‘ಮೆಟಾ ಗ್ಲಾಸ್‌ ಹಾಕಿಕೊಂಡು ಬಂದಿದ್ದ ವ್ಯಕ್ತಿಯಿಂದ ನನ್ನ ಮೇಲೆಯೇ ನಡೆದ ಸ್ಟಿಂಗ್‌ ಆಪರೇಷನ್‌ ಪ್ರಯತ್ನ... ದೇವರು ಕೊಟ್ಟಿರುವ ದಿವ್ಯಶಕ್ತಿಯಿಂದ ಆತನನ್ನು ಅನುಮಾನಿಸಿ ತನಿಖೆಗೆ ಒಳಪಡಿಸಿದ ಪರಿ

ಬೆಂಗಳೂರು : ‘ಮೆಟಾ ಗ್ಲಾಸ್‌ ಹಾಕಿಕೊಂಡು ಬಂದಿದ್ದ ವ್ಯಕ್ತಿಯಿಂದ ನನ್ನ ಮೇಲೆಯೇ ನಡೆದ ಸ್ಟಿಂಗ್‌ ಆಪರೇಷನ್‌ ಪ್ರಯತ್ನ... ದೇವರು ಕೊಟ್ಟಿರುವ ದಿವ್ಯಶಕ್ತಿಯಿಂದ ಆತನನ್ನು ಅನುಮಾನಿಸಿ ತನಿಖೆಗೆ ಒಳಪಡಿಸಿದ ಪರಿ... ತನಿಖೆಯಲ್ಲಿ ಲಭ್ಯವಾದ ಖಚಿತ ಮಾಹಿತಿ ಮೇರೆಗೆ ಸಂಪುಟ ಸಹೋದ್ಯೋಗಿಗಳಿಗೂ ನೀಡಿದ ಎಚ್ಚರಿಕೆ ಗಂಟೆ...!’

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ‘ಕನ್ನಡಪ್ರಭ’ದ ಸೋದರ ಸಂಸ್ಥೆ ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ಮೇಲಿನ ಸ್ಟಿಂಗ್‌ ಆಪರೇಷನ್‌ ಪ್ರಯತ್ನವನ್ನು ಎಳೆ ಎಳೆಯಾಗಿ ವಿವರಿಸಿದರು.

ರಾಜ್ಯದಲ್ಲಿ ರಾಜಕಾರಣಿಗಳನ್ನು ಗುರಿಯಾಗಿಸಿ ನಡೆಯುತ್ತಿರುವ ಸ್ಟಿಂಗ್‌ ಆಪರೇಷನ್‌ ಪ್ರಯತ್ನಗಳ ವಿಚಾರ ಭಾರೀ ಸದ್ದು ಮಾಡುತ್ತಿದೆ. ಈ ನಡುವೆ ತಮ್ಮನ್ನೂ ಸ್ಟಿಂಗ್‌ ಆಪರೇಷನ್‌ ಮಾಡುವ ಪ್ರಯತ್ನ ನಡೆದಿತ್ತು ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ. ಆದರೆ, ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿದ್ದು ಈವರೆಗೂ ಕಂಡು ಬಂದಿಲ್ಲವಲ್ಲ ಎಂಬ ಪ್ರಶ್ನೆಗೆ, ಯಾರು ಹೇಳಿದ್ದು ನನ್ನ ಮೇಲಿನ ಸ್ಟಿಂಗ್‌ ಆಪರೇಷನ್‌ ಪ್ರಕರಣದಲ್ಲಿ ಕ್ರಮ ಆಗಿಲ್ಲ ಅಂತ. ಎಲ್ಲವನ್ನೂ ಬಹಿರಂಗಪಡಿಸಲು ಆಗುವುದಿಲ್ಲ. ಇಷ್ಟನ್ನು ಮಾತ್ರ ಹೇಳಬಲ್ಲೆ. ನನಗೆ ಆ ದೇವರು ಒಂದು ಶಕ್ತಿ ನೀಡಿದ್ದಾನೆ. ಒಬ್ಬರ ಮುಖ ನೋಡಿದರೆ ಸಾಕು ಆತ ಯಾವ ಕಾರಣಕ್ಕೆ ನನ್ನ ಬಳಿ ಬಂದಿದ್ದಾನೆ, ಅವನ ಉದ್ದೇಶ ಏನಿರಬಹುದು ಎಂಬುದು ಗೊತ್ತಾಗುತ್ತದೆ. ನಾನು ಫೇಸ್‌ ರೀಡಿಂಗ್‌ ಬಲ್ಲೆ. ಇದರಿಂದ ನನ್ನ ಮೇಲಿನ ಸ್ಟಿಂಗ್‌ ಆಪರೇಷನ್‌ ಪ್ರಯತ್ನ ಪತ್ತೆ ಹಚ್ಚಲು ಸಾಧ್ಯವಾಯಿತು ಎಂದರು.

ಅಂದು ನನ್ನ ಬಳಿ ಯಾರೋ ಒಬ್ಬ ಉದ್ಯಮಿ ಬಂದಿದ್ದ. ನಮ್ಮ ಅಧಿಕಾರಿಗಳೇ ಯಾರೋ ಅವಕಾಶ ಕೊಡಿಸಿದ್ದರು. ಬಂದವನು ತನ್ನ ಬ್ಯುಸಿನೆಸ್‌ ವಿಚಾರ ಮಾತನಾಡಿದ. ಸ್ವಲ್ಪ ಸಮಯ ನಂತರ ನನ್ನ ಆ್ಯಂಟಿ ಚೇಂಬರ್‌ಗೆ (ಒಳಕೋಣೆ) ಕರೆದುಕೊಂಡು ಹೋಗಿ ಲ್ಯಾಪ್‌ಟಾಪ್‌ ತೆಗೆದು ರಾಜಕೀಯ ಮಾತನಾಡಲು ಶುರು ಮಾಡಿದ. ರಾಜಕೀಯ ಮೇಧಾವಿ ರೀತಿ ನಾನು ಆ ಬೂತನ್ನು ಹಂಗೆ ಮಾಡುತ್ತೇನೆ. ಹಂಗೆ, ಹಿಂಗೆ... ಅಂತ ಹೇಳಲು ಆರಂಭಿಸಿದ. ನಾನು ಅವನ ಮುಖ ನೋಡಿದೆ, ಅವನ ಕನ್ನಡಕ ನೋಡಿದೆ. ಮೆಟಾ ಗ್ಲಾಸ್‌ ಹಾಕಿದ್ದಾನೆ. ಯಾಕೋ ಅನುಮಾನ ಬಂತು. ಅವನ ಇಡೀ ವಿವರ ತರಿಸಿ ನೋಡಿ ತನಿಖೆ ಮಾಡಿಸಿದೆ.

ನನ್ನ ಬಳಿ ಬಂದಾಗ ಮತ್ತು ಸಚಿವ ಸತೀಶ್‌ ಜಾರಕಿಹೊಳಿ ಬಳಿ ಹೋದಾಗ ಮಾತ್ರ ಈ ಮೆಟಾ ಗ್ಲಾಸ್‌ನ ಕನ್ನಡಕ ಹಾಕಿದ್ದ. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಕೇಂದ್ರದ ಒಬ್ಬ ಸಚಿವರ ಬಳಿ ಹೋದಾಗ ಕನ್ನಡಕ ಹಾಕಿರಲಿಲ್ಲ. ಇದೆಲ್ಲವೂ ತನಿಖೆಯಲ್ಲಿ ಗೊತ್ತಾಯಿತು. ಮತ್ತೆ ನನ್ನ ಸುತ್ತಮುತ್ತಲ ಕೆಲ ನಾಯಕರು, ಸಚಿವರ ವಿರುದ್ಧವೂ ದೊಡ್ಡಮಟ್ಟದ ಸ್ಟಿಂಗ್‌ ಆಪರೇಷನ್‌ ನಡೆಸುವ ತಯಾರಿ ನಡೆದಿದೆ ಎಂಬ ಮಾಹಿತಿ ಗೊತ್ತಾಯಿತು. ಇದಕ್ಕೆ ಯಾರ್‍ಯಾರನ್ನು ಬಿಟ್ಟಿದ್ದರು ಎನ್ನುವುದೂ ಅರಿವಾಯಿತು. ಈ ಮಾಹಿತಿಯಿಂದಲೇ ನಾನು ಸಚಿವ ಸಂಪುಟ ಸಭೆಯಲ್ಲಿ ನನ್ನ ಸಹೋದ್ಯೋಗಿಗಳಿಗೂ ಎಲ್ಲರೂ ಹುಷಾರಾಗಿರಿ ಎಂದು ಎಚ್ಚರಿಕೆ ನೀಡಿದ್ದು ನಿಜ ಎಂದರು. ಅಲ್ಲದೆ, ಸಮಯ ಬಂದಾಗ ಇನ್ನಷ್ಟು ಮಾಹಿತಿಗಳನ್ನು ಬಹಿರಂಗಪಡಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

 ಫಾರ್ಮ್‌ 7 ಬಳಸಿ ಪ್ರತಿ ಕ್ಷೇತ್ರದಲ್ಲಿ 10,000 ದಲಿತ, ಅಲ್ಪಸಂಖ್ಯಾತರ ಮತ ರದ್ದು ಯತ್ನ

ಇದೇ ವೇಳೆ, ಸಮಗ್ರ ವಿಶೇಷ ಮತಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಹೊಸದಾಗಿ ಫಾರ್ಮ್‌-7 ಪರಿಚಯಿಸುವ ಮೂಲಕ ಪ್ರತಿ ಪಕ್ಷೇತ್ರದಲ್ಲೂ 10ರಿಂದ 15 ಸಾವಿರ ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದವರ ಮತಗಳನ್ನು ರದ್ದುಪಡಿಸುವ ಪ್ರಯತ್ನ ನಡೆದಿತ್ತು. ನಾನು ಹೋಗಿ ಹೋರಾಟ ಮಾಡದೆ ಹೋಗಿದ್ದರೆ ಇಂತಹ ನೀಚ ಕೃತ್ಯ ನಡೆದುಹೋಗುತ್ತಿತ್ತು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಬಿಜೆಪಿಯ ಆರ್‌.ಅಶೋಕ್‌, ವಿಜಯೇಂದ್ರ ಮತ್ತು ಜೆಡಿಎಸ್‌ನ ಕುಮಾರಸ್ವಾಮಿ ಅವರು ಸಾಮೂಹಿಕ ಫಾರ್ಮ್‌ 7 ಸಲ್ಲಿಕೆ ಪ್ರಕರಣದಲ್ಲಿ ಅಮಾಯಕರ ಹೆಸರು, ಸಹಿ, ಮೊಬೈಲ್‌ ನಂಬರ್‌ ಎಲ್ಲವನ್ನೂ ಹಾಕಿಸಿ ತಗಲಾಕಿಸಿ ಈಗ ಅವರ ಮೇಲೆ ಕೇಸು ಹಾಕಬೇಡಿ, ಬಂಧಿಸಬೇಡಿ ಎನ್ನುತ್ತಿದ್ದಾರೆ. ಇದೆಲ್ಲಾ ಅವರಿಗೆ ಏನಕ್ಕೆ ಬೇಕಿತ್ತು? ನಮ್ಮ ಹೋರಾಟದ ಬಳಿಕ ಆಯೋಗದವರು ರಾತ್ರೋರಾತ್ರಿ ಇದಕ್ಕೆ ತಡೆ ನೀಡಿದರು. ಬಳಿಕ ಸಭೆ ಮಾಡಿ ಸೂಕ್ತ ನಿರ್ದೇಶನ ನೀಡಿದರು. ಹಾಗಾಗಿ ರಾಜ್ಯದ ನೈಜ ಮತದಾರರ ಮತ ಹಕ್ಕು ರಕ್ಷಿಸುವಲ್ಲಿ ನನ್ನದೊಂದು ಅಳಿಲು ಸೇವೆ ಆಯಿತು. ಇನ್ನೂ ಎಸ್‌ಐಆರ್‌ ಪೂರ್ಣ ಆಗಿಲ್ಲ ನಡೆಯುತ್ತಿದೆ. ಆದರೂ, ಮತಗಳನ್ನು ರದ್ದುಪಡಿಸುವ ಪ್ರಯತ್ನ ಕ್ರಿಮಿನಲ್‌ ಅಪರಾಧ ಅಲ್ವಾ? ಇದು ನೀಚ ಕೃತ್ಯ ಅಲ್ಲವೇ? ಎಂದು ಕಿಡಿಕಾರಿದರು.

ಡಿಟೆಕ್ಟಿವ್‌ ಡಿಕೆಶಿ ಪತ್ತೆ ಮಾಡಿದ್ಹೇಗೆ

- ಕೆಲ ದಿನಗಳ ಹಿಂದೆ ಉದ್ಯಮಿ ಎಂದು ಹೇಳಿಕೊಂಡ ವ್ಯಕ್ತಿ ನನ್ನ ಭೇಟಿಗೆ ಬಂದಿದ್ದ

- ನಮ್ಮ ಅಧಿಕಾರಿಗಳೇ ಯಾರೋ ನನ್ನ ಜೊತೆಗೆ ಆತನ ಭೇಟಿಗೆ ಅವಕಾಶ ನೀಡಿದ್

- ಮೊದಲಿಗೆ ಬಿಸಿನೆಸ್‌ ಮಾತನಾಡಿದವನು ಬಳಿಕ ತನ್ನ ವರಸೆಯನ್ನೇ ಬದಲಿಸಿದ

- ಬೂತನ್ನು ಹಾಗೆ ಮಾಡ್ತೀನಿ, ಹೀಗೆ ಮಾಡ್ತಿನಿ ಎಂದು ನನ್ನ ಜತೆ ಮಾತಿಗೆ ಯತ್ನಿಸಿದ

- ಆಗ ಆತನನ್ನು ಸೂಕ್ಷ್ಮವಾಗಿ ಗಮನಿಸಿದಾಗ ಆಗ ಮೆಟಾ ಗ್ಲಾಸ್‌ ಧರಿಸಿದ್ದು ಗೊತ್ತಾಯ್ತ

- ಪರಿಶೀಲನೆ ವೇಳೆ ಇತರರ ಜತೆ ಭೇಟಿ ವೇಳೆ ಆತ ಈ ಗ್ಲಾಸ್‌ ಹಾಕಿರ್ಲಿಲ್ಲ ಎಂದು ಖಚಿತ

- ಆಗಲೇ ನನ್ನ ಮತ್ತು ಇತರೆ ಸಚಿವರ ವಿರುದ್ಧ ಸ್ಟಿಂಗ್‌ಗೆ ಯತ್ನಿಸಿದ ವಿಷಯ ಅರಿವಿಗೆ ಬಂತು