ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಕ್ರಮ: ಮೇಲ್ಮನೆಯಲ್ಲೂ ಸಿಎಂ ರಾಜೀನಾಮೆಗೆ ಬಿಜೆಪಿ ಪಟ್ಟು

| Published : Jul 19 2024, 12:49 AM IST / Updated: Jul 19 2024, 04:53 AM IST

CM Siddaramaiah Muda Site
ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಕ್ರಮ: ಮೇಲ್ಮನೆಯಲ್ಲೂ ಸಿಎಂ ರಾಜೀನಾಮೆಗೆ ಬಿಜೆಪಿ ಪಟ್ಟು
Share this Article
  • FB
  • TW
  • Linkdin
  • Email

ಸಾರಾಂಶ

ವಾಲ್ಮೀಕಿ ನಿಗಮದ ಅಕ್ರಮದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಬಿಗಿಪಟ್ಟು ಹಿಡಿದಿರುವ ವಿರೋಧ ಪಕ್ಷಗಳು, ಗುರುವಾರವೂ ವಿಧಾನಪರಿಷತ್ತಿನಲ್ಲಿ ಅಕ್ರಮದ ತನಿಖೆ ಮುಗಿಯುವವರೆಗೆ ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿಯುವಂತೆ ಆಗ್ರಹಿಸಿದವು.

 ವಿಧಾನಪರಿಷತ್‌ :  ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಕ್ರಮದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಬಿಗಿಪಟ್ಟು ಹಿಡಿದಿರುವ ವಿರೋಧ ಪಕ್ಷಗಳು, ಗುರುವಾರವೂ ವಿಧಾನಪರಿಷತ್ತಿನಲ್ಲಿ ಅಕ್ರಮದ ತನಿಖೆ ಮುಗಿಯುವವರೆಗೆ ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿಯುವಂತೆ ಆಗ್ರಹಿಸಿದವು.

ಅಧಿವೇಶನದ ಆರಂಭದಿಂದಲೂ ಮಹರ್ಷಿ ವಾಲ್ಮೀಕಿ ನಿಗಮದ 187 ಕೋಟಿ ರು. ಅಕ್ರಮದ ಕುರಿತಂತೆ ವಿರೋಧ ಪಕ್ಷ ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ಗುರುವಾರ ಪ್ರಶ್ನೋತ್ತರ ಕಲಾಪದ ನಂತರ ನಿಯಮ 68ರ ಅಡಿಯಲ್ಲಿ ಮುಂದುವರಿದ ಚರ್ಚೆಯಲ್ಲಿ ಜೆಡಿಎಸ್‌ನ ಭೋಜೇಗೌಡ, ಗೋವಿಂದರಾಜು, ಬಿಜೆಪಿಯ ಡಿ.ಎಸ್. ಅರುಣ್‌, ಎಸ್‌.ವಿ.ಸಂಕನೂರು, ಭಾರತಿ ಶೆಟ್ಟಿ ಸೇರಿದಂತೆ ಇತರರು ಮಾತನಾಡಿ, ಪ್ರಕರಣದ ಗಂಭೀರತೆಯನ್ನು ಅರಿತು ಎಸ್‌ಐಟಿ ರದ್ದು ಮಾಡಿ ತನಿಖೆಯ ಹೊಣೆಯನ್ನು ಸಿಬಿಐಗೆ ನೀಡಬೇಕು ಎಂದು ಒತ್ತಾಯಿಸಿದರು. ಜತೆಗೆ ಅಕ್ರಮ ತಡೆಯಲು ಸಿದ್ದರಾಮಯ್ಯ ವಿಫಲವಾಗಿದ್ದು, ಅದರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.

ಸಿದ್ದರಾಮಯ್ಯ ಜೇಬು ತುಂಬಿದ ಅಕ್ರಮ:  ಬಿಜೆಪಿಯ ನವೀನ್‌ಕುಮಾರ್‌ ಮಾತನಾಡಿ, ಸರ್ಕಾರದ ಕಣ್ಗಾವಲಿನಲ್ಲಿರಬೇಕಾದ ನಿಗಮಗಳ ಹಣ ಮದ್ಯದಂಗಡಿ, ಆಭರಣದಂಗಡಿಗಳಿಗೆ ಸೇರಿದೆ. ಚುನಾವಣಾ ವೆಚ್ಚಕ್ಕೆ ಬಳಕೆಯಾಗಿದೆ. ಜನರು ಕಷ್ಟಪಟ್ಟು ಸರ್ಕಾರದ ಖಜಾನೆ ತುಂಬಿದ ಹಣ ಸಿದ್ದರಾಮಯ್ಯ ಅವರ ಜೇಬು ಸೇರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅದಕ್ಕೆ ವಿರೋಧ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯರು, ಬಿಜೆಪಿ ಸರ್ಕಾರದ ಅವಧಿಯಲ್ಲಾದ ಭೋವಿ ಅಭಿವೃದ್ಧಿ ನಿಗಮ, ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಸೇರಿದಂತೆ ಇನ್ನಿತರ ನಿಗಮಗಳಲ್ಲಾಗಿರುವ ಅಕ್ರಮಗಳು ಬಿಜೆಪಿಯ ಯಾವ ನಾಯಕರ ಜೇಬು ತುಂಬಿಸಿದ್ದವು ಎಂದು ತಿರುಗೇಟು ನೀಡಿದರು. ಜತೆಗೆ ಸಿದ್ದರಾಮಯ್ಯ ಅವರ ಹೆಸರನ್ನು ಕಡತದಿಂದ ತೆಗೆಯುವಂತೆ ಆಗ್ರಹಿಸಿದರು. ಅದಕ್ಕೆ ಸ್ಪಂದಿಸಿದ ಸಭಾಪತಿ ಬಸವರಾಜ ಹೊರಟ್ಟಿ ಸಿಎಂ ಪದವನ್ನು ಉಳಿಸಿಕೊಂಡು ಸಿದ್ದರಾಮಯ್ಯ ಹೆಸರನ್ನು ಕಡತದಿಂದ ತೆಗೆಯುವಂತೆ ಸೂಚಿಸಿದರು.

ನಂತರ ಮಾತನಾಡಿದ ಬಿಜೆಪಿಯ ಎಸ್‌.ವಿ.ಸಂಕನೂರು, ಸಚಿವರು, ನಿಗಮಗಳ ಅಧ್ಯಕ್ಷರು, ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಭಯವಿಲ್ಲದಂತಾಗಿದೆ. ಹೀಗಾಗಿಯೇ ಈ ರೀತಿಯ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿದರು.

ಬಿಜೆಪಿ ಸದಸ್ಯರ ಆರೋಪಗಳಿಗೆ ಕಾಂಗ್ರೆಸ್‌ನ ಐವಾನ್‌ ಡಿಸೋಜಾ, ಯು.ಬಿ.ವೆಂಕಟೇಶ್‌ ತಮ್ಮ ಭಾಷಣದಲ್ಲಿ ತಿರುಗೇಟು ನೀಡಿ, ವಾಲ್ಮೀಕಿ ಹಗರಣದಲ್ಲಿ ಯಾರೇ ತಪ್ಪು ಮಾಡಿದರೂ ಶಿಕ್ಷಿಸಲು ಸರ್ಕಾರ ಸಿದ್ಧವಿದೆ. ಕಾಣೆಯಾಗಿದ್ದ ನಿಗಮದ 89 ಕೋಟಿ ರು.ಗಳಲ್ಲಿ ಈಗಾಗಲೇ 85.25 ಕೋಟಿ ರು.ಗಳನ್ನು ಎಸ್‌ಐಟಿ ಹಿಂಪಡೆದಿದೆ. ವಾಲ್ಮೀಕಿ ಅಕ್ರಮದ ಬಗ್ಗೆ ಮಾತನಾಡುವ ಬಿಜೆಪಿ ಸದಸ್ಯರು ತಮ್ಮ ಅವಧಿಯಲ್ಲಾಗಿರುವ ಹಗರಣಗಳ ಬಗ್ಗೆಯೂ ಗಂಭೀರವಾಗಿ ಮಾತನಾಡಿ ತನಿಖೆಗೆ ಆಗ್ರಹಿಸಬೇಕು ಎಂದರು.

ಕೌರವರೆಲ್ಲ ನಾಶವಾಗುತ್ತಾರೆ, ಭೀಷ್ಮ ಹೊರಟ್ಟಿ ನೋಡುತ್ತಾರೆ!

ಕಾಂಗ್ರೆಸ್‌ನ ಯು.ಬಿ.ವೆಂಕಟೇಶ್‌ ಮಾತನಾಡುವಾಗ, ಬಿಜೆಪಿ ಸದಸ್ಯರೆಲ್ಲರೂ ಕೌರವರಿದ್ದ ಹಾಗೆ. ಒಬ್ಬೊಬ್ಬರೇ ಅಧಿಕಾರ ಕಳೆದುಕೊಂಡು ಹೋಗುತ್ತಾರೆ. ಆದರೆ, ಸಭಾಪತಿ ಬಸವರಾಜ ಹೊರಟ್ಟಿ ಭೀಷ್ಮ ಇದ್ದ ಹಾಗೆ. ಅವರ ನಾಶವನ್ನೆಲ್ಲ ನೀವು ನೋಡುತ್ತೀರಿ ಎಂದರು.