ಎಲ್ಲರನ್ನೂ ಸಮಾನರಾಗಿ ಕಾಣುತ್ತೇನೆ: ಡಾ। ಕೆ.ಸುಧಾಕರ್‌

| Published : Apr 05 2024, 01:04 AM IST / Updated: Apr 05 2024, 04:58 AM IST

ಎಲ್ಲರನ್ನೂ ಸಮಾನರಾಗಿ ಕಾಣುತ್ತೇನೆ: ಡಾ। ಕೆ.ಸುಧಾಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ। ಕೆ.ಸುಧಾಕರ್‌ ಗುರುವಾರ ನಾಮಪತ್ರ ಸಲ್ಲಿಸಿದ್ದು, ಎಲ್ಲ ಸಮುದಾಯಗಳನ್ನು ಒಂದಾಗಿ ಕರೆದೊಯ್ಯುವ ಸಂದೇಶವನ್ನು ಸಾರಿದ್ದಾರೆ.

 ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ। ಕೆ.ಸುಧಾಕರ್‌ ಗುರುವಾರ ನಾಮಪತ್ರ ಸಲ್ಲಿಸಿದ್ದು, ಎಲ್ಲ ಸಮುದಾಯಗಳನ್ನು ಒಂದಾಗಿ ಕರೆದೊಯ್ಯುವ ಸಂದೇಶವನ್ನು ಸಾರಿದ್ದಾರೆ.

ಬೆಳಗ್ಗೆ ದೇವನಹಳ್ಳಿಗೆ ತೆರಳಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಮನ ಸಲ್ಲಿಸಿದ ಅವರು, ವಿಕಸಿತ ಚಿಕ್ಕಬಳ್ಳಾಪುರವನ್ನು ನಿರ್ಮಿಸುವ ಸಂಕಲ್ಪ ಮಾಡಿದರು. ಬಳಿಕ ಚಿಕ್ಕಬಳ್ಳಾಪುರದ ಯೋಗಿನಾರೇಯಣ ದೇವಸ್ಥಾನಕ್ಕೆ ಭೇಟಿ ನೀಡಿ ಬ್ರಹ್ಮಜ್ಞಾನಿ ಕೈವಾರ ತಾತಯ್ಯನವರ ಆಶೀರ್ವಾದ ಪಡೆದರು. ನಂತರ ವೀರಾಂಜನೇಯ ದೇವಸ್ಥಾನಕ್ಕೆ ಭೇಟಿ ಕೊಟ್ಟು ಗೋಪೂಜೆ ನೆರವೇರಿಸಿದರು. ತರುವಾಯ ಜೈ ಭೀಮ್‌ ಮೆಮೊರಿಯಲ್‌ ವಿದ್ಯಾರ್ಥಿ ನಿಲಯದ ಆವರಣದ ಸಂವಿಧಾನಶಿಲ್ಪಿ ಡಾ। ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನಂತರ ಆಟೋ ಚಾಲಕರೊಂದಿಗೆ ಕೆಲ ಸಮಯ ಕಳೆದು ಕುಶಲೋಪರಿ ನಡೆಸಿದರು. ಈ ಮೂಲಕ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪ್ರತಿ ಸಮುದಾಯಗಳ ನಾಡಿ ಮಿಡಿತ ಅರಿತು ತಾರತಮ್ಯವಿಲ್ಲದೆ ಎಲ್ಲರನ್ನೂ ಒಂದಾಗಿ ಕರೆದೊಯ್ಯುವ ಸಂದೇಶವನ್ನು ಸಾರಿದರು. ಬಳಿಕ ಬಿಜೆಪಿ ಹಾಗೂ ಜೆಡಿಎಸ್‌ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಚಿಕ್ಕಬಳ್ಳಾಪುರದ ಮಾಜಿ ಕಾಂಗ್ರೆಸ್‌ ಶಾಸಕ ಎಂ.ಶಿವಾನಂದ್‌ ಅವರು ತಮ್ಮ ಬೆಂಬಲಿಗರೊಂದಿಗೆ ಡಾ। ಕೆ.ಸುಧಾಕರ್‌ ಅವರ ನಾಮಪತ್ರ ಸಲ್ಲಿಕೆ ರ‍್ಯಾಲಿಗೆ ಮುನ್ನ ಬಿಜೆಪಿಗೆ ಸೇರ್ಪಡೆಯಾದರು. ಈ ಮೂಲಕ ಕಾಂಗ್ರೆಸ್‌ಗೆ ಇನ್ನಷ್ಟು ಶಾಕ್‌ ಆಗಿದೆ.ಸುಧಾಕರ್‌ ಉತ್ತಮ ವಾಗ್ಮಿ: ಎಚ್‌ಡಿಕೆ

ನಾಮಪತ್ರ ಸಲ್ಲಿಕೆ ಬಳಿಕ ಅಭ್ಯರ್ಥಿ ಡಾ। ಕೆ.ಸುಧಾಕರ್‌ ರೋಡ್‌ ಶೋನಲ್ಲಿ ಪಾಲ್ಗೊಂಡರು. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ಮೊದಲ ಬಾರಿಗೆ ಬಿಜೆಪಿ-ಜೆಡಿಎಸ್‌ ಮೈತ್ರಿ ಆಗಿರುವುದು ವೈಯಕ್ತಿಕ ಹಿತಾಸಕ್ತಿಗಾಗಿ ಅಲ್ಲ. ನರೇಂದ್ರ ಮೋದಿಯಂತಹ ಸುಭದ್ರ ನಾಯಕನನ್ನು ನೀಡಲು ನಾವು ಶ್ರಮಿಸುತ್ತಿದ್ದೇವೆ. ಡಾ। ಕೆ.ಸುಧಾಕರ್‌ ಅವರನ್ನು ಆಶೀರ್ವದಿಸಲು ಸಾವಿರಾರು ಕಾರ್ಯಕರ್ತರು, ಬೆಂಬಲಿಗರು ಬಂದಿದ್ದಾರೆ. ಡಾ। ಕೆ.ಸುಧಾಕರ್‌ ಅವರು ಕ್ರಿಯಾಶೀಲ, ಅಭಿವೃದ್ಧಿಯ ಚಿಂತನೆ, ಉತ್ತಮ ವಾಗ್ಮಿ ಹಾಗೂ ಸಂಸತ್ತಿಗೆ ಹೋಗುವಂತಹ ಎಲ್ಲ ಅರ್ಹತೆ ಗಳಿಸಿರುವವರಾಗಿದ್ದಾರೆ. ಅವರನ್ನು ಗೆಲ್ಲಿಸಿ ನರೇಂದ್ರ ಮೋದಿಯವರಿಗೆ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.ಶಾಶ್ವತ ನೀರಿಗಾಗಿ ಯೋಜನೆ; ಭಾವುಕರಾದ ಸುಧಾಕರ್‌

ಅಭ್ಯರ್ಥಿ ಡಾ। ಕೆ.ಸುಧಾಕರ್‌ ಮಾತನಾಡಿ, ಬಯಲುಸೀಮೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಬೇಕಿದೆ. ನಾವು ಮತ್ತು ಜೆಡಿಎಸ್‌ ಸೇರಿ ಖಂಡಿತವಾಗಿ ಉತ್ತಮ ಯೋಜನೆ ನೀಡುತ್ತೇವೆ. ಎಚ್‌ಎನ್‌ ವ್ಯಾಲಿ, ಕೆಸಿ ವ್ಯಾಲಿ ತೃತೀಯ ಹಂತದ ಯೋಜನೆಗೆ ಬಿಜೆಪಿ ಸರ್ಕಾರ ಅನುದಾನ ಮೀಸಲಿಟ್ಟಿದ್ದು, ಅದನ್ನು ಕಾಂಗ್ರೆಸ್‌ ಸರ್ಕಾರ ಜಾರಿ ಮಾಡಿಲ್ಲ. ಕಾಂಗ್ರೆಸ್‌ ನಾಯಕರು ಯಾವುದೇ ಅಭಿವೃದ್ಧಿ ಮಾಡಿಲ್ಲವಾದ್ದರಿಂದ ಕೇವಲ ನಿಂದನೆಯ ಮೂಲಕ ಉತ್ತರ ಕೊಡುತ್ತಿದ್ದಾರೆ. ನಾನು ಸಾಮಾನ್ಯ ರೈತನ ಮನೆಯಲ್ಲಿ ಹುಟ್ಟಿ ಬಂದಿದ್ದೇನೆ. ನಾನು ಸಾಮಾನ್ಯ ಮೇಷ್ಟರ ಮಗ. ಸಮಾಜವನ್ನು ತಿದ್ದುವ ಮೇಷ್ಟರ ಮಗನಾಗಿ ಬೆಳೆದಿದ್ದೇನೆ ಎಂದರು.

ನಾನು ಜಾತಿ ರಾಜಕಾರಣ ಮಾಡಿಲ್ಲ. ಆದರೆ ಕಾಂಗ್ರೆಸ್‌ನವರು ಜಾತಿಯನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಒಬ್ಬ ಒಕ್ಕಲಿಗ ಎಂದರೆ ಎಲ್ಲ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಅನ್ನದಾತ ಎನ್ನುತ್ತಾರೆ. ನಾನು ಎಲ್ಲ ಮತದಾರರನ್ನು ಸಮಾನವಾಗಿ ಕಾಣುತ್ತೇನೆ. ಕಳೆದ 10 ತಿಂಗಳಲ್ಲಿ ನಾನು ಅಜ್ಞಾತವಾಸ ಅನುಭವಿಸಿದ್ದೇನೆ. ನಾನೇನೂ ತಪ್ಪು ಮಾಡಿಲ್ಲ. ಜನರ ಸೇವೆಯನ್ನು ನಾನು ಮಗನಂತೆ ಮಾಡುತ್ತೇನೆ ಎಂದು ಹೇಳಿ ಭಾವುಕರಾದರು.

ಮಾಜಿ ಸಚಿವರಾದ ಎಂಟಿಬಿ ನಾಗರಾಜ್‌, ಬೈರತಿ ಬಸವರಾಜು, ಶಾಸಕ ಧೀರಜ್‌ ಮುನಿರಾಜು, ಸಂಸದ ಮುನಿಸ್ವಾಮಿ ಮುಖಂಡರು ಪಾಲ್ಗೊಂಡಿದ್ದರು.ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬುದು ರಾಷ್ಟ್ರಕವಿ ಕುವೆಂಪು ಅವರ ವಾಣಿ. ಪ್ರಧಾನಿ ನರೇಂದ್ರ ಮೋದಿಯವರ ʼಸಬ್‌ ಕಾ ಸಾತ್‌, ಸಬ್‌ ಕಾ ವಿಕಾಸ್‌ ಸಬ್‌ ಕಾ ವಿಶ್ವಾಸ್‌ʼ ಎಂಬ ಮಂತ್ರದ ಹಿಂದಿರುವ ಪ್ರೇರಣೆ ಇದೇ ಆಗಿದೆ. ಇದಕ್ಕೆ ಪೂರಕವಾಗಿ ನಾನು ಕ್ಷೇತ್ರದ ಜನರ ಸೇವೆ ಮಾಡಲಿದ್ದೇನೆ.

-ಡಾ। ಕೆ.ಸುಧಾಕರ್‌, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ.