ಸಾರಾಂಶ
ಆದಿ ಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿಯವರ ಫೋನ್ ಟ್ಯಾಪಿಂಗ್ ಮಾಡಿಸಿದ್ದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ
ಮಂಡ್ಯ: ಆದಿ ಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿಯವರ ಫೋನ್ ಟ್ಯಾಪಿಂಗ್ ಮಾಡಿಸಿದ್ದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ
ಗುರುವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು ಫೋನ್ ಟ್ಯಾಪಿಂಗ್ ವಿಚಾರ ಪ್ರಸ್ತಾಪಿಸಿ, ಧರ್ಮ ಪೀಠವೊಂದಕ್ಕೆ ಅಗೌರವ ಇದಕ್ಕಿಂತ ಬೇಕಾ? ಎಂದು ಪ್ರಶ್ನಿಸಿದರು.
ಇದೇ ವೇಳೆ ಆದಿಚುಂಚನಗಿರಿ ಮಠ, ಬಾಲಗಂಗಾಧರನಾಥ ಸ್ವಾಮೀಜಿ ಅವರಿಗೆ ಪರ್ಯಾಯವಾಗಿ ಎರಡನೇ ಮಠ ಮತ್ತು ಎರಡನೇ ಸ್ವಾಮೀಜಿ ಹುಟ್ಟುಹಾಕಿದ್ದು ಯಾರು ಎಂದು ಪ್ರಶ್ನಿಸುವ ಮೂಲಕ ಗೌಡರ ಕುಟುಂಬ ಹೆಸರೆತ್ತದೆ ಅಸಮಾಧಾನ ಹೊರಹಾಕಿದರು.
ಎಸ್ಸೆಂ ಕೃಷ್ಣಗೆ ಅವಕಾಶ ತಪ್ಪಿಸಿದ್ರು: ಒಕ್ಕಲಿಗ ನಾಯಕ ಎಸ್.ಎಂ.ಕೃಷ್ಣ ಅವರಿಗೆ 2ನೇ ಬಾರಿ ಮುಖ್ಯಮಂತ್ರಿ ಆಗುವ ಅವಕಾಶ ತಪ್ಪಿಸಿದ್ದೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಎಂದು ಇದೇ ವೇಳೆ ಚಲುವರಾಯಸ್ವಾಮಿ ಆರೋಪಿಸಿದರು.
ಎಚ್.ಡಿ.ಕುಮಾರಸ್ವಾಮಿ ಅವರು ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿದ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 2004ರಲ್ಲಿ ಯಾವ ಪಕ್ಷಕ್ಕೂ ಬಹುಮತ ಬಂದಿರಲಿಲ್ಲ. ಆ ಸಂದರ್ಭದಲ್ಲಿ ಎಸ್.ಎಂ.ಕೃಷ್ಣ ತಮಗೆ ಮತ್ತೊಂದು ಅವಕಾಶಕೊಡಿ ಎಂದು ಜೆಡಿಎಸ್‌ಗೆ ಕೇಳಿದ್ದರು. ಆಗ ನಾನು ಜೆಡಿಎಸ್‌ನಲ್ಲೇ ಇದ್ದೆ. ಅಂದು ಮಂಡ್ಯ ಜಿಲ್ಲೆಯ ಒಕ್ಕಲಿಗ ನಾಯಕ ಎಸ್.ಎಂ.ಕೃಷ್ಣರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಗದ್ದುಗೆಯಲ್ಲಿ ಕೂರಿಸುವ ಅವಕಾಶ ದೇವೇಗೌಡರು ಮತ್ತು ಜೆಡಿಎಸ್ ಕೈಯಲ್ಲಿತ್ತು. ಆದರೆ ಅವರು ಅದಕ್ಕೆ ಅವಕಾಶ ನೀಡಲಿಲ್ಲ ಎಂದರು.
ಅಂದು ಮಲ್ಲಿಕಾರ್ಜುನ ಖರ್ಗೆಯವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸುವ 2ನೇ ಆಯ್ಕೆಯೂ ಜೆಡಿಎಸ್ ಮುಂದಿತ್ತು. ಆದರೆ, ಅದನ್ನೂ ನಿರಾಕರಿಸಲಾಯಿತು. ಅದರ ಬದಲು ತಾವು ಹೇಳಿದಂತೆ ಕೇಳಬೇಕೆಂಬ ಕಾರಣಕ್ಕೆ ಧರ್ಮಸಿಂಗ್ ಅವರನ್ನು ಕರೆತಂದು ಮುಖ್ಯಮಂತ್ರಿ ಮಾಡಿದರು. ಆದರೆ ಈಗ ಚುನಾವಣೆ ಬಂತು ಎಂದು ಎಲ್ಲರ ಮನೆಗೆ ಹೋಗುತ್ತಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ಚಲುವರಾಯಸ್ವಾಮಿ ಗುಡುಗಿದರು.