ಕಾಂಗ್ರೆಸ್‌ ಪಕ್ಷದಲ್ಲಿ ನಡೆದ ಅಧಿಕಾರ ಹಂಚಿಕೆ ತಿಕ್ಕಾಟ, ಬಿಜೆಪಿಯಲ್ಲಿನ ಒಳ ಬೇಗುದಿ ನಡುವೆಯೇ ಬೆಳಗಾವಿಯ ಚಳಿಗಾಲದ ಅಧಿವೇಶನ ಸೋಮವಾರದಿಂದ ಆರಂಭವಾಗಲಿದೆ. ಕರ್ನಾಟಕದ ಸಮಸ್ಯೆ ಮುಂತಾದ ವಿಷಯ ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಮುಗಿಬೀಳಲು ಪ್ರತಿಪಕ್ಷಗಳು ಸಜ್ಜಾಗಿವೆ.

ಸುವರ್ಣ ವಿಧಾನಸೌಧ : ಕಾಂಗ್ರೆಸ್‌ ಪಕ್ಷದಲ್ಲಿ ನಡೆದ ಅಧಿಕಾರ ಹಂಚಿಕೆ ತಿಕ್ಕಾಟ, ಬಿಜೆಪಿಯಲ್ಲಿನ ಒಳ ಬೇಗುದಿ ನಡುವೆಯೇ ಬೆಳಗಾವಿಯ ಚಳಿಗಾಲದ ಅಧಿವೇಶನ ಸೋಮವಾರದಿಂದ ಆರಂಭವಾಗಲಿದೆ. ಕುರ್ಚಿ ಕಾಳಗ, ಬೆಂಬಲ ಬೆಲೆ ಕೊರತೆ, ನೆರೆ ಪರಿಹಾರ ವಿಳಂಬ, ಸರ್ಕಾರಿ ಖಾಲಿ ಹುದ್ದೆ, ಪೊಲೀಸ್ ವ್ಯವಸ್ಥೆ ವೈಫಲ್ಯ, ತುಂಗಭದ್ರಾ ಕ್ರಸ್ಟ್‌ ಗೇಟ್‌ ಅಳವಡಿಕೆಯಿಂದ ರೈತರಿಗೆ ನೀರು ಬಿಡದಿರುವುದು, ನೀರಾವರಿ ಯೋಜನೆ, ಉತ್ತರ ಕರ್ನಾಟಕದ ಸಮಸ್ಯೆ ಮುಂತಾದ ವಿಷಯ ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಮುಗಿಬೀಳಲು ಪ್ರತಿಪಕ್ಷಗಳು ಸಜ್ಜಾಗಿವೆ.

ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಒಗ್ಗಟ್ಟು ಪ್ರದರ್ಶನ ಮಾಡುವ ಜತೆಗೆ, ಸರ್ಕಾರದ ಸಾಧನೆಗಳನ್ನು ಅಂಕಿ-ಅಂಶ ಸಹಿತ ಮುಂದಿಟ್ಟು ತಿರುಗೇಟು ನೀಡಲು ಸಜ್ಜಾಗಿದ್ದಾರೆ. ಅಲ್ಲದೆ ಕಬ್ಬು, ಮುಸುಕಿನ ಜೋಳ ಬೆಂಬಲ ಬೆಲೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರದಿಂದ ನಿರ್ಲಕ್ಷ್ಯ, ರಾಜ್ಯದ ನೀರಾವರಿ ಯೋಜನೆಗಳ ಕುರಿತ ಅಲಕ್ಷ್ಯ, ಬಿಜೆಪಿಯಲ್ಲಿನ ಒಡಕು ಮುಂದಿಟ್ಟುಕೊಂಡು ಪ್ರತಿ ದಾಳಿ ನಡೆಸಲೂ ಕೈ ಪಾಳೆಯ ಅಣಿಯಾಗಿದೆ.

ಇದರ ಜತೆಗೆ ದ್ವೇಷ ಭಾಷಣಕ್ಕೆ ಅಂಕುಶ, ಸಾಮಾಜಿಕ ಬಹಿಷ್ಕಾರ ತಡೆಗೆ ಮಹತ್ವ ವಿಧೇಯಕಗಳು ಹಾಗೂ ಜಾನುವಾರು ಅಕ್ರಮ ಸಾಗಣೆದಾರರಿಗೆ ಅನುಕೂಲ ಮಾಡಿಕೊಡುವ ತಿದ್ದುಪಡಿ ವಿಧೇಯಕಗಳ ಮಂಡನೆಯೂ ಈ ಅಧಿವೇಶನದಲ್ಲಿ ಆಗಲಿದೆ. ಹೀಗಾಗಿ ಚಳಿಗಾಲದ ಅಧಿವೇಶನದಲ್ಲಿ ಕಲಾಪ ಕಾವೇರಲಿದ್ದು, ಉಭಯ ಸದನಗಳಲ್ಲಿ ಕದನ ಕೋಲಾಹಲದ ಕುತೂಹಲ ಗರಿಗೆದರಿದೆ.

ಸಂತಾಪ ಸೂಚನೆ ನಿರ್ಣಯ:

ಮೊದಲ ದಿನ ಕಳೆದ ಅಧಿವೇಶನದಿಂದ ಈಚೆಗೆ ನಿಧನರಾದ ಗಣ್ಯರಿಗೆ ಉಭಯ ಸದನಗಳಲ್ಲಿ ಸಂತಾಪ ಸೂಚನೆ ನಿರ್ಣಯ ಮಂಡಿಸಲಾಗುತ್ತದೆ. ಪದ್ಮಶ್ರೀ ಸಾಲುಮರದ ತಿಮ್ಮಕ್ಕ, ಹಾಲಿ ಶಾಸಕರಾಗಿದ್ದ ಎಚ್.ವೈ.ಮೇಟಿ, ಮಾಜಿ ಶಾಸಕ ಆರ್‌.ವಿ.ದೇವರಾಜು, ಬಾಲಿವುಡ್‌ ಹಿರಿಯ ಕಲಾವಿದ ಧರ್ಮೇಂದ್ರ, ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಎಂ.ಎಸ್‌.ಉಮೇಶ್, ಹರೀಶ್ ರಾಯ್‌, ಹಿರಿಯ ಪತ್ರಕರ್ತರಾದ ಟಿಜೆಎಸ್‌ ಜಾರ್ಜ್, ಐಎಎಸ್‌ ಅಧಿಕಾರಿ ಮಹಾಂತೇಶ ಬೀಳಗಿ ಸೇರಿ ಹಲವು ಗಣ್ಯರಿಗೆ ಸಂತಾಪ ಸಲ್ಲಿಸುವ ಸಾಧ್ಯತೆಯಿದೆ. ಹಾಲಿ ಶಾಸಕರ ನಿಧನದಿಂದಾಗಿ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಬಹುದು ಅಥವಾ ಭೋಜನ ವಿರಾಮದ ಬಳಿಕ ಮತ್ತೆ ಕಲಾಪ ಮುಂದುವರೆಯಬಹುದು.

ಅಧಿವೇಶನಕ್ಕೂ ಮೊದಲೇ ಬ್ರದರ್ಸ್ ಒಗ್ಗಟ್ಟು:

ಚಳಿಗಾಲದ ಅಧಿವೇಶನದಲ್ಲಿ ನಾಯಕತ್ವ ಬದಲಾವಣೆ ವಿಚಾರ ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಮುಗಿಬೀಳುವ ಸಾಧ್ಯತೆಯಿದೆ. ಅವಿಶ್ವಾಸ ನಿರ್ಣಯ ಮಂಡನೆಗೂ ಪ್ರತಿಪಕ್ಷಗಳು ಅಣಿಯಾಗಿದ್ದವು, ಇದರ ಸೂಚನೆ ಅರಿತ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರು ಬ್ರೇಕ್‌ಫಾಸ್ಟ್‌ ಮೀಟಿಂಗ್‌ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ.

ಜತೆಗೆ ಬಿಜೆಪಿ ಒಡಕು, ಬಿಜೆಪಿ-ಜೆಡಿಎಸ್‌ ನಡುವಿನ ಸಾಮರಸ್ಯ ಕೊರತೆ, ಜೆಡಿಎಸ್‌ನಲ್ಲಿ ಜಿ.ಟಿ.ದೇವೇಗೌಡ ಸೇರಿ ಹಲವು ನಾಯಕರು ಪಕ್ಷದ ವಿರುದ್ಧವೇ ಧ್ವನಿ ಎತ್ತಿರುವುದನ್ನೂ ಕಾಂಗ್ರೆಸ್‌ ದಾಳವಾಗಿ ಬಳಸುವ ಸಾಧ್ಯತೆಯಿದೆ. ಮತ್ತೊಂದೆಡೆ ಕಬ್ಬು ಬೆಂಬಲ ಬೆಲೆ ಹೆಚ್ಚಳ ಮಾಡದಿರುವ ಕೇಂದ್ರದ ನಿರ್ಲಕ್ಷ್ಯ, ಸಕ್ಕರೆ ಎಂಎಸ್‌ಪಿ ದರ ಹೆಚ್ಚಿಸದ, ರಾಜ್ಯದಿಂದ ಹೆಚ್ಚಿನ ಎಥೆನಾಲ್‌ ಖರೀದಿಸದ ಕೇಂದ್ರ ಸರ್ಕಾರದಿಂದಲೇ ಕಬ್ಬು ಬೆಲೆ ಕುಸಿದಿದೆ ಎಂದು ಬೊಟ್ಟು ಮಾಡಿ ಬಿಜೆಪಿ ಮೇಲೆ ಸವಾರಿ ಮಾಡಲು ಕಾಂಗ್ರೆಸ್ ಸಜ್ಜಾಗಿದೆ.

ಮುಸುಕಿನ ಜೋಳ ಬೆಂಬಲ ಬೆಲೆ ಹೆಚ್ಚಳಕ್ಕೂ ಆಗ್ರಹಿಸಲಿದ್ದು, ರಾಜ್ಯದ ನೀರಾವರಿ ಯೋಜನೆಗಳಿಗೆ ಒಪ್ಪಿಗೆ ನೀಡದಿರುವುದು. ಅನುದಾನ ತಾರತಮ್ಯ ಸೇರಿ ಹಲವು ವಿಚಾರ ಮುಂದಿಟ್ಟುಕೊಂಡು ಪ್ರತಿಪಕ್ಷಗಳನ್ನು ಕಟ್ಟಿಹಾಕಲು ಕಾಂಗ್ರೆಸ್‌ ಈಗಾಗಲೇ ತಂತ್ರಗಾರಿಕೆ ರೂಪಿಸಿದೆ.

ಆಡಳಿತ ಪಕ್ಷಕ್ಕೆ ಸಮಸ್ಯೆಗಳ ಸವಾಲು:

ಅಧಿಕಾರ ಹಂಚಿಕೆ ಗೊಂದಲ, ದೆಹಲಿ ಪರೇಡ್‌ ಅನ್ನು ಬಿಜೆಪಿ ದೊಡ್ಡದಾಗಿ ಬಿಂಬಿಸಿ ಸರ್ಕಾರಕ್ಕೆ ಅಧಿವೇಶನಕ್ಕೆ ಮುಜುಗರ ಉಂಟು ಮಾಡುವ ಸಾಧ್ಯತೆ ಹೆಚ್ಚಿದೆ. ಜತೆಗೆ ರಾಜ್ಯದ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ನಿರೀಕ್ಷೆಯೂ ಇದೆ. ನೆರೆಹಾನಿ ಬೆಳೆ ಪರಿಹಾರ ನೀಡದಿರುವುದು, ಮುಸುಕಿನ ಜೋಳ, ಕಬ್ಬು ಬೆಲೆ ಹೆಚ್ಚಳಕ್ಕೆ ರೈತರ ಹೋರಾಟ ಪ್ರಸ್ತಾಪಿಸಲಿದ್ದಾರೆ. ತುಂಗಭದ್ರಾ ಜಲಾಶಯದಿಂದ 2ನೇ ಬೆಳೆಗೆ ನೀರು ಹರಿಸದಿರುವುದರಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಪರಿಹಾರ ನೀಡುವಂತೆಯೂ ಬೇಡಿಕೆ ಇಡಲಿದ್ದಾರೆ. ಮತ್ತೊಂದೆಡೆ ಡ್ರಗ್ಸ್‌ ದಂಧೆಯಲ್ಲಿ ಪೊಲೀಸರೇ ನಿರತರಾಗಿರುವುದು, ಪೊಲೀಸ್‌ ಆಯುಕ್ತರ ಕಚೇರಿಯಲ್ಲೇ ಪೊಲೀಸ್ ಪೇದೆಯಿಂದ ಕಳ್ಳತನ, ಎಟಿಎಂ ಲೂಟಿಯಂತಹ ಅಪರಾಧ ಕೃತ್ಯಗಳಲ್ಲಿನ ಪೊಲೀಸರ ಭಾಗಿ ಬಗ್ಗೆ ಪ್ರಸ್ತಾಪಿಸಿ ಕಾನೂನು ಸುವ್ಯವಸ್ಥೆ ವೈಫಲ್ಯ ಎತ್ತಿ ತೋರುವ ಸಾಧ್ಯತೆಯಿದೆ.

ಕಂದಾಯ ಸಮಸ್ಯೆಗಳು, ಜಿಬಿಎ ಹಾಗೂ ಗ್ರಾಮೀಣ ಭಾಗದಲ್ಲಿ ಉಂಟಾಗಿರುವ ಇ-ಖಾತಾ ಸಮಸ್ಯೆ, ಕಟ್ಟಡ ಮಂಜೂರಾತಿ ಇಲ್ಲದ ಮನೆಗಳಿಗೆ ವಿದ್ಯುತ್‌ ಹಾಗೂ ನೀರು ಇಲ್ಲದಿರುವ ಬಗ್ಗೆ ಪ್ರಸ್ತಾಪಿಸಲಿದ್ದಾರೆ. 16 ಲಕ್ಷಕ್ಕೂ ಹೆಚ್ಚು ಪಡಿತರ ಚೀಟಿಗಳು ರದ್ದಿಗೆ ಗುರುತಿಸಿದ್ದು ಈ ಬಗ್ಗೆಯೂ ಧ್ವನಿ ಎತ್ತುವ ಸಾಧ್ಯತೆಯಿದೆ.

ಖಾಲಿ ಹುದ್ದೆ ಭರ್ತಿಗೆ ಆಗ್ರಹ:

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಗೂ ಮುನ್ನ ಸರ್ಕಾರದಲ್ಲಿ ಖಾಲಿಯಿರುವ 2.50 ಲಕ್ಷಕ್ಕೂ ಹೆಚ್ಚಿನ ಹುದ್ದೆಗಳ ಭರ್ತಿ ಮಾಡಲಾಗುವುದು ಎಂದು ರಾಹುಲ್‌ ಗಾಂಧಿ ಮೂಲಕ ಘೋಷಿಸಲಾಗಿತ್ತು. ಆದರೂ ಸರ್ಕಾರದಿಂದ ನೇಮಕಾತಿ ವಿಳಂಬವಾಗುತ್ತಿರುವುದರ ಬಗ್ಗೆ ವಿರೋಧ ಪಕ್ಷಗಳು ಸದನದಲ್ಲಿ ಪ್ರಸ್ತಾಪಿಸುವ ಸಾಧ್ಯತೆಗಳಿವೆ. ಜತೆಗೆ ಖಾಲಿ ಹುದ್ದೆ ಭರ್ತಿಗೆ ಸರ್ಕಾರದಿಂದ ನಿಖರ ಆಶ್ವಾಸನೆ ನೀಡುವಂತೆ ಪಟ್ಟು ಹಿಡಿಯಲೂ ವಿಪಕ್ಷಗಳು ತೀರ್ಮಾನಿಸಿವೆ. ಈ ವೇಳೆ ಒಳ ಮೀಸಲಾತಿ ಗೊಂದಲದ ಬಗ್ಗೆಯೂ ಗದ್ದಲ ಸೃಷ್ಟಿಯಾಗುವ ನಿರೀಕ್ಷೆ ಇದೆ.

ದುಬಾರಿ ವಾಚ್‌, ಶೇ.63 ಭ್ರಷ್ಟಾಚಾರ ಆರೋಪ ಗದ್ದಲ?

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ದುಬಾರಿ ಕಾರ್ಟಿಯರ್ ವಾಚ್‌ ಧರಿಸಿದ್ದ ವಿಚಾರವೂ ಸದನದಲ್ಲಿ ಪ್ರತಿಧ್ವನಿಸುವ ನಿರೀಕ್ಷೆ ಇದೆ. ಜತೆಗೆ ಉಪ ಲೋಕಾಯುಕ್ತ ನ್ಯಾ. ಬಿ. ವೀರಪ್ಪ ಅವರು ರಾಜ್ಯ ಸರ್ಕಾರದಲ್ಲಿ ಶೇ.63 ರಷ್ಟು ಭ್ರಷ್ಟಾಚಾರವಿದೆ ಎಂದಿದ್ದ ಹೇಳಿಕೆಯೂ ಪ್ರಸ್ತಾಪವಾಗಲಿದ್ದು, ಇದು ಬಿಜೆಪಿ ಅವಧಿ ಬಗ್ಗೆ ನೀಡಿದ ಹೇಳಿಕೆ ಎನ್ನುವ ಮೂಲಕ ಕಾಂಗ್ರೆಸ್‌ ತಿರುಗೇಟು ನೀಡಲು ಸಿದ್ಧತೆ ನಡೆಸಿದೆ.

20ಕ್ಕೂ ಹೆಚ್ಚಿನ ವಿಧೇಯಕಗಳ ಮಂಡನೆ

ಸಾಮಾಜಿಕ ಬಹಿಷ್ಕಾರ ತಡೆಯಲು 3 ವರ್ಷದವರೆಗೆ ಜೈಲುವಾಸ ಸೇರಿ ಇನ್ನಿತರ ಶಿಕ್ಷೆಯನ್ನೊಳಗೊಂಡ ಕರ್ನಾಟಕ ಸಾಮಾಜಿಕ ಬಹಿಷ್ಕಾರ ನಿರ್ಬಂಧ ವಿಧೇಯಕ, ದ್ವೇಷ ಭಾಷಣಕ್ಕೆ ಕಡಿವಾಣ ಹಾಕಲು ಕರ್ನಾಟಕ ದ್ವೇಷ ಭಾಷಣ, ದ್ವೇಷ ಅಪರಾಧ ತಡೆಗಟ್ಟುವ ವಿಧೇಯಕ, ಗೋ ಅಕ್ರಮ ಸಾಗಣೆ ವೇಳೆ ಜಪ್ತಿ ಮಾಡುವ ವಾಹನಗಳನ್ನು ವಾರಸುದಾರರಿಗೆ ವಾಪಸ್‌ ನೀಡುವ ವೇಳೆ ಬ್ಯಾಂಕ್‌ ಗ್ಯಾರಂಟಿ ಬದಲು ಮುಚ್ಚಳಿಕೆ ಪತ್ರ ಪಡೆದು ಬಿಡುಗಡೆ ಮಾಡಲು ಕರ್ನಾಟಕ ಗೋಹತ್ಯೆ ತಡೆಗಟ್ಟುವಿಕೆ ಮತ್ತು ಗೋ ಸಂರಕ್ಷಣೆ ವಿಧೇಯಕಕ್ಕೆ ತಿದ್ದುಪಡಿ ಸೇರಿ 20ಕ್ಕೂ ಹೆಚ್ಚು ವಿಧೇಯಕ ಮಂಡನೆಗೆ ಸಿದ್ಧತೆ ನಡೆಸಲಾಗಿದೆ.

ಸಂಭಾವ್ಯ ಸದನ-ಕದನ

- ಅಧಿವೇಶನದಲ್ಲಿ 20 ವಿಧೇಯಕಗಳ ಮಂಡನೆಗೆ ಸರ್ಕಾರದ ಸಿದ್ಧತೆ

- ರೈತರು ಹಾಗೂ ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಹೆಚ್ಚು ಚರ್ಚೆ ನಿರೀಕ್ಷೆ

- ಮೆಕ್ಕೆಜೋಳ ಹಾಗೂ ಕಬ್ಬು ರೈತರ ಸಂಕಷ್ಟಗಳೇ ಪ್ರಧಾನವಾಗಿ ಪ್ರಸ್ತಾಪ

- ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ಅಸಡ್ಡೆಗೂ ಚರ್ಚೆ ವೇಳೆ ಆದ್ಯತೆ

- ಡಿಸಿಎಂ ದುಬಾರಿ ವಾಚ್‌ ಪ್ರಕರಣ, ಶೇ.63 ಭ್ರಷ್ಟಾಚಾರ ಆರೋಪದ ಗದ್ದಲ?

- ಇದೇ ವೇಳೆ ಕಾಂಗ್ರೆಸ್‌ನಲ್ಲಿನ ಸಿಎಂ ಕುರ್ಚಿ ಗುದ್ದಾಟ ಪ್ರಸ್ತಾಪಿಸಿ ವಿಪಕ್ಷ ಟಾಂಗ್‌?

- ಕುರ್ಚಿ ಗುದ್ದಾಟ ಪ್ರಸ್ತಾಪವಾದರೆ ಪ್ರತಿಪಕ್ಷ-ಆಡಳಿತ ಪಕ್ಷಗಳ ಮಧ್ಯೆ ವಾಕ್ಸಮರ

- ಕೇಂದ್ರದ ‘ಮಲತಾಯಿ ಧೋರಣೆ’ ಪ್ರಸ್ತಾಪಿಸಿ ಬಿಜೆಪಿಗೆ ಕಾಂಗ್ರೆಸ್‌ ತಿರುಗೇಟು?