ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮೈತ್ರಿ ಬಲಪಡಿಸಿದರೆ ಅಧಿಕಾರ ಹಿಡಿಯಲು ಸಾಧ್ಯ -ಎಂ.ಮಲ್ಲೇಶ್ ಬಾಬು

| Published : Aug 18 2024, 01:51 AM IST / Updated: Aug 18 2024, 04:25 AM IST

ಸಾರಾಂಶ

ಮುಂದಿನ ದಿನಗಳಲ್ಲಿ ಬರಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮೈತ್ರಿ ಮುಂದುವರೆಸಿಕೊಂಡು ಹೋದಲ್ಲಿ ಮಾತ್ರ ನಾವು ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯ, ಸ್ಥಳೀಯ ಚುನಾವಣೆಗಳು ಸಾಲು ಸಾಲಾಗಿ ಬರಲಿವೆ, ಹಾಗಾಗಿ ಬಿಜೆಪಿ ಮತ್ತು ಜೆ.ಡಿ.ಎಸ್ ಮೈತ್ರಿ ಗಟ್ಟಿಯಾಗಬೇಕಾಗಿದೆ

 ಕೋಲಾರ : ಬಿಜೆಪಿ ಇನ್ನೂ ಹೆಚ್ಚಿನ ಸಹಕಾರ ನೀಡಿದಲ್ಲಿ ಮುಂಬರಲಿರುವ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಲಿದೆ ಎಂದು ಸಂಸದ ಎಂ.ಮಲ್ಲೇಶ್ ಬಾಬು ಅಭಿಪ್ರಾಯಪಟ್ಟರು.ತಾಲೂಕಿನ ಕುಂಬಾರಹಳ್ಳಿ ರತ್ನ ಕನ್ವೆನ್ಷನ್ ಹಾಲ್‌ನಲ್ಲಿ ಲೋಕಸಭಾ ಚುನಾವಣೆಯಲ್ಲಿ ಶ್ರಮಿಸಿರುವ ಎರಡೂ ಪಕ್ಷಗಳ ಮುಖಂಡರಿಗೆ ಕೃತಜ್ಞತಾ ಸಮಾರಂಭದಲ್ಲಿ ತಮಗೆ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಮೈತ್ರಿ ಮುಂದುವರಿದರೆ ಅಧಿಕಾರ

ಮುಂದಿನ ದಿನಗಳಲ್ಲಿ ಬರಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮೈತ್ರಿ ಮುಂದುವರೆಸಿಕೊಂಡು ಹೋದಲ್ಲಿ ಮಾತ್ರ ನಾವು ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯ, ನಗರಸಭೆ, ಜಿಪಂ, ತಾಪಂ, ಡಿಸಿಸಿ ಬ್ಯಾಂಕ್ ಹಾಗೂ ಕೆ.ಎಂ.ಎಫ್ ಚುನಾವಣೆಗಳು ಸಾಲು ಸಾಲಾಗಿ ಬರಲಿದೆ ಹಾಗಾಗಿ ನಾವುಗಳು ಬಿಜೆಪಿ ಮತ್ತು ಜೆ.ಡಿ.ಎಸ್ ಪಕ್ಷಗಳ ಮೈತ್ರಿ ಬಲಪಡಿಸಬೇಕಾಗಿದೆ, ಎಲ್ಲಾ ಸಂಸ್ಥೆಗಳ ಮೇಲು ಮೈತ್ರಿಯ ಬಾವುಟ ಹಾರಿಸಬೇಕು ಎಂದು ಕರೆ ನೀಡಿದರು.ಸ್ಥಳೀಯ ಸಂಸ್ಥೆಗಳ ಆಡಳಿತದ ಚುಕ್ಕಾಣಿ ಹಿಡಿಯಬೇಕಾದರೆ ಪ್ರತಿಯೊಬ್ಬರು ಚುನಾವಣೆಯಲ್ಲಿ ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಲು ಈಗಿನಿಂದಲೇ ಸಿದ್ದತೆಗಳನ್ನು ಮಾಡಿಕೊಳ್ಳಬೇಕಾಗಿದೆ, ರಾಷ್ಟ್ರ ಮಟ್ಟದಲ್ಲೂ ಎನ್.ಡಿ.ಎ ಮೈತ್ರಿಯಲ್ಲಿ ನಿಯಮಗಳನ್ನು ಬದ್ದತೆಯಿಂದ ಪಾಲಿಸುವ ಮೂಲಕ ಕೆಲಸ ಮಾಡಿ ಜನಸೇವೆ ಮಾಡಲು ಸಿಕ್ಕಿರುವ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ತಿಳಿಸಿದರು.ಅಭಿವೃದ್ಧಿಗೆ ಪ್ರಾಮಾಣಿ ಯತ್ನ

ನೀವುಗಳು ನೀಡಿರುವ ಅಧಿಕಾರ ಸದ್ಬಳಿಸಿಕೊಂಡು ಜನಸೇವೆ ಸಲ್ಲಿಸಲು ಸಿದ್ದನಿದ್ದೇನೆ. ಕುಮಾರಸ್ವಾಮಿ ನೀಡಿರುವ ಖಾತೆ ಮಾತ್ರವಲ್ಲಿ ಇತರೆ ಎಲ್ಲಾ ಇಲಾಖೆಗಳಲ್ಲಿ ಎರಡು ಜಿಲ್ಲೆಗೆ ಆಗಬೇಕಾಗಿರುವ ಅಭಿವೃದ್ದಿ ಕೆಲಸಗಳನ್ನು ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ, ಈಗಾಗಲೆ ಹಲವಾರು ಯೋಜನೆಗಳನ್ನು ರೂಪಿಸಿಕೊಂಡಿದ್ದು ಸಂಬಂಧಪಟ್ಟ ಸಚಿವರೊಂದಿಗೆ ಮತ್ತು ಅಧಿಕಾರಿಗಳ ಒಂದು ಸುತ್ತಿನ ಮಾತು ಕಡೆ ನಡೆಸಿದ್ದೇನೆ, ಸಚಿವರುಗಳು ನನ್ನ ಮನವಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿರುವುದು ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚು ಮಾಡಿದೆ ಎಂದರು.

ಖೇಲ್ ಇಂಡಿಯ ಯೋಜನೆಯಲ್ಲಿ ಯುವಕರಿಗೆ ಹಾಗೂ ಕ್ರೀಡಾಪಟುಗಳಿಗೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಈಜು ಕೊಳವನ್ನು ನಿರ್ಮಿಸಲಾಗುವುದು, ಎಲಾ ತಾಲ್ಲೂಕುಗಳಲ್ಲಿ ಕೃಷಿ ಮತ್ತು ತೋಟಗಾರಿಕೆಗೆ ಬೆಳೆಗಳಿಗೆ ಆದ್ಯತೆ ನೀಡುವ ಸಲುವಾಗಿ ಆಹಾರ ಸಂಸ್ಕರಣ ಘಟಕಗಳನ್ನು ನಿರ್ಮಿಸಲು ಈಗಾಗಲೇ ಅಗತ್ಯವಾದ ಯೋಜನೆಗಳನ್ನು ಸಿದ್ದಪಡಿಸಲಾಗಿದೆ, ಜಿಲ್ಲಾಧಿಕಾರಿಗೆ ಪ್ರತಿ ತಾಲ್ಲೂಕಿನಲ್ಲಿ ಸರ್ಕಾರಿ 10 ಎಕರೆ ಜಾಗವನ್ನು ಗುರುತಿಸಲು ಸೂಚಿಸಲಾಗಿದೆ. ಕೋಲಾರದಲ್ಲಿ ಕೊಂಡರಾಜನಹಳ್ಳಿ ಅಥವಾ ಹೊಳಲಿ ಬಳಿ ಜಾಗವನ್ನು ಗುರುತಿಸಲಾಗಿದೆ ಎಲ್ಲರಿಗೂ ಅನುವುಂಟಾಗುವ ಕಡೆ ಜಾಗವನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದರು.ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಕ್ರಮ

ಮುಳಬಾಗಿಲು, ಶ್ರೀನಿವಾಸಪುರ ಹಾಗೂ ಬಾಗೇಪಲ್ಲಿ ಗಡಿಭಾಗದಲ್ಲಿ ರಸ್ತೆ ಮಾರ್ಗಗಳ ಸಂರ್ಪಕಗಳನ್ನು ಅಭಿವೃದ್ದಿಪಡಿಸಲು ಹಲವು ಯೋಜನೆಗಳನ್ನು ರೂಪಿಸಿ ಮಂಜೂರಾತಿ ಪಡೆಯಲಾಗಿದೆ. ಬೆಂಗಳೂರು-ಚೆನ್ನೈ ಕಾರಿಡಾರ್ ಮಾರ್ಗದಲ್ಲಿ ಸರ್ವೀಸ್ ರಸ್ತೆಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಚಿವರೊಂದಿಗೆ ಚರ್ಚಿಸಲಾಗಿದೆ, ಫ್ಲೇ ಓವರ್ ಕೆಲಸಗಳು ಬಾಕಿ ಇದ್ದು ಶೀಘ್ರವಾಗಿ ಮುಗಿಸಬೇಕಾಗಿದೆ ವಡಗೂರು ಮತ್ತು ತಂಬಳ್ಳಿ ಎರಡು ಕಡೆ ಕೆಲಸಗಳು ಕಳೆದ 2 ತಿಂಗಳಿಂದ ಬಾಕಿ ಉಳಿದ್ದಿದ್ದು ಅದಕ್ಕೆ ಮರು ಚಾಲನೆ ನೀಡಲು ಸಂಬಂಧಿಸಿದವರಿಗೆ ಸೂಚಿಸಲಾಗಿದೆ ಎಂದರು.

ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಎಂಎಲ್ಸಿ ಇಂಚರ ಗೋವಿಂದರಾಜು, ಮಾಜಿ ಸಚಿವ ವರ್ತೂರು ಪ್ರಕಾಶ್, ಜೆಡಿಎಸ್ ಮುಖಂಡ ಸಿ.ಎಂ.ಆರ್.ಶ್ರೀನಾಥ್, ಬಿಜೆಪಿ ಮುಖಂಡರಾದ ನರಸಿಂಹರಾಜು, ಬಾಬು ಮೌನಿ, ವೆಂಕಟೇಶ್ ಮೌರ್ಯ, ಸಿ.ಡಿ.ರಾಮಚಂದ್ರ, ಮಾಗೇರಿ ನಾರಾಯಣಸ್ವಾಮಿ, ಕೆಂಬೋಡಿ ನಾರಾಯಣಸ್ವಾಮಿ, ರಾಜೇಶ್ ಸಿಂಗ್, ಮಮತ, ಮೀನಾಕ್ಷಿ, ಸಾ.ಮಾ.ಅನಿಲ್ ಬಾಬು, ತಂಬಳ್ಳಿ ಮುನಿಯಪ್ಪ, ಸೂಲೂರು ಆಂಜಿನಪ್ಪ, ಮುಖಂಡರಾದ ಕಡಗಟ್ಟೂರು ದಯಾನಂದ, ಟಮಕಾ ವೆಂಕಟೇಶಪ್ಪ, ಬೆಗ್ಲಿ ಸೂರ್ಯಪ್ರಕಾಶ್, ಬಂಕ್ ಮಂಜುನಾಥ್, ಅರುಣ್ ಪ್ರಸಾದ್, ವಡಗೂರು ರಾಮು, ಮುದುವಾಡಿ ಮಂಜುನಾಥ್, ಅಂಬರೀಶ್, ಶಿವನಂದ, ರಾಜಣ್ಣ, ನಾಗರಾಜ್ ಇದ್ದರು.