರು.‘ಯೋಗೇಶ್ವರ್ ಕಾಂಗ್ರೆಸ್‌ಗೆ ಬರದೇ ಇದ್ದಿದ್ದರೆ ನಾನು ಚನ್ನಪಟ್ಟಣದಿಂದ ಸ್ಪರ್ಧಿಸುತಿದ್ದೆ. ಕೊನೆ ಘಳಿಗೆಯಲ್ಲಿ ಯೋಗೇಶ್ವರ್ ಅವರು ನಮ್ಮ ಬಳಿ ಬಂದು ತಪ್ಪಾಯ್ತು ಎಂದು ಕೇಳಿಕೊಂಡರು. ತಕ್ಷಣವೇ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖ್ಯಮಂತ್ರಿಯವರ ಬಳಿ ಮಾತನಾಡಿ ಟಿಕೆಟ್ ಘೋಷಣೆ ಮಾಡಿ ಬಿ ಫಾರ್ಮ್ ಕೊಡಲಾಯಿತು. ಕಾರ್ಯಕರ್ತರ ಬಳಿ ಚರ್ಚೆ ಮಾಡಲು ಸಮಯ ಸಿಗಲಿಲ್ಲ ಅದಕ್ಕಾಗಿ ಕ್ಷಮೆ ಇರಲಿ’ ಎಂದರು.
ಕಣ್ಣೀರು ಹಾಕಿ ಸುಳ್ಳು ಹೇಳುತ್ತಾರೆ: ‘ಕಣ್ಣೀರು ಹಾಕುತ್ತಾ ಬರಿ ಸುಳ್ಳನ್ನು ಹೇಳುತ್ತಿದ್ದಾರೆ. ನಾವುಗಳು ಕಣ್ಣೀರಿಗೆ ಹೆದರುವ ಮಕ್ಕಳಲ್ಲ. ಸಾತನೂರು ಕ್ಷೇತ್ರದಿಂದ 4 ಬಾರಿ ಗೆದ್ದಿದ್ದ ನಾನು ಲೂಟಿ ಮಾಡಿದ್ದೀನೆಯೇ? ಬಂಡೆಯನ್ನು ಹೊಡೆದು ಹಾಕಿದ್ದೇನೆಯೇ? ಕಲ್ಲು ಪ್ರಕೃತಿ, ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಜನ ನನ್ನ 8ನೇ ಬಾರಿಗೆ 1.23 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಕುಮಾರಸ್ವಾಮಿಯವರೇ ನೀವು ಮುಖ್ಯಮಂತ್ರಿಗಳಾಗಿದ್ದಾಗ ಒಂದೇ ಒಂದು ಬಸ್ ನಿಲ್ದಾಣವನ್ನು ಮಾಡಲು ನಿಮ್ಮ ಕೈಯಲ್ಲಿ ಆಗಲಿಲ್ಲ’ ಎಂದು ಹೇಳಿದರು.
ಯೋಗೇಶ್ವರ್ ಸೋಲಿಗೆ ಅವರೇ ಕಾರಣ: ‘ಯೋಗೇಶ್ವರ್ ಎರಡು ಬಾರಿ ಸೋಲಿಗೆ ಅವರೇ ಕಾರಣ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ, ಅಧಿಕಾರದಲ್ಲಿದ್ದರೆ ಚೆಂದ ಎಂದು ಗಿಣಿಗೆ ಹೇಳಿದಂತೆ ಹೇಳಿದೆ. ನನ್ನ ಮಾತು ಕೇಳದೇ ಯೋಗೇಶ್ವರ್ ಅವರು ಬಿಜೆಪಿ ಸೇರಿದಾಗ, ಅನಿವಾರ್ಯವಾಗಿ ನಾವು ಹೆಚ್.ಎಂ ರೇವಣ್ಣ ಅವರನ್ನು ಕಣಕ್ಕಿಳಿಸಿದ್ದೆವು. ರೇವಣ್ಣ ನಿಲ್ಲದಿದ್ದರೆ ಯೋಗೇಶ್ವರ್ ಗೆಲ್ಲುತ್ತಿದ್ದರು’ ಎಂದರು.
ಯೋಗೇಶ್ವರ್ ಕಾಂಗ್ರೆಸ್ ಬಿಟ್ಟು ಹೋಗುವಂತಿಲ್ಲ: ‘ಯೋಗೇಶ್ವರ್ ಕಾಂಗ್ರೆಸ್‌ನಲ್ಲಿ ಇದ್ದಿದ್ದರೆ ಅವತ್ತೂ ಗೆಲ್ಲುತ್ತಿದ್ದ, ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗಲು ಸಾಧ್ಯವಾಗುತ್ತಿರಲಿಲ್ಲ. ಕಳೆದ ಚುನಾವಣೆಯಲ್ಲೂ ಯೋಗೇಶ್ವರ್ ಅವರಿಗೆ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್‌ಗೆ ಬರುವಂತೆ ನಮ್ಮ ಉದಯ್ ಅವರು ಹೇಳಿದರು. ಆದರೂ ಕಮಲವನ್ನೇ ನೆಚ್ಚಿಕೂತರು. ಮೊನ್ನೆ ನಾಗವಾರದಲ್ಲಿ ಹೆಣ್ಣು ಮಗಳೊಬ್ಬಳು ಯೋಗೇಶ್ವರ್ ಅವರಿಗೆ ಇನ್ನು ಮುಂದೆ ನೀವು ಯಾವತ್ತೂ ಕಾಂಗ್ರೆಸ್ ಬಿಟ್ಟು ಹೋಗುವಂತಿಲ್ಲ ಎಂದು ಪಾಠ ಹೇಳಿದರು’ ಎಂದರು.