ಸಾರಾಂಶ
ಚುನಾವಣೆ ಬಗ್ಗೆ ನನಗೆ ಯಾವುದೇ ಆತಂಕವೂ ಇಲ್ಲ. ದುಡುಕಿನ ನಿರ್ಧಾರ ಮಾಡಿದೆನೆಂಬ ಭಯವೂ ನನ್ನನ್ನು ಕಾಡುತ್ತಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.
ಕನ್ನಡಪ್ರಭ ವಾರ್ತೆ ನಾಗಮಂಗಲ
ಚುನಾವಣೆ ಬಗ್ಗೆ ನನಗೆ ಯಾವುದೇ ಆತಂಕವೂ ಇಲ್ಲ. ದುಡುಕಿನ ನಿರ್ಧಾರ ಮಾಡಿದೆನೆಂಬ ಭಯವೂ ನನ್ನನ್ನು ಕಾಡುತ್ತಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವದಂತಿಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಬೆಂಬಲಿಗರು ಅವರ ಅನಿಸಿಕೆಯನ್ನು ವ್ಯಕ್ತಪಡಿಸಿರಬಹುದು.
ಅಂತಿಮ ನಿರ್ಧಾರ ಕೈಗೊಳ್ಳಬೇಕಿರುವುದು ನಾನು. ನಾನಿನ್ನೂ ಆ ವಿಚಾರವಾಗಿ ಎಲ್ಲಿಯೂ ಒಂದು ಮಾತನ್ನೂ ಆಡಿಲ್ಲ.
ಆದರೂ ದಿನಕ್ಕೊಂದು ರೀತಿಯ ಸುದ್ದಿಗಳು ಹರಿದಾಡುತ್ತಲೇ ಇವೆ. ಆದರೂ ನಾನು ದೃತಿಗೆಟ್ಟಿಲ್ಲ, ಆತ್ಮವಿಶ್ವಾಸವನ್ನೂ ಕಳೆದುಕೊಂಡಿಲ್ಲ ಎಂದು ನುಡಿದರು.
ಬಿಜೆಪಿ-ಜೆಡಿಎಸ್ ಮೈತ್ರಿಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇನ್ನೂ ಸೀಟು ಹಂಚಿಕೆ ಪ್ರಕ್ರಿಯೆಯೇ ನಡೆದಿಲ್ಲವೆಂದು ಉಭಯ ಪಕ್ಷದವರು ಹೇಳುತ್ತಲೇ ಇದ್ದಾರೆ. ಇದರ ನಡುವೆಯೂ ಅವರು ಬರುತ್ತಾರೆ.
ಇವರಿಗೆ ಕ್ಷೇತ್ರ ಸಿಗೋಲ್ಲ ಎಂದೆಲ್ಲಾ ಹೇಳುತ್ತಿದ್ದಾರೆ. ಆ ಪಕ್ಷ (ಜೆಡಿಎಸ್)ದಿಂದ ಯಾರು ಕಣಕ್ಕಿಳಿಯುತ್ತಾರೆಂಬುದನ್ನು ಸ್ಪಷ್ಟಪಡಿಸಿಲ್ಲ.
ಬಿಜೆಪಿಯವರೂ ಏನನ್ನೂ ಹೇಳಿಲ್ಲ. ಆದರೂ ಮಂಡ್ಯ ಕ್ಷೇತ್ರದ ರಾಜಕಾರಣ ರಾಷ್ಟ್ರದ ಗಮನಸೆಳೆಯುವ ರೀತಿಯಲ್ಲಿ ಕುತೂಹಲ ಕೆರಳಿಸಿಕೊಂಡಿರುವುದಂತೂ ಸತ್ಯ ಎಂದರು.
ನಾನು ಈಗ ಏನನ್ನೂ ಹೇಳುವ ಸ್ಥಿತಿಯಲ್ಲಿ ಇಲ್ಲ. ಎಲ್ಲದಕ್ಕೂ ಒಂದು ಸಮಯ ಎಂದಿರುತ್ತದೆ. ಆ ಸಮಯ ಬಂದಾಗ ನಾನೇ ಹೇಳುತ್ತೇನೆ.
ಜನರಿಗೂ ಅದು ಗೊತ್ತಾಗುತ್ತದೆ. ನಾನು ಯಾವುದೇ ಒತ್ತಡದಲ್ಲೂ ಇಲ್ಲ. ಸ್ಪರ್ಧೆ ವಿಚಾರವಾಗಿ ಆತಂಕವೂ ಇಲ್ಲ, ಭಯವೂ ಇಲ್ಲ. ಆರಾಮವಾಗಿದ್ದೇನೆ ಎಂದು ನಗುತ್ತಲೇ ಹೇಳಿದರು.