ಸಾರಾಂಶ
ಸ್ವಂತ ಅಣ್ಣ, ತಮ್ಮಂದಿರನ್ನೇ ಸಹಿಸುವುದಿಲ್ಲ. ಇನ್ನು ನನ್ನ ಹಾಗೂ ಚಲುವರಾಯಸ್ವಾಮಿ ಅವರನ್ನು ಸಹಿಸುತ್ತಾನೆಯೇ?, ಮಂಡ್ಯ ಸಂಸದನಾದ ಕಾರಣಕ್ಕೆ ಇಷ್ಟೆಲ್ಲಾ ಹೇಳುತ್ತಿದ್ದೇನೆ. ನಾನು ಅವನ ಮಗನನ್ನು ಗೆಲ್ಲಿಸಲು ನೋಡಿದೆ. ಆದರೆ, ಜನ ಸೋಲಿಸಿದರು.
ಮಂಡ್ಯ : ಈಗ ಪಾದಯಾತ್ರೆಯಲ್ಲಿ ಎರಡು ಹೆಜ್ಜೆ ಹಾಕಿ ಹೇಳಿಕೆ ನೀಡಿ ಏಕೆ ಓಡಿ ಹೋಗುತ್ತಾ ಇದ್ದಿಯಾ?, ಅವನು ಯಾರೋ ಪ್ರೀತಂ ಗೌಡ ನನ್ನ ಕುಟುಂಬದ ಮರ್ಯಾದೆ ತೆಗೆದಿದ್ದಾನೆ ಎಂದು ಹೇಳಿದೆ. ಆದರೆ, ಇದಕ್ಕೂ ಮೊದಲು ರೇವಣ್ಣನದ್ದೇ ಬೇರೆ ಕುಟುಂಬ ನನ್ನದೇ ಬೇರೆ ಕುಟುಂಬ, ನಾವು ಭಾಗವಾಗಿದ್ದೇವೆ ಎಂದು ಹೇಳಿದ್ದೆ. ಈಗ ಎಲ್ಲಿಂದ ಬಂತು ಕುಟುಂಬ? ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯನ್ನು ಪ್ರಶ್ನಿಸಿದರು.
ಸೋಮವಾರ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಕೇಂದ್ರ ಎನ್‌ಡಿಎ ಸರ್ಕಾರ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ ಹಾಗೂ ಬಿಜೆಪಿ ಸರ್ಕಾರ ಹಿಂದಿನ ಭ್ರಷ್ಟಾಚಾರದ ವಿರುದ್ಧ ಆಯೋಜಿಸಿದ್ದ ಜನಾಂದೋಲನ ಸಮಾವೇಶ ಉದ್ಘಾಟಿಸಿ ಮಾತನಾಡಿ, ನಾವು ನಿನ್ನ ಕುಟುಂಬದ ವಿಚಾರಕ್ಕೆ ಕೈ ಹಾಕುವುದಿಲ್ಲ. ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ನೀಡಬೇಡಿ ಎಂದು ಬಿಜೆಪಿಯ ದೇವರಾಜೇಗೌಡನಿಂದ ಪತ್ರ ಬರೆಸಿದವನು ನೀನೆ ಅಲ್ಲವೇ ಪ್ರಶ್ನಿಸಿದರು.
ಮುಖ್ಯಮಂತ್ರಿಯನ್ನಾಗಿ ಮಾಡಿದ ನಿಮ್ಮ ವಿರುದ್ಧವೇ ಕುಮಾರಸ್ವಾಮಿ ಹೀಗೆ ಮಾತನಾಡುತ್ತಿರುವುದು ಸರಿಯೇ ಎಂದು ಯಾರೋ ಪ್ರಶ್ನಿಸಿದರು. ಸ್ವಂತ ಅಣ್ಣ, ತಮ್ಮಂದಿರನ್ನೇ ಸಹಿಸುವುದಿಲ್ಲ. ಇನ್ನು ನನ್ನ ಹಾಗೂ ಚಲುವರಾಯಸ್ವಾಮಿ ಅವರನ್ನು ಸಹಿಸುತ್ತಾನೆಯೇ?, ಮಂಡ್ಯ ಸಂಸದನಾದ ಕಾರಣಕ್ಕೆ ಇಷ್ಟೆಲ್ಲಾ ಹೇಳುತ್ತಿದ್ದೇನೆ. ನಾನು ಅವನ ಮಗನನ್ನು ಗೆಲ್ಲಿಸಲು ನೋಡಿದೆ. ಆದರೆ, ಜನ ಸೋಲಿಸಿದರು ಎಂದರು.
ಪಾದಯಾತ್ರೆಗಳಿಗೆ ಹೆದರುವ ಮಗನಲ್ಲ:
ನನ್ನ, ನಿನ್ನ ಆಸ್ತಿಯ ಪಟ್ಟಿಯಿದೆ. ನಿನ್ನ ಬೇನಾಮಿಯಾದ ಸಹೋದರನ ಆಸ್ತಿಯ ಪಟ್ಟಿ ಕೊಡಪ್ಪಾ. ನೀನು ಅಧಿಕಾರದಲ್ಲಿ ಇದ್ದಾಗ ಕನಕಪುರ ಸೇರಿದಂತೆ ಇತರೆಡೆ ಮಾಡಿರುವ ಪಟ್ಟಿ ಹೇಳಿದ್ದೇನೆ. ನೀನು ಒಂದು ಪಟ್ಟಿ ಕೊಡು ಹಾಗೂ ಮೊದಲು ಪಾದಯಾತ್ರೆ ಏಕೆ ಬೇಡ ಎಂದು ಹೇಳಿದೆ. ನಂತರ ಏಕೆ ಒಪ್ಪಿಕೊಂಡೆ. ಅದಕ್ಕೆ ಮೊದಲು ಉತ್ತರಿಸು ಎಂದು ಆಗ್ರಹಿಸಿದರು.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲೇ ಈ ಶಿವಕುಮಾರ್ ಅಪ್ಪ-ಅಮ್ಮನಿಗೆ ಹುಟ್ಟಿಲ್ಲ ಎಂದು ಹೇಳಿದ್ದ ಆ ನಂತರ ಸಾತನೂರಿಗೆ ಬಂದು ಕ್ಷಮೆ ಕೇಳಿದ್ದ. ಅಂದೇ ಯಾರಿಗೂ ಹೆದರದ ದೊಡ್ಡ ಆಲಹಳ್ಳಿ ಕೆಂಪೇಗೌಡರ ಮಗನಾದ ನಾನು ಇಂದು ಹೆದರುತ್ತೇನೆಯೆ?, ನಿಮ್ಮ ಪಾದಯಾತ್ರೆಗಳಿಗೆಲ್ಲ ಹೆದರುವ ಮಗ ನಾನಲ್ಲ ಎಂದು ತಿರುಗೇಟು ನೀಡಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಎಚ್.ಕೆ.ಪಾಟೀಲ್, ಸಂತೋಷ್ ಲಾಡ್, ಎನ್.ಚಲುವರಾಯಸ್ವಾಮಿ, ದಿನೇಶ್ ಗುಂಡೂರಾವ್, ರಾಮಲಿಂಗಾರೆಡ್ಡಿ, ಕೆ.ಎನ್.ರಾಜಣ್ಣ, ಶಿವಾನಂದಪಾಟೀಲ್, ಮಧು ಬಂಗಾರಪ್ಪ, ಟಿ.ಬಿ.ಜಯಚಂದ್ರ, ಡಿ.ಸುಧಾಕರ್, ಎಚ್.ಸಿ.ಮಹದೇವಪ್ಪ, ಮಾಜಿ ಸಚಿವರಾದ ರಮಾನಾಥ ರೈ, ವಿನಯ್‌ಕುಮಾರ್ ಸೊರಕೆ, ಬಿ.ಸೋಮಶೇಖರ್, ಶಾಸಕರಾದ ಕೆ.ಎಂ.ಉದಯ್, ಪಿ.ಎಂ.ನರೇಂದ್ರಸ್ವಾಮಿ, ದಿನೇಶ್‌ಗೂಳಿಗೌಡ, ಪಿ.ರವಿಕುಮಾರ್, ರಮೇಶ್ ಬಂಡಿಸಿದ್ದೇಗೌಡ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಮರಿತಿಬ್ಬೇಗೌಡ, ಕೆಎಸ್‌ಆರ್‌ಟಿಸಿ ಅಧ್ಯಕ್ಷ ಶ್ರೀನಿವಾಸ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಡದಪುರ ಶಿವಣ್ಣ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಇತರರಿದ್ದರು.