ನಾನೆಂದೂ ಬಂಡಾಯ ಅಭ್ಯರ್ಥಿಯಾಗಲಾರೆ: ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ

| Published : May 30 2024, 12:59 AM IST / Updated: May 30 2024, 04:25 AM IST

ಸಾರಾಂಶ

ರಾಜಕೀಯವಾಗಿ ದೇವೇಗೌಡರ ಋಣ ನನ್ನ ಮೇಲಿದೆ. ಹಾಗಾಗಿ ನಾನೆಂದೂ ಬಂಡಾಯ ಅಭ್ಯರ್ಥಿಯಾಗಲಾರೆ, ಪಕ್ಷ ಬಿಟ್ಟು ಹೋಗಲಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಸ್ಪಷ್ಟಪಡಿಸಿದರು.

 ಮಂಡ್ಯ:  ರಾಜಕೀಯವಾಗಿ ದೇವೇಗೌಡರ ಋಣ ನನ್ನ ಮೇಲಿದೆ. ಹಾಗಾಗಿ ನಾನೆಂದೂ ಬಂಡಾಯ ಅಭ್ಯರ್ಥಿಯಾಗಲಾರೆ, ಪಕ್ಷ ಬಿಟ್ಟು ಹೋಗಲಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಸ್ಪಷ್ಟಪಡಿಸಿದರು.

ನಾನೂ ಕೂಡ ಈ ಕ್ಷೇತ್ರದ ಅಭ್ಯರ್ಥಿಯಾಗಲು ಬಯಸಿದ್ದೆ. ಆದರೆ, ನಮ್ಮ ಶಾಸಕರು, ವರಿಷ್ಠರಾದ ದೇವೇಗೌಡರು, ಕುಮಾರಸ್ವಾಮಿ ಇತರರು ಮುಂದೆ ಅವಕಾಶ ಮಾಡಿಕೊಡೋಣ, ಈಗ ಬೇಡ ಎಂದು ಸಲಹೆ ನೀಡಿದ್ದರು. ಹಿಂದೆ ಸಿದ್ದರಾಮಯ್ಯ ಅವರು ವಿರೋಧ ಮಾಡಿದಾಗಲೂ ದೇವೇಗೌಡರು ನನ್ನ ಪರವಾಗಿ ನಿಂತಿದ್ದರು. ಆ ಋಣ ನನ್ನ ಮೇಲಿದ್ದು, ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದು, ವಿರೋಧಿ ಕೃತ್ಯದಲ್ಲಿ ತೊಡಗುವಂತಹ ಕೆಲಸ ಮಾಡುವುದಿಲ್ಲ. ನಾನು ಇರುವವರೆವಿಗೂ ದೇವೇಗೌಡರ ಜೊತೆಯೇ ಇರುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಶಿಕ್ಷಕರೂ ನನ್ನ ಮೇಲೆ ಒತ್ತಡ ಹೇರಿದ್ದರು. ಆದರೆ, ಅದಕ್ಕೆ ನನ್ನ ಮನಸ್ಸು ಒಪ್ಪಲಿಲ್ಲ. ಎಲ್ಲರೂ ಹೊಸ ಮುಖಕ್ಕೆ ಅವಕಾಶ ಮಾಡಿಕೊಡೋಣ. ನಿಮಗೆ ಮುಂದೆ ಅವಕಾಶಗಳನ್ನು ನೀಡುವುದಾಗಿ ಭರವಸೆ ನೀಡಿದ್ದರಿಂದ ನಾನು ಕೆ.ವಿವೇಕಾನಂದರ ಸ್ಪರ್ಧೆಗೆ ಅಡ್ಡಿಯಾಗದಿರಲು ನಿರ್ಧರಿಸಿದ್ದಾಗಿ ತಿಳಿಸಿದರು.

ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲುವು ನೂರಕ್ಕೆ ನೂರಕಷ್ಟು ಶತಃಸಿದ್ಧ. ಇದರಲ್ಲಿ ಯಾವುದೇ ಅನುಮಾನವೂ ಇಲ್ಲ. ಮಾಜಿ ಪ್ರಧಾನಿ ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ವೇಳೆ ೬೦ ಸಾವಿರ ಶಿಕ್ಷಕರನ್ನು ನೇಮಕ ಮಾಡಿದ್ದರು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ೧ ಸಾವಿರಕ್ಕೂ ಹೆಚ್ಚು ಶಾಲೆಗಳು, ಪ್ರಥಮ ದರ್ಜೆ ಕಾಲೇಜು, ವೈದ್ಯಕೀಯ ಮತ್ತು ತಾಂತ್ರಿಕ ಕಾಲೇಜುಗಳನ್ನು ಸ್ಥಾಪಿಸುವ ಮೂಲಕ ಈ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದರು. ಈ ಕಾರಣಕ್ಕೆ ಮೊದಲಿನಿಂದಲೂ ಶಿಕ್ಷಕರಿಗೆ ಜನತಾ ಪರಿವಾರದ ಮೇಲೆಯೇ ಹೆಚ್ಚು ಒಲವು ಇದೆ. ಇದರಿಂದಾಗಿ ಗೆಲುವು ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೊದಲಿನಿಂದಲೂ ಈ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆಯೇ ಸ್ಪರ್ಧೆ ಏರ್ಪಡುತ್ತಿತ್ತು. ಈ ಬಾರಿ ಎರಡೂ ಪಕ್ಷಗಳ ಮೈತ್ರಿ ಅಭ್ಯರ್ಥಿಯಾಗಿ ವಿವೇಕಾನಂದ ಅವರು ಕಣಕ್ಕಿಳಿದಿದ್ದು, ಅವರ ಗೆಲುವಿಗೆ ಇದೂ ಸಹಕಾರಿಯಾಗಲಿದೆ. ಕಾಂಗ್ರೆಸ್ ಅಭ್ಯರ್ಥಿ ಗೆದ್ದಿರುವ ಉದಾಹರಣೆ ಇಲ್ಲ ಎಂದರು.

ಈ ಕ್ಷೇತ್ರದಿಂದ ಆಯ್ಕೆಯಾಗಿದ್ದ ಮರಿತಿಬ್ಬೇಗೌಡರು ನಾಲ್ಕು ಬಾರಿ ಆಯ್ಕೆಯಾಗಿದ್ದರು. ಕಳೆದ ಬಾರಿ ಅವರು ಜೆಡಿಎಸ್‌ನಿಂದಲೇ ಆಯ್ಕೆಯಾಗಿದ್ದು, ಈ ಚುನಾವಣೆಯಲ್ಲಿ ಶಿಕ್ಷಕರು ಬದಲಾವಣೆ ಬಯಸಿದ್ದಾರೆ ಎಂದರು.

ಶಿಕ್ಷಕರ ಸಮಸ್ಯೆಗಳ ಕುರಿತಂತೆ ನಾನು ಮತ್ತು ನಮ್ಮೆಲ್ಲ ಶಾಸಕರು ಹೋರಾಟ ಮಾಡಿದ್ದೇವೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಹೋರಾಟದಲ್ಲಿ ನಾನು ಹಲವಾರು ದಿನಗಳ ಭಾಗವಹಿಸಿ ಬೆಂಬಲ ಸೂಚಿಸಿದ್ದೆ. ಶಿಕ್ಷಕರ ಸಮಸ್ಯೆಗಳ ಹೋರಾಟಕ್ಕೆ ನಾವು ಎಂದಿಗೂ ಹಿಂದೆ ಬಿದ್ದವರಲ್ಲ. ಹಾಗಾಗಿ ಶಿಕ್ಷಕರು ನಮ್ಮ ಬಗ್ಗೆ ಅತೀವ ಪ್ರೀತಿ ಇಟ್ಟುಕೊಂಡಿದ್ದಾರೆ ಎಂದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಕೆ.ಟಿ.ಶ್ರೀಕಂಠೇಗೌಡರಿಗೆ ಪಕ್ಷ ನಾಲ್ಕು ಬಾರಿ ಅವಕಾಶ ಕಲ್ಪಿಸಿದೆ. ಎರಡು ಬಾರಿ ಗೆದ್ದಿದ್ದಾರೆ. ಎರಡು ಬಾರಿ ಸೋತಿದ್ದಾರೆ. ಹಾಗಾಗಿ ದೇವೇಗೌಡರು ಈ ಬಾರಿ ಹೊಸಬರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಶ್ರೀಕಂಠೇಗೌಡರ ನಾಯಕತ್ವದಲ್ಲಿ ಈ ಚುನಾವಣೆಯಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವುದಾಗಿ ತಿಳಿಸಿದರು.

ಹಾಸನದ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಸಿದಂತೆ ಈಗಾಗಲೇ ಯಾರು ಮಾಡಿದ್ದಾರೆ ಏನಾಗಿದೆ ಎಂಬುದು ನಿಧಾನಕ್ಕೆ ಹೊರಬರುತ್ತಿದೆ. ಮುಂದೆ ಎಲ್ಲವೂ ಗೊತ್ತಾಗಲಿದೆ. ಈ ವಿಚಾರವನ್ನು ಇಲ್ಲಿಗೇ ಬಿಡೋಣ. ಸದ್ಯ ಪ್ರಜ್ವಲ್ ಅವರನ್ನು ಪಕ್ಷ ಅಮಾನತು ಮಾಡಿದೆ. ಹಾಗಾಗಿ ಅವರ ಬಗ್ಗೆ ಮಾತನಾಡುವುದು ಬೇಡ ಎಂದು ಮನವಿ ಮಾಡಿದರು.

ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ, ಜನತಾ ಪರಿವಾರದ ಸರ್ಕಾರದ ಅವಧಿಯಲ್ಲಿ ಗೋವಿಂದೇಗೌಡರು ಶಿಕ್ಷಣ ಸಚಿವರಾಗಿದ್ದ ವೇಳೆ ಕೌನ್ಸಿಲಿಂಗ್ ಮೂಲಕ ೬೦ ಸಾವಿರ ಶಿಕ್ಷಕರನ್ನು ನೇಮಕ ಮಾಡಿದ್ದ ಹೆಗ್ಗಳಿಕೆ ಇದೆ. ಕುಮಾರಸ್ವಾಮಿ ಅವರು ಸಾವಿರಾರು ಶಾಲೆ, ಕಾಲೇಜುಗಳನ್ನು ಸ್ಥಾಪಿಸಿದ್ದಾರೆ. ಅದರ ಮೂಲಕ ೧.೭೦ ಲಕ್ಷ ಶಿಕ್ಷಕರ ನೇಮಕ ಆಗಿದೆ. ಹಾಗಾಗಿ ರಾಜ್ಯದಲ್ಲಿ ಶಿಕ್ಷಕರು ಜೆಡಿಎಸ್ ಪರವಾಗಿದ್ದಾರೆ ಎಂದರು.

ಮಾಜಿ ಶಾಸಕರಾದ ಕೆ.ಸುರೇಶ್‌ಗೌಡ, ರವೀಂದ್ರ ಶ್ರೀಕಂಠಯ್ಯ, ಡಾ.ಕೆ.ಅನ್ನದಾನಿ, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್. ರಾಮಚಂದ್ರ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ರಮೇಶ್, ಮುಖಂಡರಾದ ಸಿದ್ದರಾಮೇಗೌಡ, ಅಮರಾವತಿ ಚಂದ್ರಶೇಖರ್ ಇತರರಿದ್ದರು.