ಕುಮಾರಸ್ವಾಮಿ ಅವರೂ ಮುಖ್ಯಮಂತ್ರಿ ಆಗಿದ್ದಾಗ ಅರ್ಜಿ ಸಲ್ಲಿಸಿ ಮುಡಾ ಬದಲಿ ನಿವೇಶನ ಪಡೆದಿದ್ದಾರೆ : ಕಾಂಗ್ರೆಸ್‌

| Published : Jul 18 2024, 01:30 AM IST / Updated: Jul 18 2024, 04:45 AM IST

ಕುಮಾರಸ್ವಾಮಿ ಅವರೂ ಮುಖ್ಯಮಂತ್ರಿ ಆಗಿದ್ದಾಗ ಅರ್ಜಿ ಸಲ್ಲಿಸಿ ಮುಡಾ ಬದಲಿ ನಿವೇಶನ ಪಡೆದಿದ್ದಾರೆ : ಕಾಂಗ್ರೆಸ್‌
Share this Article
  • FB
  • TW
  • Linkdin
  • Email

ಸಾರಾಂಶ

 ಮುಡಾದಿಂದ   ಸಿದ್ದರಾಮಯ್ಯ ಬದಲಿ ನಿವೇಶನ ಪಡೆದಿದ್ದಾರೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೇ ಸ್ವತಃ ಮುಖ್ಯಮಂತ್ರಿ ಆಗಿದ್ದಾಗ ಬದಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ಬರೋಬ್ಬರಿ 32,800 ಚದರಡಿ ವಿಸ್ತೀರ್ಣದ ಕೈಗಾರಿಕಾ ನಿವೇಶನ ಪಡೆದಿದ್ದರು ಎಂದು ಕಾಂಗ್ರೆಸ್‌ ಆರೋಪಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಿ ನಿವೇಶನ ಪಡೆದಿದ್ದಾರೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೇ ಸ್ವತಃ ಮುಖ್ಯಮಂತ್ರಿ ಆಗಿದ್ದಾಗ ಬದಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ಬರೋಬ್ಬರಿ 32,800 ಚದರಡಿ ವಿಸ್ತೀರ್ಣದ ಕೈಗಾರಿಕಾ ನಿವೇಶನ ಪಡೆದಿದ್ದರು ಎಂದು ಕಾಂಗ್ರೆಸ್‌ ಆರೋಪಿಸಿದೆ.

1985ರಲ್ಲಿ ಮೈಸೂರು ನಗರದ ಕಿಲ್ಲೆ ಮೊಹಲ್ಲ ಕೈಗಾರಿಕಾ ಉಪನಗರದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರು 17-ಬಿ1 ನಿವೇಶನ ಸಂಖ್ಯೆಯ 21,000 (75x280) ಚದರಡಿ ಕೈಗಾರಿಕಾ ನಿವೇಶನ ಪಡೆದಿದ್ದರು. ಈ ಸಂಬಂಧ ಬರೋಬ್ಬರಿ 32 ವರ್ಷಗಳ ಬಳಿಕ 2017ರ ಫೆಬ್ರವರಿಯಲ್ಲಿ ಮುಡಾಗೆ ಮನವಿ ಸಲ್ಲಿಸಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ತಮಗೆ ಹಂಚಿಕೆಯಾಗಿರುವ ನಿವೇಶನವು 21,000 ಚದರಡಿಗೆ ಬದಲಿಗೆ 13,064 (46x284) ಚದರಡಿ ಮಾತ್ರ ಇದೆ. ಹೀಗಾಗಿ ಬದಲಿ ನಿವೇಶನ ಮಂಜೂರು ಮಾಡಿ ಎಂದು ಕೋರಿದ್ದರು. ಅಲ್ಲದೆ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲೇ ಈ ಸಂಬಂಧ ಮುಡಾ ಮೇಲೆ ಒತ್ತಡ ಹೇರಲು 2017, 2019, 2020ರ ನ.15ರಂದು ಮೂರು ಬಾರಿ ಮನವಿ ಸಲ್ಲಿಸಿ ಬದಲಿ ನಿವೇಶನ ಪಡೆದಿದ್ದಾರೆ ಎಂದು ಕಾಂಗ್ರೆಸ್‌ ಕಿಡಿಕಾರಿದೆ.

32,800 ಚದರಡಿ ಬದಲಿ ನಿವೇಶನ:

ಮುಡಾ ಮೇಲೆ ಪ್ರಭಾವ ಬೀರಿದ್ದ ಕುಮಾರಸ್ವಾಮಿ ಅವರು 2023ರ ಜ.1ರಂದು ನಡೆದ ಪ್ರಾಧಿಕಾರದ (ಮುಡಾ) ಸಭೆಯಲ್ಲಿ 17-ಬಿ1 ನಿವೇಶನದ ಬದಲಿಗೆ ಇಂಡಸ್ಟ್ರಿಯಲ್‌ ಸಬರ್ಬ್‌ 3ನೇ ಹಂತದ ಬಡಾವಣೆಯ 23-ಇ ನಿವೇಶನ ಸಂಖ್ಯೆಯ 32,800 (82x400) ಚದರಡಿ ವಿಸ್ತೀರ್ಣದ ನಿವೇಶನ ಹಂಚಿಕೆ ಮಾಡಿಸಿಕೊಂಡಿದ್ದರು. ಈ ಸಂಬಂಧ ಮುಡಾವು 21,000 ಚದರಡಿ ವಿಸ್ತೀರ್ಣದ ಬದಲಿಗೆ 32,800 ಚದರಡಿ ವಿಸ್ತೀರ್ಣದ ಬದಲಿ ನಿವೇಶನ ನೀಡಲು ಆದೇಶ ಹೊರಡಿಸಿದೆ. ಹೀಗಿರುವಾಗ ಸ್ವಂತ ಭೂಮಿ ಕಳೆದುಕೊಂಡು ಪರಿಹಾರವಾಗಿ ನಿವೇಶನ ಪಡೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವ ನೈತಿಕತೆ ಕುಮಾರಸ್ವಾಮಿ ಅವರಿಗೆ ಎಲ್ಲಿದೆ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.