ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯಸಭೆಗೆ ದೇವೇಗೌಡರು ಹಾಗೂ ಸುಮಲತಾ ಅಂಬರೀಶ್ ಅವರಿಗೆ ಟಿಕೆಟ್ ನೀಡದೆ ವಂಚಿಸಿರುವ ಬಿಜೆಪಿ ಒಕ್ಕಲಿಗರಿಗೆ ಅನ್ಯಾಯ ಮಾಡಿದೆ ಎಂದು ಶಾಸಕ ಪಿ.ರವಿಕುಮಾರ್ ಆರೋಪಿಸಿದರು.ಸುಮಲತಾ, ದೇವೇಗೌಡರಿಗೆ ರಾಜ್ಯಸಭಾ ಟಿಕೆಟ್ ಕೈ ತಪ್ಪಿದ ವಿಚಾರವಾಗಿ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ಮುಗಿಸಲು ಬಿಜೆಪಿ ಒಂದೊಂದೇ ಮೊಳೆಯನ್ನು ಹೊಡೆಯುತ್ತಿದೆ. ಯಾವಾಗ ಕೊನೆ ಮೊಳೆ ಹೊಡೆಯುತ್ತಾರೋ ಗೊತ್ತಿಲ್ಲ. ಜೆಡಿಎಸ್ ಗ್ರೌಂಡ್‌ನ್ನು ಹಂತ ಹಂತವಾಗಿ ಕಸಿದುಕೊಳ್ಳುತ್ತಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬಿಸ್ಕೆಟ್ ರೀತಿ ಒಂದು ಕೇಂದ್ರ ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಈಗಲೇ ಜೆಡಿಎಸ್‌ನವರು ಎಚ್ಚೆತ್ತುಕೊಳ್ಳದಿದ್ದರೆ ರಾಜಕೀಯವಾಗಿ ಸರ್ವನಾಶ ಮಾಡುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.
ದೇವೇಗೌಡರಿಗೆ ರಾಜ್ಯಸಭಾ ಟಿಕೆಟ್ ಕೊಡದಿದ್ದದ್ದು ವೈಯಕ್ತಿಕವಾಗಿ ನನಗೆ ಬೇಸರ ಮೂಡಿಸಿದೆ. ದೇವೇಗೌಡರ ಬಗ್ಗೆ ಮೋದಿ ತೋರಿಸುವ ಪ್ರೀತಿ ಬರೀ ನಾಟಕ. ಅದು ಕೇವಲ ಟಿವಿ, ಕ್ಯಾಮೆರಾಗೆ ಕೊಡುವ ಪೋಸ್ ಅಷ್ಟೇ. ಪ್ರಧಾನಿ ಮೋದಿ ನಟ ಭಯಂಕರ. ಮಂಡ್ಯಕ್ಕೆ ಚಪ್ಪಡಿ ಕಲ್ಲು ಎಳೆದಿದ್ದಾರೆ, ಒಕ್ಕಲಿಗರನ್ನು ಬಿಜೆಪಿಯವರು ಮುಗಿಸಿದ್ದಾರೆ ಎಂದು ಟೀಕಿಸಿದರು.ಸುಮಲತಾ ತ್ಯಾಗಕ್ಕೆ ಬೆಲೆ ಇಲ್ಲ:
ಅಂಬರೀಶ್ ಕುಟುಂಬ ದೊಡ್ಡದು. ಅವರಿಗೂ ಕೂಡ ಅನ್ಯಾಯ ಮಾಡಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗಲೇ ಅವರ ಪುತ್ರ ನಿಖಿಲ್ ಅವರನ್ನು ಪಕ್ಷೇತರವಾಗಿ ಸ್ಪರ್ಧಿಸಿದ್ದ ಸುಮಲತಾ ಸೋಲಿಸಿದ್ದರು. ಕುಮಾರಸ್ವಾಮಿ ಸ್ಪರ್ಧೆ ಮಾಡಿದಾಗ ಸುಮಲತಾ ತ್ಯಾಗಮಯಿಯಾಗಿ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಅಂತಹವರಿಗೆ ಬಿಜೆಪಿ ಅನ್ಯಾಯ ಮಾಡಿರೋದು ಖಂಡನೀಯ. ಸುಮಲತಾ ಅವರು ಮಾಡಿದ ತ್ಯಾಗಕ್ಕೆ ಬೆಲೆ ಇಲ್ಲದಂತಾಗಿದೆ ಎಂದರು.
ದೇವೇಗೌಡರ ವಿಚಾರದಲ್ಲಿ ಕಾಂಗ್ರೆಸ್ ಗೌರವಯುತವಾಗಿ ನಡೆದುಕೊಂಡಿದೆ. ಲೋಕಸಭಾ ಚುನಾವಣೆ ಸೋತಾಗಲೂ ಗೌಡರನ್ನು ಕಾಂಗ್ರೆಸ್ ರಾಜ್ಯಸಭೆಗೆ ಕಳುಹಿಸಿತ್ತು. ಅವರ ಅನುಭವ ಅಗತ್ಯ ಎಂದು ಸೋನಿಯಾಗಾಂಧಿ ರಾಜ್ಯಸಭೆಗೆ ಆಯ್ಕೆ ಮಾಡಿದ್ದರು. ಆದರೆ, ಬಿಜೆಪಿ ಅಂತಹ ಮಹನೀಯರಿಗೆ ಟಿಕೆಟ್ ತಪ್ಪಿಸಿದ್ದಾರೆ. ಇದು ಒಕ್ಕಲಿಗರಿಗೆ ಮಾಡಿದ ಅನ್ಯಾಯ ಎಂದು ಮತ್ತೊಮ್ಮೆ ಆರೋಪಿಸಿದರು.