ಬರೆದು ಇಟ್ಟುಕೊಳ್ಳಿ, ಮೋದಿ ಮತ್ತೆ ಪಿಎಂ ಆಗೋಲ್ಲ: ರಾಹುಲ್‌

| Published : May 11 2024, 01:34 AM IST / Updated: May 11 2024, 04:56 AM IST

Narendra Modi Rally Maharashtra
ಬರೆದು ಇಟ್ಟುಕೊಳ್ಳಿ, ಮೋದಿ ಮತ್ತೆ ಪಿಎಂ ಆಗೋಲ್ಲ: ರಾಹುಲ್‌
Share this Article
  • FB
  • TW
  • Linkdin
  • Email

ಸಾರಾಂಶ

‘ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗುವುದಿಲ್ಲ. ಇದನ್ನು ಬರೆದಿಟ್ಟುಕೊಳ್ಳಿ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಶುಕ್ರವಾರ ಸವಾಲು ಹಾಕಿದ್ದಾರೆ.

ಕನೌಜ್‌ (ಉತ್ತರಪ್ರದೇಶ): ‘ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗುವುದಿಲ್ಲ. ಇದನ್ನು ಬರೆದಿಟ್ಟುಕೊಳ್ಳಿ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಶುಕ್ರವಾರ ಸವಾಲು ಹಾಕಿದ್ದಾರೆ.

ಉತ್ತರ ಪ್ರದೇಶದ ಕನೌಜ್‌ನ ಸಮಾಜವಾದಿ ಪಕ್ಷದ ಅಭ್ಯರ್ಥಿ ಹಾಗೂ ಪಕ್ಷದ ನೇತಾರ ಅಖಿಲೇಶ್‌ ಯಾದವ್‌ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, ‘ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ವರ್ಧಿಸುತ್ತಿವೆ. ಇಲ್ಲಿ ಇಂಡಿಯಾ ಕೂಟದ ಬಿರುಗಾಳಿ ಬೀಸುತ್ತಿದೆ. ಈ ಗಾಳಿಗೆ ಸಿಲುಕಿ ಬಿಜೆಪಿ ಅತಿ ದೊಡ್ಡ ಸೋಲನ್ನು ಕಾಣಲಿದೆ. ಆದ್ದರಿಂದ ಮತ್ತೊಮ್ಮೆ ಪ್ರಧಾನಮಂತ್ರಿಯಾಗಿ ಮೋದಿ ಆಯ್ಕೆಯಾಗುವುದಿಲ್ಲ. ಇದನ್ನು ಬೇಕಾದರೆ ಮತದಾರರು ಬರೆದಿಟ್ಟುಕೊಳ್ಳಿ’ ಎಂದರು.

‘ರಾಜ್ಯದ 80 ಲೋಕಸಭಾ ಸ್ಥಾನಗಳಲ್ಲಿ ಇಂಡಿಯಾ ಕೂಟ ಸುಮಾರು 50 ಸ್ಥಾನಗಳನ್ನು ಗೆಲ್ಲಲಿದೆ’ ಎಂದು ರಾಹುಲ್‌ ವಿಶ್ವಾಸ ವ್ಯಕ್ತಪಡಿಸಿದರು.

‘ಅದಾನಿ, ಅಂಬಾನಿ ಟೆಂಪೊದಲ್ಲಿ ಕಾಂಗ್ರೆಸ್‌ಗೆ ಹಣ ಕಳಿಸಿದ್ದಾರಾ?’ ಎಂಬ ಮೋದಿ ಟೀಕೆ ಬಗ್ಗೆ ಮಾತನಾಡಿದ ಅವರು, ‘ಇಂಡಿಯಾ ಕೂಟ ತನ್ನನ್ನು ಸುತ್ತುವರೆದಿದೆ. ತಾನು ಸೋಲಿನ ಭೀತಿಯಲ್ಲಿದ್ದೇನೆ ಎಂದು ಮೋದಿಗೆ ಅರಿವಾಗಿದೆ. ಹೀಗಾಗಿ ಅದಾನಿ, ಅಂಬಾನಿ ಅವರಿಗೆ ತನ್ನನ್ನು ಕಾಪಾಡುವಂತೆ ಮೋದಿ ಗೋಗರೆಯುತ್ತಿದ್ದಾರೆ’ ಎಂದು ರಾಹುಲ್‌ ಲೇವಡಿ ಮಾಡಿದರು.

‘ಮೋದಿ ಅವರಿಗೆ ಅದಾನಿ, ಅಂಬಾನಿ ಅವರ ಹಣದ ಟೆಂಪೊ ಬಗ್ಗೆ ತುಂಬಾ ವೈಯಕ್ತಿಕವಾಗಿ ಅನುಭವ ಇದೆ. ಅವರು ಇದುವರೆಗೂ ಅದೆಷ್ಟೋ ಹಣದ ಟೆಂಪೊಗಳನ್ನು ನೋಡಿದ್ದಾರೋ ನನಗೆ ಗೊತ್ತಿಲ್ಲ’ ಎಂದೂ ವ್ಯಂಗ್ಯವಾಡಿದರು.