ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಕಿ ಇದ್ದಂಗೆ, ಮುಟ್ಟಿದರೆ ಸುಟ್ಟು ಹೋಗ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್. ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.
ಹೊಸಪೇಟೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಕಿ ಇದ್ದಂಗೆ, ಮುಟ್ಟಿದರೆ ಸುಟ್ಟು ಹೋಗ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್. ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.
ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಹುದ್ದೆ ಕುರಿತು ಜಟಾಪಟಿ ಹಾಗೂ ನವೆಂಬರ್‌ಗೆ ಕ್ಷಿಪ್ರಕ್ರಾಂತಿ ನಡೆಯಲಿದ್ದು, ಸಿಎಂ ಬದಲಾಗಲಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆಗಳ ಬೆನ್ನಲ್ಲೇ ಸಚಿವರಿಂದ ಎಚ್ಚರಿಕೆ ರೀತಿಯ ಈ ಹೇಳಿಕೆ ಹೊರಬಿದ್ದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಯಾರಿಂದಲೂ ಮುಟ್ಟಲು ಆಗುವುದಿಲ್ಲ ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಮತ್ತು ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಇದ್ದಾರೆ. ಖಾಲಿ ಇದ್ದರೆ ತಾನೇ ಇದರ ಬಗ್ಗೆ ಚರ್ಚೆ ಮಾಡಬೇಕು ಎಂದ ಅವರು, ಸಿಎಂ ಸಿದ್ದರಾಮಯ್ಯ ಕುರ್ಚಿ ಮುಟ್ಟೋಕೆ ಸಾಧ್ಯ ಏನ್ರಿ? ಎಂದರು. ಸಿದ್ದರಾಮಯ್ಯ ಬೆಂಕಿ ಇದ್ದಂಗೆ, ನಾವು ಟಗರು ಅಂತೀವಿ ಎಂದು ನಗೆ ಚಟಾಕಿಯನ್ನೂ ಹಾರಿಸಿದರು.
ನಮ್ಮದು ಹೈಕಮಾಂಡ್ ಪಕ್ಷ. ನಾವು ಪಕ್ಷದ ಶಿಸ್ತಿನ ಸಿಪಾಯಿಗಳು. ಸಿಎಂ, ಕೆಪಿಸಿಸಿ ಅಧ್ಯಕ್ಷರನ್ನು ಬದಲಾವಣೆ ಮಾಡಬೇಕೆಂದು ನಿರ್ಧಾರ ಮಾಡಿದರೆ ನಾವು ಅಭಿಪ್ರಾಯ ತಿಳಿಸಬಹುದು. ನಮ್ಮ ಪಕ್ಷದವರು ಯಾರೂ ಸಿದ್ದರಾಮಯ್ಯ ಬದಲಾಗಬೇಕೆಂದು ಅಂತ ಹೇಳಿಲ್ಲ. ದಲಿತ, ಅಲ್ಪಸಂಖ್ಯಾತ, ಎಸ್ಟಿ, ಲಿಂಗಾಯತ ಸಮುದಾಯ ಸೇರಿ ಎಲ್ಲಾ ಸಮಾಜಕ್ಕೂ ಸಿಎಂ ಆಗಬೇಕು ಅಂತ ಆಸೆ ಇರುತ್ತದೆ. ತೀರ್ಮಾನ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ತಿಳಿಸಿದರು.