ಸಾರಾಂಶ
ಮದ್ದೂರು : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕಮಿಷನ್ ತೆಗೊಂಡು ಅಭ್ಯಾಸ ಇರಬೇಕು ಅನ್ನಿಸುತ್ತೆ. ಅದಕ್ಕೆ ಅವರು ಯಾವಾಗಲೂ ಕಮಿಷನ್ ಬಗ್ಗೆಯೇ ಮಾತನಾಡುತ್ತಿರುತ್ತಾರೆ ಎಂದು ಶಾಸಕ ಕದಲೂರು ಉದಯ್ ವ್ಯಂಗ್ಯವಾಡಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯುವಕರಿಗೆ ಉದ್ಯೋಗ ಕೊಡಲಿ, ಕೈಗಾರಿಕಾ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಿ, ಗೆದ್ದ ಕ್ಷೇತ್ರಕ್ಕೆ ಏನಾದರೂ ಕೊಡುಗೆ ಕೊಡಲಿ ಎಂದು ಮೋದಿ ಅವರು ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ನೀಡಿದ್ದಾರೆ. ಆದರೆ, ಅದನ್ನು ಬಿಟ್ಟು ಟೀಕೆ ಮಾಡುವುದರಲ್ಲೇ ಕುಮಾರಸ್ವಾಮಿ ಕಾಲಾಹರಣ ಮಾಡುತ್ತಿದ್ದಾರೆ ಎಂದು ಜರಿದರು.
ಕೇಂದ್ರ ಸಚಿವರು ಮಾತನಾಡಿದರೆ ಅದಕ್ಕೊಂದು ತೂಕ ಇರಬೇಕು. ಅದಕ್ಕೊಂದು ಬೆಲೆ ಇರಬೇಕು. ಟೀಕೆ ಮಾಡುವುದರಲ್ಲಿ ೫ ಪರ್ಸೆಂಟ್ ಸುಳ್ಳು ಇರಲಿ ಪರವಾಗಿಲ್ಲ. ಅದು ಬಿಟ್ಟು ನೂರಕ್ಕೆ ನೂರು ಸುಳ್ಳಾದ್ರೆ ಏನರ್ಥ ಎಂದು ಪ್ರಶ್ನಿಸಿದರು.
ಬಸ್ ದರ ಏರಿಕೆ ಬಗ್ಗೆ ಪ್ರತಿಕ್ರಿಯಿಸಿ, ಹಿಂದೆ ಇವರೆಲ್ಲರೂ ಮಾಡಿ ಈಗ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ೧೫ ವರ್ಷಗಳ ಹಿಂದೆ ದರ ಹೆಚ್ಚಿಸಿದ್ದು, ಈಗ ದರ ಪರಿಷ್ಕರಿಸಲಾಗಿದೆ. ಪ್ರಸ್ತುತ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಿದೆ. ಅದಕ್ಕೆ ದರ ಹೆಚ್ಚಿಸಲಾಗಿದೆ. ೧೫ ವರ್ಷದ ಬಳಿಕವೂ ದರ ಹೆಚ್ಚಿಸದಿದ್ದರೆ ಸಂಸ್ಥೆ ನಡೆಸಲು ಹೇಗೆ ಸಾಧ್ಯ ಎಂದರು.
ಸಮುದಾಯದವರು ಸಭೆ ಮಾಡಿದರೆ ತಪ್ಪೇನು?: ರಮೇಶ್ ಬಂಡಿಸಿದ್ದೇಗೌಡ
ಮಂಡ್ಯ : ಸಮುದಾಯದವರು ಸೇರಿಕೊಂಡು ಸಭೆ ನಡೆಸಿದರೆ ತಪ್ಪೇನು. ನಮ್ಮ ಪಕ್ಷದಲ್ಲಿ ಏನಾಗಬೇಕು. ನಾವು ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಕೇಳಬೇಕಲ್ವಾ ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ ತಿಳಿಸಿದರು.
ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಮಾತಾಡಿದರೆ ಮಾತನಾಡಿದರು ಅಂತೀರಾ. ಮಾತನಾಡದಿದ್ದರೆ ಆ ಸಮುದಾಯದವರು ಸೇರುತ್ತಿಲ್ಲ, ಒಬ್ಬರಿಗೊಬ್ಬರು ಮಾತನಾಡುತ್ತಿಲ್ಲ ಅಂತೀರಾ. ಪಕ್ಷದ ಸಂಘಟನೆಗಾಗಿ ನಾವು ಸಭೆ ಸೇರಿದ್ದೆವು. ಯಾವ ಸಭೆ ಸೇರಿದರೂ ಒಳರಾಜಕೀಯ ಎನ್ನುವುದರಲ್ಲಿ ಅರ್ಥವಿದೆಯೇ ಎಂದು ಪ್ರಶ್ನಿಸಿದರು.
ಸಿಎಂ ಬದಲಾವಣೆ ವಿಚಾರ ಕಾಂಗ್ರೆಸ್ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಯಾವ ಕಾಲದಲ್ಲಿ ಯಾರನ್ನು ಮಂತ್ರಿ ಮಾಡಬೇಕು ಎನ್ನುವುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ ಎಂದ ರಮೇಶ್ ಬಂಡಿಸಿದ್ದೇಗೌಡ ಅವರು, ಸಚಿವ ಸಂಪುಟ ಬದಲಾವಣೆ ಕುರಿತು ಸುಳಿವು ನೀಡಿದರು. ಸಂಕ್ರಾತಿ ಬಳಿಕ ಶಾಸಕ ನರೇಂದ್ರಸ್ವಾಮಿ ಮಂತ್ರಿ ಆಗುತ್ತಾರೆ. ನಾನು ಮಂತ್ರಿಯಾಗುವಷ್ಟು ದೊಡ್ಡಮಟ್ಟಕ್ಕೆ ಬೆಳೆದಿಲ್ಲ. ನರೇಂದ್ರಸ್ವಾಮಿ ಮಂತ್ರಿಯಾದರೆ ಸಾಕು ನಮಗೆ. ಅವರು ಮಂತ್ರಿ ಆಗಬೇಕು ಎಂಬ ಒತ್ತಾಯ ನನ್ನದು. ಪ್ರಾಮಾಣಿಕವಾಗಿ ಮಂತ್ರಿ ಆಗುತ್ತಾರೆ, ಆಗಲೇಬೇಕು. ಸಂಕ್ರಾತಿ ಆದ ಬಳಿಕ ನರೇಂದ್ರಸ್ವಾಮಿ ಮಂತ್ರಿ ಆಗೇ ಆಗುತ್ತಾರೆ ಎಂದು ಭವಿಷ್ಯ ನುಡಿದರು.