ಸಾರಾಂಶ
ಪುಸ್ತಕ ಮೇಳ ಆಯೋಜನೆ ಸೇರಿ ವಿಧಾನಮಂಡಲದಿಂದ ಆಯೋಜಿಸಲ್ಪಟ್ಟ ಎಲ್ಲಾ ಕಾರ್ಯಕ್ರಮಗಳ ಬಗ್ಗೆಯೂ ತಮಗೆ ತಿಳಿಸಿ ಚರ್ಚಿಸಿಯೇ ನಿರ್ವಸಿದ್ದೇನೆ - ಯು.ಟಿ. ಖಾದರ್ ಪತ್ರ
ಬೆಂಗಳೂರು : ಪುಸ್ತಕ ಮೇಳ ಆಯೋಜನೆ ಸೇರಿ ವಿಧಾನಮಂಡಲದಿಂದ ಆಯೋಜಿಸಲ್ಪಟ್ಟ ಎಲ್ಲಾ ಕಾರ್ಯಕ್ರಮಗಳ ಬಗ್ಗೆಯೂ ತಮಗೆ ತಿಳಿಸಿ ಚರ್ಚಿಸಿಯೇ ನಿರ್ವಸಿದ್ದೇನೆ. ಸಣ್ಣ ಪುಟ್ಟ ನ್ಯೂನ್ಯತೆಗಳಿದ್ದರೆ ಅವುಗಳನ್ನು ಚರ್ಚಿಸಿ ಸಮನ್ವಯದಿಂದ ಪರಿಹರಿಸಿಕೊಂಡು ಕಾರ್ಯ ನಿರ್ವಹಿಸೋಣ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಸಭಾಧ್ಯಕ್ಷ ಯು.ಟಿ. ಖಾದರ್ ಪತ್ರ ಬರೆದಿದ್ದಾರೆ.
ನೀವು ಪತ್ರದಲ್ಲಿ ತಮ್ಮನ್ನು ಸೌಜನ್ಯಕ್ಕಾದರೂ ಸಂಪರ್ಕಿಸದೆ ಅಧಿಕೃತ ಕಾರ್ಯಕ್ರಮಗಳ ರೂಪುರೇಷೆ ಸಿದ್ಧಪಡಿಸಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಸಿದ್ದೀರಿ. ಇತ್ತೀಚೆಗೆ ವಿಧಾನಸೌಧದ ಆವರಣದಲ್ಲಿ ನಡೆದ ಪುಸ್ತಕ ಮೇಳದ ಕುರಿತು ರೂಪುರೇಷೆ ಇತ್ಯಾದಿಗಳ್ನು ತಮ್ಮ ಗಮನಕ್ಕೆ ತರಲಾಗಿತ್ತು. ಜಂಟಿ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ನಡೆಸಿದೆವು ಎಂದು ಹೇಳಿದ್ದಾರೆ.
ಇನ್ನು 11ನೇ ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಸಂಘದ ಭಾರತ ವಲಯ ಸಮ್ಮೇಳನ ಆಯೋಜಿಸಲು ಲೋಕಸಭೆ ಸಚಿವಾಲಯದಿಂದ ಕೋರಿಕೆ ಬಂದಿತ್ತು. ನಾವಿಬ್ಬರೂ ಸೇರಿ ಒಪ್ಪಿಗೆ ನೀಡಿರುತ್ತೇವೆ. ನಾನು ಸ್ವತಃ ನಿಮ್ಮ ಕೊಠಡಿಗೆ ಆಗಮಿಸಿ ಪರಸ್ಪರ ಚರ್ಚಿಸಿ ಹೋಟೆಲ್ ತಾಜ್ ವೆಸ್ಟೆಂಡ್‌ನಲ್ಲಿ ನಡೆಸಲು ನಿರ್ಧರಿಸಿದ್ದೇವೆ. ಸಮ್ಮೇಳನದ ಪ್ರತಿನಿಧಿಗಳಿಗೆ ನಾವಿಬ್ಬರೂ ಸೇರಿ ಆಹ್ವಾನ ನೀಡಿದ್ದೇವೆ. ಸಮ್ಮೇಳನ ಕುರಿತು ಪ್ರತ್ಯೇಕ ಪತ್ರಿಕಾಗೋಷ್ಠಿ ನಡೆಸಿಲ್ಲ ಎಂದು ಖಾದರ್ ಸ್ಪಷ್ಟನೆ ನೀಡಿದ್ದಾರೆ.
ಜತೆಗೆ 2025ರ ಅಕ್ಟೋಬರ್‌ನಲ್ಲಿ ಬಾರ್ಬಡೋಸ್‌ನಲ್ಲಿ ನಡೆಯುವ 68ನೇ ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಕಾನ್ಫ್‌ರೆನ್ಸ್‌ಗೆ
ತಾವು ಪ್ರತಿನಿಧಿಯಾಗಿ ಹಾಗೂ ನಾನು ವೀಕ್ಷಕನಾಗಿ ಭಾಗವಹಿಸುವುದಕ್ಕೆ ಒಪ್ಪಿಗೆ ನೀಡಿದ್ದೇವೆ ಎಂಬುದನ್ನೂ ಗಮನಕ್ಕೆ ತರುತ್ತೇನೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.