ಎನ್‌ಪಿಎಸ್ ತೆಗೆದು ಒಪಿಎಸ್ ಜಾರಿಗೊಳಿಸಲು ವೈಎಎನ್ ಆಗ್ರಹ
KannadaprabhaNewsNetwork | Published : Nov 04 2023, 12:30 AM IST
ಎನ್‌ಪಿಎಸ್ ತೆಗೆದು ಒಪಿಎಸ್ ಜಾರಿಗೊಳಿಸಲು ವೈಎಎನ್ ಆಗ್ರಹ
ಸಾರಾಂಶ
ಇಡೀ ದೇಶದಾದ್ಯಂತ ಇರುವ ಎನ್ ಪಿ ಎಸ್ ಯೋಜನೆಯನ್ನು ರದ್ದುಪಡಿಸಿ ಓಪಿಎಸ್ ನ್ನು ಜಾರಿಗೊಳಿಸಿ ಎಂದು ವಿಧಾನಪರಿಷತ್ ನ ಸದಸ್ಯ ವೈ.ಎನ್. ನಾರಾಯಣಸ್ವಾಮಿಯವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳದೇ ವಚನಭ್ರಷ್ಟವಾಗಿದೆ ಕನ್ನಡಪ್ರಭ ವಾರ್ತೆ, ತುರುವೇಕೆರೆ ಇಡೀ ದೇಶದಾದ್ಯಂತ ಇರುವ ಎನ್ ಪಿ ಎಸ್ ಯೋಜನೆಯನ್ನು ರದ್ದುಪಡಿಸಿ ಓಪಿಎಸ್ ನ್ನು ಜಾರಿಗೊಳಿಸಿ ಎಂದು ವಿಧಾನಪರಿಷತ್ ನ ಸದಸ್ಯ ವೈ.ಎನ್. ನಾರಾಯಣಸ್ವಾಮಿಯವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಇಲ್ಲಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಹಾಲಿ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವ ಸರ್ಕಾರಿ ನೌಕರರಿಗೆ ಇರುವ ಎನ್ ಪಿ ಎಸ್ ಯೋಜನೆಯನ್ನು ರದ್ದು ಮಾಡಿ ಓಪಿಎಸ್ ಯೋಜನೆಯನ್ನು ಜಾರಿಗೊಳಿಸುವೆವು ಎಂದು ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ನಡೆದುಕೊಳ್ಳದೇ ವಚನಭ್ರಷ್ಟರಾಗಿದ್ದಾರೆ ಎಂದು ದೂರಿದರು. ಕಾಂಗ್ರೆಸ್ ಸರ್ಕಾರ ಕೇವಲ ಗ್ಯಾರಂಟಿಯಲ್ಲಿ ಮುಳುಗಿದೆ. ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಒಂದು ವರ್ಷಗಳ ಕಾಲ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಯನ್ನು ಮುಂದೂಡಿದರೆ ಅದರಲ್ಲಿ ಉಳಿಯುವ ಸುಮಾರು ೫೦ ಸಾವಿರ ಕೋಟಿ ರು. ಹಣದಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆ, ಕಾಲೇಜುಗಳ ಅಭಿವೃದ್ಧಿಯನ್ನು ಮಾಡಬಹುದು. ಮೂಲ ಸೌಕರ್ಯವನ್ನು ನೀಡಬಹುದು ಎಂದು ನಾರಾಯಣಸ್ವಾಮಿ ಸಲಹೆ ನೀಡಿದರು. ಈ ಸರ್ಕಾರ ಸರ್ಕಾರಿ ನೌಕರರಿಗೆ ನೀಡಿರುವ ಭರವಸೆ ಹುಸಿಯಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರೇ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಎನ್ ಪಿ ಎಸ್ ನ್ನು ರದ್ದು ಮಾಡುವ ಭರವಸೆ ನೀಡಬೇಕೆಂದು ಮನವಿ ಮಾಡಿದರು. ಪಿಂಚಣಿ ವಂಚಿತರಿಗೆ ಪಿಂಚಣಿ ನೀಡಬೇಕು ಯಾವ ಶಿಕ್ಷಕರು ಪಿಂಚಣಿಯಿಂದ ವಂಚಿತರಾಗಬಾರದು. ಶಿವಮೊಗ್ಗದಲ್ಲಿ ನ.5ರಂದು ಹಮ್ಮಿಕೊಂಡಿರುವ ಸಮಾವೇಶಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ. ಶಿಕ್ಷಣ ಮಂತ್ರಿಗಳು ವರ್ಷದಲ್ಲಿ ಮೂರು ಪರೀಕ್ಷೆ ಮಾಡುವ ಹೇಳಿಕೆ ನೀಡಿದ್ದಾರೆ. ಮೂರು ಪರೀಕ್ಷೆ ಮಾಡುವಂತೆ ಯಾರೋ ಅತೀ ಬುದ್ಧಿವಂತರು ಹೇಳಿಸಿದ್ದಾರೆ. ಮುಂದಿನ ದಿನಗಳಲ್ಲಿ ನಾಲ್ಕು ಪರೀಕ್ಷೆ ಮಾಡುತ್ತೇವೆ ಎಂದರು ಅಚ್ಚರಿ ಇಲ್ಲ. ವಿದ್ಯಾರ್ಥಿಗಳಿಗೆ ೨ ಪರೀಕ್ಷೆಗಳೇ ಸರಿಯಾಗಿತ್ತು. ಇದರಿಂದ ವಿದ್ಯಾರ್ಥಿಗಳಿಗೂ, ಉಪನ್ಯಾಸರಿಗೂ ಒತ್ತಡ ಕೆಲಸ ಜಾಸ್ತಿಯಾಗಲಿದೆ ಎಂದು ವೈ.ಎ. ನಾರಾಯಣ ಸ್ವಾಮಿ ಹೇಳಿದರು. ಶಿಕ್ಷಕ ಸಮುದಾಯದ ವತಿಯಿಂದ ವಿಧಾನಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿಯವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ನಿವೃತ್ತ ಉಪ ಪ್ರಾಂಶುಪಾಲ ನಾಗರಾಜಪ್ಪ, ಶಿಕ್ಷಕರಾದ ವೆಂಕಟೇಶ್, ವಿದ್ಯಾರಣ್ಯ ಜಯಣ್ಣ, ಗುರುರಾಜು, ನಾಗರಾಜು ಶಿಕ್ಷಕರ ಸಂಘದ ಹಲವಾರು ಪದಾದಿಕಾರಿಗಳು ಇದ್ದರು. ೩ ಟಿವಿಕೆ ೧ - ತುರುವೇಕೆರೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಭೇಟಿ ನೀಡಿದ ಸಂದರ್ಭದಲ್ಲಿ ಶಿಕ್ಷಕರು ಅಭಿನಂದಿಸಿದರು.