ಬೆಂಗಳೂರು : ಸಾದು ಸಂಗಮ ಪತ್ತಿನ ಸಹಕಾರ ಸಂಘದ ಬೆಳ್ಳಿಹಬ್ಬ, ನೂತನ ಕಟ್ಟಡ ಲೋಕರ್ಪಣೆ

| N/A | Published : Feb 17 2025, 01:34 AM IST / Updated: Feb 17 2025, 04:13 AM IST

ಸಾರಾಂಶ

ಹಿಂದೂ ಸಾದರ ಸಮುದಾಯದ ವಿದ್ಯಾರ್ಥಿಗಳ ಹಾಸ್ಟೇಲ್, ಸಮುದಾಯ ಭವನ ನಿರ್ಮಾಣ ಸೇರಿದಂತೆ ಸಮುದಾಯದ ಅಭಿವೃದ್ಧಿಗೆ ಎಲ್ಲ ರೀತಿಯ ನೆರವು, ಸಹಕಾರ ನೀಡುವುದಾಗಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

 ಬೆಂಗಳೂರು : ಹಿಂದೂ ಸಾದರ ಸಮುದಾಯದ ವಿದ್ಯಾರ್ಥಿಗಳ ಹಾಸ್ಟೇಲ್, ಸಮುದಾಯ ಭವನ ನಿರ್ಮಾಣ ಸೇರಿದಂತೆ ಸಮುದಾಯದ ಅಭಿವೃದ್ಧಿಗೆ ಎಲ್ಲ ರೀತಿಯ ನೆರವು, ಸಹಕಾರ ನೀಡುವುದಾಗಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಭಾನುವಾರ ನಗರದಲ್ಲಿ ನಡೆದ ಸಾದು ಸಂಗಮ ಪತ್ತಿನ ಸಹಕಾರ ಸಂಘದ ಬೆಳ್ಳಿಹಬ್ಬ, ನೂತನ ಕಟ್ಟಡ ಲೋಕರ್ಪಣೆ ಮತ್ತು ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಸಮುದಾಯದ ಮಕ್ಕಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ಉನ್ನತ ಸ್ಥಾನಕ್ಕೆ ಏರಬೇಕು. ಸಂಘಟನೆ ಮತ್ತು ಶಿಕ್ಷಣದಿಂದ ಸಮುದಾಯದ ಅಭಿವೃದ್ಧಿ ಸಾಧ್ಯ. ಸಹಕಾರ ಸಂಘದ ನೆರವಿನಿಂದ ಉದ್ಯೋಗ, ಉದ್ಯಮ, ಕೈಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬರಬೇಕು ಎಂದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಸಾದರ ಹಿಂದೂ ಸಮಾಜ ಅತಿ ಚಿಕ್ಕ ಸಮುದಾಯವಾಗಿದೆ. ಸಣ್ಣ ಸಮುದಾಯಗಳು ಧ್ವನಿಯನ್ನು ಒಟ್ಟು ಮಾಡಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಬೇಕು ಎಂದು ಹೇಳಿದರು.

ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಮಕ್ಕಳನ್ನು ವಿದ್ಯಾವಂತರಾಗಿ ಮಾಡಬೇಕು. ಸಹಕಾರಿ ಕ್ಷೇತ್ರ ಜನರ ಆಂದೋಲವಾಗಬೇಕು. ಪಟ್ಟಭದ್ರ ಹಿತಾಸಕ್ತಿಗಳ ಕೈಯಲ್ಲಿ ಸಹಕಾರ ಸಂಸ್ಥೆ ಸಿಲುಕಬಾರದು ಎಂದರು. ‘ಮುಖ್ಯಮಂತ್ರಿ’ ಚಂದ್ರು ಮಾತನಾಡಿ, ಹಿಂದುಳಿದವರು ಇರುವ 2ಎ ವರ್ಗಕ್ಕೆ ಪ್ರಬಲ ಸಮುದಾಯಗಳನ್ನು ಸೇರಿಸುವುದರಿಂದ ಸಮುದ್ರವೇ ನದಿಗೆ ಸೇರಿದಂತಾಗುತ್ತದೆ ಎಂದು ಹೇಳಿದರು.

ಸಹಕಾರ ಸಂಘದ ಅಧ್ಯಕ್ಷ ಬಿ.ಎನ್. ಲಕ್ಷ್ಮಿಪತಿ ಮಾತನಾಡಿ, ಸಹಕಾರ ಸಂಘದ ಮೂಲಕ ಜನರಿಗೆ ಆರ್ಥಿಕ ಸಹಕಾರ ನೀಡಿದಾಗ ಸಮುದಾಯದ ಅಭಿವೃದ್ಧಿಯಾಗುತ್ತದೆ. ಶಿಕ್ಷಣಕ್ಕೆ ಒತ್ತು ನೀಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಕಾರ, ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ತಿಳಿಸಿದರು.

ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಪಿ.ಮೂರ್ತಿ ಅವರಿಗೆ ಸನ್ಮಾನಿಸಲಾಯಿತು. ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಿ.ಈ. ರವಿಕುಮಾರ್ ಉಪಸ್ಥಿತರಿದ್ದರು.