ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಎಚ್.ಕಾಂತರಾಜ್ ನಡೆಸಿರುವ ಜಾತಿ ಗಣತಿ ವರದಿಯನ್ನು ಅಂಗೀಕರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ವತಿಯಿಂದ ಭಾನುವಾರ ಚಿತ್ರದುರ್ಗದಲ್ಲಿ ಆಯೋಜಿಸಿದ್ದ ಶೋಷಿತರ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
‘ಹಿಂದೆ ನಾನೇ ಮುಖ್ಯಮಂತ್ರಿಯಾಗಿದ್ದಾಗ ಕಾಂತರಾಜ್ ಅವರ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿ, ವರದಿ ಕೋರಿದ್ದೆ. ಇದಕ್ಕಾಗಿ 168 ಕೋಟಿ ರು. ಖರ್ಚು ಮಾಡಿದ್ದೇವೆ.
ನಂತರ ಬಂದ ಕುಮಾರಸ್ವಾಮಿ, ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರಗಳು ಈ ಬಗ್ಗೆ ಗಮನ ಹರಿಸಲಿಲ್ಲ. ಈಗ ವರದಿಯನ್ನು ಸ್ವೀಕರಿಸುವಂತೆ ಶೋಷಿತ ಸಮುದಾಯಗಳು ನನ್ನನ್ನು ಕೋರಿಕೊಳ್ಳುತ್ತಿವೆ.
ಜಯಪ್ರಕಾಶ್ ಹೆಗ್ಡೆ ಅವರು ವರದಿ ಸಲ್ಲಿಸಿದಲ್ಲಿ ಅದನ್ನು ಸ್ವೀಕರಿಸುವೆ. ಸಚಿವ ಸಂಪುಟದಲ್ಲಿ ಇಟ್ಟು ಈ ಬಗ್ಗೆ ಚರ್ಚಿಸುವೆ. ಏನಾದರೂ ವ್ಯತ್ಯಾಸಗಳಿದ್ದಲ್ಲಿ ತಜ್ಞರ ಅಭಿಪ್ರಾಯ ಕೋರುವೆ’ ಎಂದು ಭರವಸೆ ನೀಡಿದರು.
ವರದಿ ಸ್ವೀಕರಿಸಲು ರಾಹುಲ್ ಹೇಳಿದ್ದಾರೆ:
ಕಾಂತರಾಜ್ ವರದಿಯನ್ನು ನೋಡದೆ ಕೆಲವರು ಇದೊಂದು ಅವೈಜ್ಞಾನಿಕ ಎಂದು ಹೇಳಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ರಾಹುಲ್ ಗಾಂಧಿಯವರು ಕಾಂತರಾಜ್ ವರದಿಯನ್ನು ಸ್ವೀಕರಿಸುವಂತೆ ಸಲಹೆ ನೀಡಿದ್ದಾರೆ.
ಅಲ್ಲದೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ರಾಜ್ಯಗಳಲ್ಲಿ ಸಾಮಾಜಿಕ, ಶೈಕ್ಷಣಿಕ ವರದಿ ಮಾಡಿಸುವುದಾಗಿ ರಾಹುಲ್ ತಿಳಿಸಿದ್ದಾರೆ ಎಂದರು.
‘ಚಿತ್ರದುರ್ಗದಲ್ಲಿ ನಡೆಯುತ್ತಿರುವ ಈ ಸಮಾವೇಶ ರಾಜಕೀಯದ್ದಲ್ಲ. ಶೋಷಿತರು ಸಂಘಟಿಸಿರುವ ಐತಿಹಾಸಿಕ ಸಮಾವೇಶವಿದು. ಶೋಷಿತ ಸಮುದಾಯಗಳ ಒಕ್ಕೂಟ ಪ್ರಸ್ತಾಪಿಸಿರುವ ಪ್ರಮುಖ 12 ಬೇಡಿಕೆಗಳ ಬಗ್ಗೆ ನನ್ನ ಸಹಮತವಿದೆ. ಸಚಿವ ಸಂಪುಟ ಸಭೆಯಲ್ಲಿಟ್ಟು ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.
ಈ ಹಿಂದೆ ರಾಜೀವ್ ಗಾಂಧಿ ಮಹಿಳೆಯರಿಗೆ ಮೀಸಲಾತಿ ಕೊಟ್ಟರು. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಒಳ ಮೀಸಲಾತಿ ಬೇಕೆಂದು ಕೇಂದ್ರಕ್ಕೆ ನಾವು ಪತ್ರ ಬರೆದಿದ್ದೇವೆ. ಈ ಸಂಬಂಧ 341 ಕ್ಲಾಸ್ 3 ಅಡಿ ಮೀಸಲಾತಿ ಕೊಡಿ ಎಂದು ಕೋರಿದ್ದೇವೆ ಎಂದರು.
ಬುದ್ದ, ಬಸವ, ಅಂಬೇಡ್ಕರ್, ಸಾಹು ಮಹರಾಜ್, ನಾರಾಯಣಗುರು, ಕನಕದಾಸರು ಸೇರಿ ಮಹನೀಯರು ಜಾತಿ ವ್ಯವಸ್ಥೆ ತೊಡೆದು ಹಾಕಲು ಪ್ರಯತ್ನ ಮಾಡಿದರು.
ಅದೇ ಮಾದರಿಯಲ್ಲಿ ಜಾರಿಯಾದ ನಮ್ಮ ಸಂವಿಧಾನ ಎಲ್ಲರೂ ಗೌರವದಿಂದ ಬದುಕುವ ವ್ಯವಸ್ಥೆ ನೀಡಿತು. ಆದರೆ, ಪಟ್ಟಭದ್ರ ಹಿತಾಸಕ್ತರು ಬದಲಾವಣೆಗೆ ಅವಕಾಶ ನೀಡಬಾರದೆಂದು ತಂತ್ರ ಮಾಡುತ್ತಲೇ ಬಂದಿದ್ದಾರೆ ಎಂದು ಕಿಡಿ ಕಾರಿದರು.
ವರದಿ ಸ್ವೀಕರಿಸುವಂತೆಶೋಷಿತರು ಕೇಳ್ತಿದ್ದಾರೆವರದಿಯನ್ನು ಸ್ವೀಕರಿಸುವಂತೆ ಶೋಷಿತ ಸಮುದಾಯಗಳು ನನ್ನನ್ನು ಕೋರಿಕೊಳ್ಳುತ್ತಿವೆ. ಜಯಪ್ರಕಾಶ್ ಹೆಗ್ಡೆ ಅವರು ವರದಿ ಸಲ್ಲಿಸಿದಲ್ಲಿ ಅದನ್ನು ಸ್ವೀಕರಿಸುವೆ.
ಸಚಿವ ಸಂಪುಟದಲ್ಲಿ ಇಟ್ಟು ಈ ಬಗ್ಗೆ ಚರ್ಚಿಸುವೆ. ಏನಾದರೂ ವ್ಯತ್ಯಾಸಗಳಿದ್ದಲ್ಲಿ ತಜ್ಞರ ಅಭಿಪ್ರಾಯ ಕೋರುವೆ.- ಸಿದ್ದರಾಮಯ್ಯ ಮುಖ್ಯಮಂತ್ರಿ