ಗೃಹರಕ್ಷಕ ಸಿಬ್ಬಂದಿ ಭತ್ಯೆ ಹೆಚ್ಚಳ: ಪರಮೇಶ್ವರ್‌ ಭರವಸೆ

| Published : Dec 13 2023, 01:30 AM IST

ಸಾರಾಂಶ

ಗೃಹ ರಕ್ಷಕ ದಳ ಸಿಬ್ಬಂದಿಗೆ ಬೇರೆ ರಾಜ್ಯಗಳಲ್ಲಿ ನೀಡುತ್ತಿರುವ ಭತ್ಯೆಯನ್ನು ಅವಲೋಕಿಸಿ ಶೀಘ್ರವೇ ಕರ್ತವ್ಯ ಭತ್ಯೆಯನ್ನು ಪರಿಷ್ಕರಣೆ ಮಾಡುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಅಶ್ವಾಸನೆ ನೀಡಿದ್ದಾರೆ.

- 750 ರು. ದಿನಭತ್ಯೆ ನೀಡಲು ಪರಿಶೀಲನೆಕನ್ನಡಪ್ರಭ ವಾರ್ತೆ ವಿಧಾನಸಭೆ

ಗೃಹ ರಕ್ಷಕ ದಳ ಸಿಬ್ಬಂದಿಗೆ ಬೇರೆ ರಾಜ್ಯಗಳಲ್ಲಿ ನೀಡುತ್ತಿರುವ ಭತ್ಯೆಯನ್ನು ಅವಲೋಕಿಸಿ ಶೀಘ್ರವೇ ಕರ್ತವ್ಯ ಭತ್ಯೆಯನ್ನು ಪರಿಷ್ಕರಣೆ ಮಾಡುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಅಶ್ವಾಸನೆ ನೀಡಿದ್ದಾರೆ. ಮಂಗಳವಾರ ಬಿಜೆಪಿ ಸದಸ್ಯೆ ಶಶಿಕಲಾ ಜೊಲ್ಲೆ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸ್ತುತ ರಾಜ್ಯದಲ್ಲಿ 21,327 ಪುರಷ ಹಾಗೂ 4,555 ಮಹಿಳೆ ಸೇರಿ ಒಟ್ಟು 25,882 ಗೃಹರಕ್ಷಕ ಕಾರ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರ ಆದೇಶದಂತೆ ಪೊಲೀಸ್ ಇಲಾಖೆಯ ಬಂದೋಬಸ್ತ್, ಕಾನೂನು ಸುವ್ಯವಸ್ಥೆ, ಸಂಚಾರ ನಿಯಂತ್ರಣ ಹಾಗೂ ಠಾಣೆ ಕಾರ್ಯಗಳಲ್ಲಿ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರಿಗೆ 750 ರು. ಮತ್ತು ಬೇರೆ ಇಲಾಖೆಗಳಲ್ಲಿ 600 ರು. ಹಾಗೂ ಪಹರೆ ಕೆಲಸಕ್ಕೆ ಬೆಂಗಳೂರು ನಗರದಲ್ಲಿ 455 ರು. ಮತ್ತು ಇತರೆ ಸ್ಥಳದಲ್ಲಿ 380 ರು. ಭತ್ಯೆ ನೀಡಲಾಗುತ್ತಿದೆ. ಈ ವ್ಯತ್ಯಾಸವನ್ನು ಸರಿ ಪಡಿಸಿ 750 ರು. ದಿನಭತ್ಯೆ ನೀಡಲು ಸರ್ಕಾರ ಮಟ್ಟದಲ್ಲಿ ಚಿಂತಿಸಲಾಗುತ್ತಿದೆ. ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಅದಷ್ಟು ಶೀಘ್ರದಲ್ಲಿಯೇ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ ಶಶಿಕಲಾ ಜೊಲ್ಲೆ, ಗೃಹ ರಕ್ಷಕ ದಳ ಸಿಬ್ಬಂದಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಕರ್ತವ್ಯ ಭತ್ಯೆಯನ್ನು ಹೆಚ್ಚಳ ಮಾಡುವುದರ ಜತೆಗೆ ಪೊಲೀಸ್‌ ಸಿಬ್ಬಂದಿ ನೇಮಕಾತಿಯಲ್ಲಿ ಅದ್ಯತೆ ನೀಡಿ ಖಾಯಮಾತಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.