ರಾಜ್ಯದಲ್ಲಿ ಅಮಿತ್‌ ಶಾ ಲೋಕಸಭೆ ಪ್ರಚಾರದ ಅಬ್ಬರ

| Published : Apr 02 2024, 01:08 AM IST / Updated: Apr 02 2024, 04:30 AM IST

ಸಾರಾಂಶ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಮತ್ತು ರಾಷ್ಟ್ರೀಯ ಬಿಜೆಪಿಯ ಪ್ರಭಾವಿ ನಾಯಕ ಅಮಿತ್ ಶಾ ಅವರು ಮಂಗಳವಾರ ರಾಜ್ಯದಲ್ಲಿ ವಿವಿಧ ಸಭೆ-ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಮೂಲಕ ಬಿಜೆಪಿ ಮತ್ತು ಜೆಡಿಎಸ್ ನಾಯಕರು-ಕಾರ್ಯಕರ್ತರನ್ನು ಹುರಿದುಂಬಿಸಲಿದ್ದಾರೆ.

 ಬೆಂಗಳೂರು :  ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಮತ್ತು ರಾಷ್ಟ್ರೀಯ ಬಿಜೆಪಿಯ ಪ್ರಭಾವಿ ನಾಯಕ ಅಮಿತ್ ಶಾ ಅವರು ಮಂಗಳವಾರ ರಾಜ್ಯದಲ್ಲಿ ವಿವಿಧ ಸಭೆ-ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಮೂಲಕ ಬಿಜೆಪಿ ಮತ್ತು ಜೆಡಿಎಸ್ ನಾಯಕರು-ಕಾರ್ಯಕರ್ತರನ್ನು ಹುರಿದುಂಬಿಸಲಿದ್ದಾರೆ.

ತಡರಾತ್ರಿ ಬೆಂಗಳೂರಿಗೆ ಆಗಮಿಸಿರುವ ಅಮಿತ್ ಶಾ ಅವರು ಬೆಳಗ್ಗೆ 9ಕ್ಕೆ ತಾವು ವಾಸ್ತವ್ಯ ಹೂಡಿರುವ ತಾಜ್‌ ವೆಸ್ಟೆಂಡ್ ಹೋಟೆಲ್‌ನಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳ ರಾಜ್ಯ ನಾಯಕರ ಸಮನ್ವಯ ಸಭೆ ನಡೆಸಲಿದ್ದಾರೆ. ಅದರಲ್ಲಿ ಚುನಾವಣೆಯ ರಣತಂತ್ರ ಹಾಗೂ ಉಭಯ ಪಕ್ಷಗಳ ನಡುವಿನ ಹೊಂದಾಣಿಕೆಯನ್ನು ಸುಸೂತ್ರವಾಗಿ ಮುಂದುವರೆಸುವ ಕುರಿತು ರಾಜ್ಯ ನಾಯಕರಿಗೆ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ ಎನ್ನಲಾಗಿದೆ.

ಬಳಿಕ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೆಂಗಳೂರು ಸುತ್ತಲಿನ ಐದು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ ಬಿಜೆಪಿಯ ಶಕ್ತಿ ಕೇಂದ್ರ ಮೇಲ್ಪಟ್ಟ ಕಾರ್ಯಕರ್ತರ ಸಮಾವೇಶದಲ್ಲಿ ಅಮಿತ್ ಶಾ ಭಾಗವಹಿಸಲಿದ್ದಾರೆ. ಸುಮಾರು ಐದು ಸಾವಿರ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.ನಂತರ ಮಧ್ಯಾಹ್ನ ಭೋಜನದ ಬಳಿಕ ಅಮಿತ್ ಶಾ ಅವರು ಟಿಕೆಟ್ ಹಂಚಿಕೆ ಹಿನ್ನೆಲೆಯಲ್ಲಿ ವಿವಿಧ ಲೋಕಸಭಾ ಕ್ಷೇತ್ರಗಳಲ್ಲಿನ ಪಕ್ಷದ ಮುಖಂಡರ ನಡುವೆ ಉಂಟಾಗಿರುವ ಬಿನ್ನಾಭಿಪ್ರಾಯಗಳನ್ನು ಆಲಿಸಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ಸೂಚನೆ ನೀಡಲಿದ್ದಾರೆ. 

ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ, ಚಿತ್ರದುರ್ಗ, ಬೀದರ್, ಬೆಳಗಾವಿ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ ಪಕ್ಷದ ಪ್ರಮುಖ ಮುಖಂಡರ ಜೊತೆ ಅಮಿತ್ ಶಾ ಅವರು ಮಾತುಕತೆ ನಡೆಸಲಿದ್ದಾರೆ. ಅಂತಿಮವಾಗಿ ಸಂಜೆ 6 ಗಂಟೆ ಸುಮಾರಿಗೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ರೋಡ್ ಶೋ ನಡೆಸುವ ಮೂಲಕ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಸಿ.ಎನ್‌.ಮಂಜುನಾಥ್ ಅವರ ಪರ ಮತಯಾಚಿಸಲಿದ್ದಾರೆ.

ಅಮಿತ್ ಶಾ ಇಂದಿನ ಕಾರ್ಯಕ್ರಮ

* ಬೆಳಗ್ಗೆ 9 ಗಂಟೆಗೆ ಬಿಜೆಪಿ-ಜೆಡಿಎಸ್ ನಾಯಕರ ಜತೆ ಉಪಹಾರದೊಂದಿಗೆ ಸಮನ್ವಯ ಸಭೆ

*11 ಗಂಟೆಗೆ ಅರಮನೆ ಮೈದಾನದಲ್ಲಿ ಐದು ಲೋಕಸಭಾ ಕ್ಷೇತ್ರಗಳ ಶಕ್ತಿ ಕೇಂದ್ರಗಳ ಕಾರ್ಯಕರ್ತರ ಸಭೆ

*ಮಧ್ಯಾಹ್ನ 2ರಿಂದ 5ಗಂಟೆವರೆಗೆ ಬಿಕ್ಕಟ್ಟು ಉದ್ಭವಿಸಿರುವ ಆರೇಳು ಕ್ಷೇತ್ರಗಳ ಮುಖಂಡರ ಜತೆ ಪ್ರತ್ಯೇಕ ಸಭೆ

*ಸಂಜೆ 6 ಗಂಟೆಗೆ ಚನ್ನಪಟ್ಟಣದಲ್ಲಿ ಬೆಂ.ಗ್ರಾಂ. ಅಭ್ಯರ್ಥಿ ಡಾ.ಮಂಜುನಾಥ್ ಪರ ರೋಡ್ ಶೋ

- ಸಂಜೆ ಡಿಕೆಸು ಕ್ಷೇತ್ರದಲ್ಲಿ ರೋಡ್‌ ಶೋ