ಲೋಕ ಚುನಾವಣೆ: ಇಂಡಿಯಾ ಕೂಟ ನಾಯಕರಿಂದ ದಿಲ್ಲಿಯಲ್ಲಿ ಶಕ್ತಿ ಪ್ರದರ್ಶನ

| Published : Mar 31 2024, 02:05 AM IST / Updated: Mar 31 2024, 04:15 AM IST

ಲೋಕ ಚುನಾವಣೆ: ಇಂಡಿಯಾ ಕೂಟ ನಾಯಕರಿಂದ ದಿಲ್ಲಿಯಲ್ಲಿ ಶಕ್ತಿ ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಬೃಹತ್‌ ಸಮಾವೇಶ ನಡೆಯಲಿದೆ. ಇದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಬಂಧನದ ವಿರುದ್ಧ ನಡೆಸುತ್ತಿರುವ ರ್‍ಯಾಲಿ ಅಲ್ಲ ಎಂದು ಕಾಂಗ್ರೆಸ್‌ ಪಕ್ಷ ಸ್ಪಷ್ಟಪಡಿಸಿದೆ.

ಪಿಟಿಐ ನವದೆಹಲಿ

‘ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ರಕ್ಷಿಸಲು ‘ಲೋಕತಂತ್ರ ಬಚಾವೋ ರ್‍ಯಾಲಿ’ ನಡೆಸಲಾಗುತ್ತಿದೆ. ಮಾ.17ರಂದು ಮುಂಬೈನಲ್ಲಿ ನಡೆದ ಸಮಾವೇಶದಲ್ಲಿ ಇಂಡಿಯಾ ಕೂಟದ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಲಾಗಿತ್ತು. ದೆಹಲಿಯಲ್ಲಿ ನಡೆಯುವ ಸಮಾವೇಶದಲ್ಲಿ ಎರಡನೇ ರಣಕಹಳೆ ಮೊಳಗಿಸಲಾಗುವುದು. ರಾಮಲೀಲಾ ಮೈದಾನದಿಂದ ಲೋಕ ಕಲ್ಯಾಣ ಮಾರ್ಗಕ್ಕೆ (ಪ್ರಧಾನಿ ನಿವಾಸವಿರುವ ಸ್ಥಳ) ‘ನಿಮ್ಮ ಸಮಯ ಮುಗಿಯಿತು’ ಎಂಬ ಸಂದೇಶ ರವಾನಿಸಲಾಗುವುದು’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಸಮಾವೇಶದಲ್ಲಿ ಮಾತನಾಡಲಿದ್ದಾರೆ. ಇದು ಒಬ್ಬ ವ್ಯಕ್ತಿಗಾಗಿ ನಡೆಯುತ್ತಿರುವ ಸಮಾವೇಶವಲ್ಲ. ಇಂಡಿಯಾ ಮೈತ್ರಿಕೂಟದ ಎಲ್ಲಾ 27-28 ರಾಜಕೀಯ ಪಕ್ಷಗಳೂ ಇದರಲ್ಲಿ ಸೇರಿಕೊಂಡಿದ್ದು, ಆ ಪಕ್ಷಗಳ ನಾಯಕರು ಪಾಲ್ಗೊಳ್ಳಲಿದ್ದಾರೆ. ‘ಇಂಡಿಯಾ’ ಪಕ್ಷಗಳಲ್ಲಿರುವ ಒಗ್ಗಟ್ಟನ್ನು ಈ ಸಮಾವೇಶ ಸಾರಲಿದೆ ಎಂದು ಹೇಳಿದರು.