ಎಚ್ಡಿಕೆ ಮೊದಲು ಮೇಕೆದಾಟಿಗೆ ಅನುಮತಿ ಕೊಡಿಸಲಿ : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸವಾಲು

| N/A | Published : Feb 07 2025, 11:11 AM IST

dk shivakumar

ಸಾರಾಂಶ

ಬೆಂಗಳೂರಿಗೆ 2ನೇ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಮಾತನಾಡುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಮೊದಲು ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸವಾಲು ಹಾಕಿದರು.

  ಬೆಂಗಳೂರು : ಬೆಂಗಳೂರಿಗೆ 2ನೇ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಮಾತನಾಡುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಮೊದಲು ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸವಾಲು ಹಾಕಿದರು.

ಬೆಂಗಳೂರಿಗೆ 2ನೇ ವಿಮಾನ ನಿಲ್ದಾಣ ನಿರ್ಮಾಣದ ಕ್ರೆಡಿಟ್‌ ಎಚ್‌.ಡಿ.ದೇವೇಗೌಡ ಮತ್ತು ಎಚ್‌.ಡಿ.ಕುಮಾರಸ್ವಾಮಿ ಅವರು ತೆಗೆದುಕೊಳ್ಳುತ್ತಿರುವ ಕುರಿತು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದ ಒಂದೇ ದಿನದಲ್ಲಿ ಮೇಕೆದಾಟು ಆಣೆಕಟ್ಟು ನಿರ್ಮಾಣಕ್ಕೆ ಅನುಮತಿ ಕೊಡಿಸುವುದಾಗಿ ಕುಮಾರಸ್ವಾಮಿ ಹೇಳಿದ್ದರು. ಮೊದಲು ಆ ಕೆಲಸ ಮಾಡಲಿ. ನಂತರ ಉಳಿದದ್ದು ಮಾತನಾಡಿ. ಅವರು ಅಧಿಕಾರದಲ್ಲಿದ್ದಾಗ 2ನೇ ವಿಮಾನ ನಿಲ್ದಾಣ ಮಾಡಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈಗ ನಾವು ಅದನ್ನು ಮಾಡುತ್ತಿದ್ದೇವೆ ಎಂದರು.

ವಿಮಾನ ನಿಲ್ದಾಣವು ಬಿಡದಿ, ನೆಲಮಂಗಲ, ತುಮಕೂರು, ಸೋಲೂರು ಹೀಗೆ ಯಾವ ಸ್ಥಳದಲ್ಲಿ ಬರಬೇಕು ಎಂಬುದನ್ನು ತೀರ್ಮಾನಿಸುವುದು ನಮ್ಮ ವ್ಯಾಪ್ತಿಯಲ್ಲಿಲ್ಲ. ಅದು ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಮಂಡಳಿ ತೀರ್ಮಾನಿಸುತ್ತದೆ. ಅಲ್ಲದೆ, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಅವರ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ. ಸ್ಥಳ ನಿಗದಿ ನಂತರ ಸಿಎಂ ಹಾಗೂ ನನ್ನ ಬಳಿ ಚರ್ಚಿಸಿ ತರುವಾಯ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಪ್ರಾಧಿಕಾರದ ಅನುಮತಿ ಪಡೆದು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ನಮ್ಮ ಊರಿನಲ್ಲಿ ವಿಮಾನ ನಿಲ್ದಾಣವಾಗಬೇಕು ಎನ್ನುವ ಆಸೆ ನನಗಿದೆ. ಆದರೆ, ಆ ರೀತಿ ಮಾಡಲು ಆಗುವುದಿಲ್ಲ. ವಿಮಾನ ನಿಲ್ದಾಣ ನಿರ್ಮಾಣವಾಗಬೇಕೆಂದರೆ ಹಲವು ನಿಯಮಗಳಿವೆ. ಬೆಟ್ಟ-ಗುಡ್ಡಗಳು ಇರಬಾರದು, ಫ್ಲೈಯಿಂಗ್‌ ಜೋನ್‌ ಇರಬೇಕು. ಹೀಗೆ ಹಲವು ನಿಯಮಗಳಿವೆ. ಅಲ್ಲದೆ, 4,400 ಎಕರೆ ಭೂಮಿ ಬೇಕು ಎಂದೂ ಅಂದಾಜಿಸಲಾಗಿದೆ. ಈ ಎಲ್ಲವೂ ಸಮರ್ಪಕವಾಗಿದ್ದರೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅನುಮತಿ ಸಿಗಲಿದೆ ಎಂದು ವಿವರಿಸಿದರು.

ಚಿತ್ರೀಕರಣಕ್ಕೆ ವಿಚಾರವಾಗಿ ಸುದೀಪ್ ಭೇಟಿ: ಡಿಕೆಶಿ ಸ್ಪಷ್ಟನೆ

ನಟ ಸುದೀಪ್‌ ಭೇಟಿ ಕುರಿತು ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, ನಟ ಸುದೀಪ್‌ ಅವರು ಸೌಜನ್ಯಕ್ಕಾಗಿ ಭೇಟಿ ಮಾಡಿದ್ದರು. ತಮ್ಮ ಚಿತ್ರದ ಚಿತ್ರೀಕರಣಕ್ಕೆ ತೊಂದರೆಯಾದ ಕಾರಣಕ್ಕಾಗಿ ನನ್ನ ಬಳಿ ಬಂದಿದ್ದರು. ಸಂಬಂಧಪಟ್ಟವರಿಗೆ ತಿಳಿಸುತ್ತೇನೆ ಎಂದು ಹೇಳಿದ್ದೇನೆ. ರಾಜಕಾರಣದ ಬಗ್ಗೆ ಚರ್ಚೆಗೆ ಬಂದಿರಲಿಲ್ಲ. ಒಬ್ಬ ಗೆಳೆಯರಾಗಿ ನನ್ನನ್ನು ಭೇಟಿಯಾಗಿದ್ದಾರಷ್ಟೇ ಎಂದು ಸ್ಪಷ್ಟಪಡಿಸಿದರು.