ಸಾರಾಂಶ
ನವದೆಹಲಿ: ಸಾವಿರಾರು ಕೋಟಿ ರು. ತೆರಿಗೆ ಬಾಕಿ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್‌ಗೆ ಸರಣಿ ನೋಟಿಸ್ ನೀಡುತ್ತಿರುವುದರ ಹಿಂದೆ, ಅದು ನಗದು ಸ್ವರೂಪದಲ್ಲಿ ದೇಣಿಗೆ ಸ್ವೀಕಾರ ಮಾಡಿದ್ದೇ ಕಾರಣ ಎಂಬ ವಿಷಯ ಬೆಳಕಿಗೆ ಬಂದಿದೆ. ಜೊತೆಗೆ ಈಗಾಗಲೇ 4 ನೋಟಿಸ್ ಪಡೆದಿರುವ ಕಾಂಗ್ರೆಸ್‌ಗೆ ಶೀಘ್ರವೇ ಮತ್ತಷ್ಟು ನೋಟಿಸ್ ರವಾನೆಯಾಗುವ ಸಾಧ್ಯತೆ ಇದ್ದು, 2500 ಕೋಟಿ ರು. ತೆರಿಗೆ ಬಾಕಿಗೆ ಸೂಚನೆ ಬರಬಹುದು ಎಂದು ಮೂಲಗಳು ತಿಳಿಸಿವೆ.
ಹೀಗಾಗಿ ಲೋಕಸಭಾ ಚುನಾವಣೆ ಮುಗಿದರೂ ಕಾಂಗ್ರೆಸ್‌ನ ಆರ್ಥಿಕ ಸಂಕಷ್ಟ ಮತ್ತು ಅದರ ನಾಯಕರ ಸಂಕಷ್ಟಗಳು ಮುಂದಿನ ಕೆಲ ವರ್ಷ ಕಳೆದರೂ ಮುಗಿಯುವ ಯಾವುದೇ ಸಾಧ್ಯತೆ ಇಲ್ಲ ಎಂದು ವರದಿಗಳು ತಿಳಿಸಿವೆ.
ದಾಳಿ ವೇಳೆ ಅಕ್ರಮ ಪತ್ತೆ: ಮಧ್ಯಪ್ರದೇಶ ಕಾಂಗ್ರೆಸ್ ನಾಯಕ ಕಮಲ್‌ನಾಥ್ ಅವರ ಆಪ್ತರ ಮನೆ ಮೇಲೆ ದಾಳಿ ನಡೆಸಿದ ವೇಳೆ ಹಲವು ದಾಖಲೆಗಳು ಲಭ್ಯವಾಗಿದ್ದವು. ಇದರಲ್ಲಿ ಕಮಲ್ ಅವರಿಗೆ ಆಪ್ತವಾಗಿರುವ ಒಂದು ಕಂಪನಿ (ಕಾಂಗ್ರೆಸ್ಸಿಗೆ ಹೆಚ್ಚು ಚುನಾವಣಾ ಬಾಂಡ್ ನೀಡಿದ ಸಂಸ್ಥೆಗಳಲ್ಲಿ ಒಂದು) ಹಾಗೂ ಇತರರು 2013-19ರ ಅವಧಿಯಲ್ಲಿ ಕಾಂಗ್ರೆಸ್‌ಗೆ 626 ಕೋಟಿ ರು. ನಗದು ನೀಡಿದ್ದು ಕಂಡುಬಂದಿತ್ತು. ಇದಕ್ಕೆ ಪೂರಕವಾದ ದಾಖಲೆಗಳು ವಾಟ್ಸಾಪ್ ಚಾಟ್ ಮತ್ತು ಕೆಲ ಬಂಧಿತರ ಹೇಳಿಕೆಗಳಲ್ಲೂ ಸಾಬೀತಾಗಿದೆ. ಈ ಕಂಪನಿಗೆ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರ ನೀಡಿರುವ ಕಾಮಗಾರಿಗಳ ಗುತ್ತಿಗೆಗೆ ಪ್ರತಿಯಾಗಿ ಲಂಚದ ರೂಪದಲ್ಲಿ ಪಕ್ಷಕ್ಕೆ ಹಣ ಸಂದಾಯವಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿರುವುದಾಗಿ ವರದಿಗಳು ತಿಳಿಸಿವೆ.
ಈ ಹಣದ ಕುರಿತು ಸ್ಪಷ್ಟನೆ ನೀಡಲು ಕಾಂಗ್ರೆಸ್‌ಗೆ ಹಲವು ಬಾರಿ ಅವಕಾಶ ನೀಡಿದರೂ ಅದು ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಅವರಿಗೆ ಸಂದಾಯವಾದ ಪೂರ್ಣ ಮೊತ್ತಕ್ಕೆ ತೆರಿಗೆ ಮತ್ತು ದಂಡ ಕಟ್ಟುವಂತೆ ನೋಟಿಸ್ ನೀಡಲಾಗಿದೆ. ಈ ಮಾಹಿತಿಯನ್ನು ಇತ್ತೀಚೆಗೆ ನೋಟಿಸ್ ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ವೇಳೆಯೂ ತೆರಿಗೆ ಇಲಾಖೆ ನೀಡಿತ್ತು. ಹೀಗಾಗಿಯೇ ಕಾಂಗ್ರೆಸ್‌ಗೆ ಕೋರ್ಟ್‌ನಿಂದಲೂ ರಿಲೀಫ್ ಸಿಕ್ಕಿಲ್ಲ ಎಂದು ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.
ವಿನಾಯ್ತಿ ರದ್ದು: ರಾಜಕೀಯ ಪಕ್ಷಗಳು ಸಂಗ್ರಹಿಸುವ ದೇಣಿಗೆಗೆ ತೆರಿಗೆ ವಿನಾಯಿತಿ ಇದೆ. ಆದರೆ ಅದಕ್ಕೆ ಪಕ್ಷಗಳು ಕೆಲವೊಂದು ನಿಯಮ ಪಾಲಿಸಬೇಕು. ಮುಖ್ಯವಾಗಿ 2000 ರು.ಗಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ಸ್ವೀಕರಿಸುವಂತಿಲ್ಲ. ಹೀಗೆ 2000 ರು.ಗಿಂತ ಹೆಚ್ಚಿನ ಮೊತ್ತದ ನಗದು ಸ್ವೀಕರಿಸಿದಾಕ್ಷಣ ಅವುಗಳಿಗೆ ನೀಡಿದ ವಿನಾಯ್ತಿ ರದ್ದಾಗುತ್ತದೆ. ಈ ಕಾರಣದಿಂದಲೇ ಕಾಂಗ್ರೆಸ್‌ಗೆ ಇತ್ತೀಚೆಗೆ 1800 ಕೋಟಿ ರು. ಮೌಲ್ಯದ ನೋಟಿಸ್ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ಮೊತ್ತ 2500 ಕೋಟಿ ರು. ದಾಟಬಹುದು ಎಂದು ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.ಕಮಲ್‌ಗೆ ಸಂಕಷ್ಟ:
ಇನ್ನು ಕಾಂಗ್ರೆಸ್ ಪಕ್ಷ ನಡೆಸಿರುವ ಎಲ್ಲ ಹಣಕಾಸು ವ್ಯವಹಾರಕ್ಕೂ ದಾಖಲೆಗಳು ಲಭ್ಯವಾಗಿವೆ. ಕಮಲನಾಥ್ ಅವರ ಅಧಿಕೃತ ನಿವಾಸದಿಂದಲೇ ಎಐಸಿಸಿ ಕಚೇರಿಗೆ 20 ಕೋಟಿ ರು. ನಗದು ಸಂದಾಯವಾಗಿದೆ. ಹೀಗಾಗಿ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ.
ಚುನಾವಣೆ ಸಮಯದಲ್ಲಿ ನೋಟಿಸ್ ಏಕೆ:
ಲೋಕಸಭೆ ಚುನಾವಣೆಯ ಹೊಸ್ತಿಲಲ್ಲೇ ಪಕ್ಷಕ್ಕೆ ನೋಟಿಸ್ ನೀಡಿರುವ ಬಗ್ಗೆ ವ್ಯಕ್ತವಾಗಿರುವ ಟೀಕೆಗೂ ಮೂಲಗಳು ಸ್ಪಷ್ಟನೆ ನೀಡಿದ್ದು, ‘2024ರ ಮಾರ್ಚ್ 31ಕ್ಕೆ ಆದಾಯ ತೆರಿಗೆ ಅಸೆಸ್‌ಮೆಂಟ್ ಮುಗಿಯಬೇಕಿರುವುದರಿಂದ ಈ ಸಮಯದಲ್ಲೇ ನೋಟಿಸ್ ನೀಡಲಾಗಿದೆ’ ಎಂದು ಹೇಳಿವೆ.ಕಾಂಗ್ರೆಸ್ ಪಕ್ಷ ತಾನು ಮುಗ್ಧ ಎಂದು ಹೇಳಿಕೊಳ್ಳುತ್ತಿದೆ. ಅದಕ್ಕೆ ಧೈರ್ಯವಿದ್ದರೆ ಅಸೆಸ್‌ಮೆಂಟ್ ಆದೇಶದ ಸಂಪೂರ್ಣ ದಾಖಲೆಯನ್ನು ಬಿಡುಗಡೆ ಮಾಡಲಿ. ಆಗ ಆ ಪಕ್ಷ ಎಸಗಿರುವ ಅಕ್ರಮಗಳು ಎಲ್ಲರಿಗೂ ತಿಳಿಯುತ್ತವೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))