ಕಾಂಗ್ರೆಸ್‌ ಸಭೆಗೆ ಹೋಗಿಲ್ಲ: ಎಸ್‌ಟಿಎಸ್‌ ಸ್ಪಷ್ಟನೆ

| Published : Dec 15 2023, 01:30 AM IST / Updated: Dec 15 2023, 01:31 AM IST

ಕಾಂಗ್ರೆಸ್‌ ಸಭೆಗೆ ಹೋಗಿಲ್ಲ: ಎಸ್‌ಟಿಎಸ್‌ ಸ್ಪಷ್ಟನೆ
Share this Article
  • FB
  • TW
  • Linkdin
  • Email

ಸಾರಾಂಶ

ನಾನು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಗೆ ಹೋಗಿಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕರೆದ ಔತಣಕೂಟಕ್ಕೆ ಮಾತ್ರ ಹೋಗಿದ್ದೇನೆ ಎಂದು ಯಶವಂತಪುರ ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌ ಸ್ಪಷ್ಟಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಸುವರ್ಣಸೌಧ

ನಾನು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಗೆ ಹೋಗಿಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕರೆದ ಔತಣಕೂಟಕ್ಕೆ ಮಾತ್ರ ಹೋಗಿದ್ದೇನೆ ಎಂದು ಯಶವಂತಪುರ ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌ ಸ್ಪಷ್ಟಪಡಿಸಿದ್ದಾರೆ.

ಈ ನಡುವೆ ಔತಣಕೂಟದಲ್ಲಿ ಭಾಗಿಯಾಗಿದ್ದ ಯಲ್ಲಾಪುರ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ್‌ ಅವರು, ‘ನಿನ್ನೆ ರಾತ್ರಿ 8ರಿಂದ 10ಗಂಟೆವರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಜೊತೆಗಿದ್ದೆ. ವಿಜಯೇಂದ್ರ ಆಯೋಜಿಸಿದ್ದ ಔತಣಕೂಟದಲ್ಲಿ ನಾನು ಭಾಗಿಯಾಗಿ ಊಟ ಮಾಡಿದೆ. ಶಿವಕುಮಾರ್‌ ಕೂಡ ನನಗೆ ಊಟಕ್ಕೆ ಆಹ್ವಾನ ಕೊಟ್ಟಿದ್ದರು. ಹಾಗಾಗಿ ನಾನು ರಾತ್ರಿ 11ಗಂಟೆಗೆ ಔತಣಕೂಟದ ಸ್ಥಳಕ್ಕೆ ಹೋಗಿ ಅವರಿಗೆ ಶುಭ ಕೋರಿ ಬಂದೆ’ ಎಂದರು.ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ನಾನು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಮೈಸೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ನನ್ನ ಮೇಲೆ ಒತ್ತಡವಿದೆ. ಆದರೆ, ನಾನು 2028ಕ್ಕೆ ಮತ್ತೆ ಶಾಸಕನಾಗಿ ಆಯ್ಕೆಯಾಗಬೇಕೆಂದಿದ್ದೇನೆ. ಬಿಜೆಪಿಗೆ ಯಾವುದೇ ತರಹದ ಮುಜುಗುರವಾಗುವ ಕೆಲಸವನ್ನು ನಾನು ಮಾಡುವುದಿಲ್ಲ. ಆದರೆ, ಒಂದು ವರ್ಗ ನನ್ನನ್ನು ಕಳಿಸುವುದಕ್ಕೆ ಪ್ರಯತ್ನ ಮಾಡುತ್ತಿದೆ. ಎರಡು ವರ್ಷಗಳಿಂದ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ನಾನು ಮೊನ್ನೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಿದ್ದೆ’ ಎಂದು ಅವರು ಸ್ಪಷ್ಟಪಡಿಸಿದರು.

ಕೈ ಶಾಸಕರ ಸಭೆಗೂ ಹೋಗಿದ್ದೆ, ಊಟಕ್ಕೂ ಹೋಗಿದ್ದೆ: ವಿಶ್ವನಾಥ್‌

ಬೆಳಗಾವಿ: ನಾನು ಕಾಂಗ್ರೆಸ್‌ ಶಾಸಕಾಂಗ ಸಭೆಗೆ ಹೋಗಿ ಕುಳಿತಿದ್ದು ನಿಜ. ಊಟ ಮಾಡಿದ್ದು ನಿಜ ಎಂದು ವಿಧಾನಪರಿಷತ್ತಿನ ಬಿಜೆಪಿ ಸದಸ್ಯ ಎಚ್‌.ವಿಶ್ವನಾಥ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನನಗೆ ಆಹ್ವಾನ ಕೊಟ್ಟಿದ್ದರು. ‘ಒಂದು ಊಟ ಇದೆ ಬನ್ನಿ, ನೀವು ನಮ್ಮ ಹಳೆಯ ಸ್ನೇಹಿತರು’ ಎಂದು ಆಹ್ವಾನಿಸಿದ್ದರು. ಮನಸ್ಸಿಗೂ, ಸ್ನೇಹಕ್ಕೂ ಪಾರ್ಟಿ ಇಲ್ಲ. ಇದರಿಂದ ಏನ್‌ ಮಹಾ ತೊಂದರೆ ಆಯ್ತು? ಹೋಗಿ ಊಟ ಮಾಡಿ ಬಂದೆವು. ತಾಂತ್ರಿಕವಾಗಿ ನಾನು ಬಿಜೆಪಿ ಎಂಎಲ್‌ಸಿ. ಆದರೆ, ಮಾನಸಿಕವಾಗಿ ಕಾಂಗ್ರೆಸ್‌ ಜೊತೆ ಇರುವವನು’ ಎಂದರು.