ಸಾರಾಂಶ
ಮೈಸೂರು : ‘ನನ್ನ ವಿರುದ್ಧದ ಎಲ್ಲ ಆರೋಪಗಳನ್ನು ಎದುರಿಸಲು ಸನ್ನದ್ಧನಾಗಿದ್ದೇನೆ. ರಾಜಕೀಯ ಹಾಗೂ ಕಾನೂನು ಮೂಲಕವೇ ಈ ಆರೋಪಗಳನ್ನು ಎದುರಿಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶುಕ್ರವಾರ ನಗರದಲ್ಲಿ ನಡೆದ ಸಮಾವೇಶದಲ್ಲಿ ಹಲವು ವಿಚಾರಗಳನ್ನು ಬಿಚ್ಚಿಟ್ಟಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿಚಾರಗಳನ್ನು ಜನರ ಮುಂದೆ ಇಡುತ್ತೇನೆ ಎಂದರು.
ವಿಜಯೇಂದ್ರ, ಯಡಿಯೂರಪ್ಪ, ಕುಮಾರಸ್ವಾಮಿ, ಆರ್.ಅಶೋಕ್ ಎಲ್ಲರೂ ತಮ್ಮ ಅಧಿಕಾರಾವಧಿಗಳಲ್ಲಿ ಏನೇನು ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ. ಈಗಾಗಲೇ ಅವರ ಕೆಲವು ಹಗರಣಗಳ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆ ಬಳಿಕ ಈ ಬಗ್ಗೆ ಮಾತನಾಡುತ್ತೇವೆ. ಇನ್ನೂ ಕೆಲವು ಹಗರಣಗಳು ಬಾಕಿ ಇವೆ ಎಂದು ಹೇಳಿದರು.
ಬಿಜೆಪಿ- ಜೆಡಿಎಸ್ ನಾಯಕರ ಆರೋಪಗಳನ್ನು ಎದುರಿಸಲು ಸಿದ್ಧನಿದ್ದೇನೆ. ಬಿಜೆಪಿ-ಜೆಡಿಎಸ್ ಅವರು ಪಾದಯಾತ್ರೆ ಮಾಡಿದ್ದರಿಂದ ನಾವು ಜನಾಂದೋಲನ ಮಾಡಿದೆವು. ಅವರು ನಮ್ಮ ವಿರುದ್ಧ ಮಾಡುತ್ತಿರುವ ಆರೋಪಗಳು ಸುಳ್ಳು ಎಂದು ತಿಳಿಸಲು ಜನಾಂದೋಲನ ಮಾಡಬೇಕಾಯಿತು ಎಂದು ಸ್ಪಷ್ಟಪಡಿಸಿದರು.
ನನಗೆ ಕಪ್ಪು ಮಸಿ ಬಳಿಯಲು, ಜನರ ಆಶೀರ್ವಾದದಿಂದ ಬಂದ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ-ಜೆಡಿಎಸ್‌ನವರು ಯತ್ನಿಸುತ್ತಿದ್ದಾರೆ. ನನಗೆ ಕಪ್ಪು ಮಸಿ ಬಳಿದರೆ ತಮಗೆ ರಾಜಕೀಯವಾಗಿ ಅನುಕೂಲ ಆಗುತ್ತೆ ಎನ್ನುವ ಭ್ರಮೆಯಲ್ಲಿ ಇದ್ದಾರೆ. ಅವರ ಹಗರಣಗಳು ಬಹಳಷ್ಟಿವೆ. ಎಲ್ಲವನ್ನೂ ಬಿಚ್ಚಿಡುತ್ತೇವೆ. ಯಾರೆಲ್ಲ ತಪ್ಪಿತಸ್ಥರು ಇದ್ದಾರೋ ಅವರೆಲ್ಲರ ಮೇಲೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಸಿಎಂ ರಾಜೀನಾಮೆ ನೀಡುವವರೆಗೂ ಹೋರಾಟ ಮಾಡುತ್ತೇವೆ ಎಂಬ ಮೈತ್ರಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ, ‘ನಾನು ಇಂತಹುದಕ್ಕೆಲ್ಲಾ ಹೆದರುತ್ತೀನಾ? ಇದಕ್ಕೆಲ್ಲ ನಾನು ಬಗ್ಗೋದಿಲ್ಲ. ನನ್ನ ವಿರುದ್ಧದ ಆರೋಪಗಳೆಲ್ಲವೂ ಸುಳ್ಳು’ ಎಂದರು.
ಎಚ್‌ಡಿಕೆಗೆ ಹೆದರುವ ರಕ್ತ ನನ್ನದಲ್ಲ: ಡಿಕೆಶಿ
ಎಚ್.ಡಿ.ಕುಮಾರಸ್ವಾಮಿ ಬೆದರಿಕೆಗೆ ಹೆದರುವ ರಕ್ತ ನನ್ನದಲ್ಲ. ಮಗನ ಸೋಲಿನ ನಂತರ ಅವರ ಮಾತು ಮಿತಿ ಮೀರಿದೆ. 2-3 ವರ್ಷಗಳಿಂದ ಅವರ ಟೀಕೆ ಸಹಿಸಿಕೊಂಡಿದ್ದೇನೆ. ಇನ್ನು ಸಹಿಸಲಾಗುವುದಿಲ್ಲ, ಅದಕ್ಕಾಗಿಯೇ ಉತ್ತರ ನೀಡುತ್ತಿದ್ದೇನೆ.
- ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ