ಬಿಜೆಪಿ ಮುಖಂಡನ ಮನೆ ಮೇಲೆ ಆದಾಯ ತೆರಿಗೆ ದಾಳಿ: 4 ಕೋಟಿ, ಚಿನ್ನ ಪತ್ತೆ?

| Published : Apr 26 2024, 07:02 AM IST

IT Raids

ಸಾರಾಂಶ

ಬಿಜೆಪಿ ಮುಖಂಡ ಮಾದಾವರ ಗೋವಿಂದಪ್ಪ ಅವರ ನಿವಾಸದ ಮೇಲೆ ಐಟಿ ದಾಳಿಯಾಗಿದ್ದು, ಕೋಟ್ಯಂತರ ರು. ನಗದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ

ಬೆಂಗಳೂರು  : ಬಿಜೆಪಿ ಮುಖಂಡ ಮಾದಾವರ ಗೋವಿಂದಪ್ಪ ಅವರ ನಿವಾಸದ ಮೇಲೆ ಐಟಿ ದಾಳಿಯಾಗಿದ್ದು, ಕೋಟ್ಯಂತರ ರು. ನಗದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಗೋವಿಂದಪ್ಪ ನಿವಾಸದಲ್ಲಿ ನಗದು ಇರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. 10 ಸಿಬ್ಬಂದಿ ಮನೆಯನ್ನು ಪರಿಶೀಲನೆ ನಡೆಸಿದ್ದು, ಕೋಟ್ಯಂತರ ರು. ನಗದು ಪತ್ತೆಯಾಗಿದೆ.

ಚಿನ್ನಾಭರಣ ಸಹ ಶೋಧ ಕಾರ್ಯದಲ್ಲಿ ಸಿಕ್ಕಿದೆ ಎನ್ನಲಾಗಿದೆ. ದಾಖಲೆ ಇಲ್ಲದ ಸುಮಾರು 4 ಕೋಟಿ ರು.ಗಿಂತ ಹೆಚ್ಚಿನ ನಗದು ಸಿಕ್ಕಿದೆ ಎಂದು ಹೇಳಲಾಗಿದೆ. ಕೋಟ್ಯಂತರ ಹಣ ಪತ್ತೆಯಾಗುತ್ತಿದ್ದಂತೆ ಐಟಿ ಸಿಬ್ಬಂದಿ ಹಣ ಎಣಿಕೆ ಮಷಿನ್ ಹಾಗೂ ಚಿನ್ನಾಭರಣ ತೂಕದ ಯಂತ್ರ ತೆಗೆದುಕೊಂಡು ಹೋಗಿ ಎಣಿಸಿದ್ದಾರೆ ಎನ್ನಲಾಗಿದೆ.

ಡಿಕೆಸು ಆಪ್ತನ ಮೇಲೆ ಐಟಿ ದಾಳಿ: ರಾಜ್ಯದ ಮೊದಲ ಹಂತದ ಲೋಕಸಭಾ ಚುನಾವಣೆಗೆ ಕೆಲವೇ ತಾಸುಗಳು ಬಾಕಿ ಇರುವ ಹೊತ್ತಿನಲ್ಲಿಯೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ.ಸುರೇಶ್‌ ಅವರ ಆಪ್ತ ಹಾಗೂ ಬಿಬಿಎಂಪಿ ಮಾಜಿ ಸದಸ್ಯರೊಬ್ಬರ ಮನೆ ಮೇಲೆ ದಾಳಿ ನಡೆಸಿ ನಗ-ನಾಣ್ಯ ವಶಪಡಿಸಿಕೊಂಡಿದ್ದಾರೆ. ಬಿಬಿಎಂಪಿ ಮಾಜಿ ಸದಸ್ಯ ಗಂಗಾಧರ್‌ ಅವರ ಕೋಣನಕುಂಟೆ ಕ್ರಾಸ್‌ ಬಳಿ ಇರುವ ನಿವಾಸದ ಮೇಲೆ ದಾಳಿ ನಡೆಸಲಾಗಿದೆ.

ಈ ವೇಳೆ 87 ಲಕ್ಷ ರು. ನಗದು ಸೇರಿದಂತೆ ಅಪಾರ ಪ್ರಮಾಣದಲ್ಲಿ ಚಿನ್ನಾಭರಣ ಮತ್ತು ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ. ಗಂಗಾಧರ್‌ ನಿವಾಸದಲ್ಲಿ ಸತತ 12 ಗಂಟೆಗಳ ಕಾಲ ಶೋಧ ಕಾರ್ಯ ನಡೆಸಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಹಣ ಹಂಚಿಕೆ ಮಾಡಲು ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಮೇರೆಗೆ ಐಟಿ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದಾರೆ. ಮೂರು ಕಾರುಗಳಲ್ಲಿ ಒಟ್ಟು 11 ಅಧಿಕಾರಿಗಳು ಮನೆಗೆ ಆಗಮಿಸಿ ತಪಾಸಣೆ ಕೈಗೊಂಡರು ಎನ್ನಲಾಗಿದೆ.