ಗ್ರಾಮಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ಸೂಚನೆ

| Published : Nov 13 2024, 12:01 AM IST

ಸಾರಾಂಶ

ಗ್ರಾಮೀಣ ಭಾಗದ ಬಡವರು ದಲಿತ,ಹಿಂದುಳಿದ, ಅಲ್ಪಸಂಖ್ಯಾತರು ಕಷ್ಟ ಪರಿಹಾರಕ್ಕೆ ಮುಂದಾಗಿದ್ದು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಉತ್ತಮ ಭವಿಷ್ಯ ಕೊಡಲು ಕಾಂಗ್ರೆಸ್‌ ಮುಂದಾಗಿದೆ. ಈಗಾಗಲೇ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಜನಕ್ಕೆ ಆಸರೆಯಾಗಿದ್ದು, ಇದು ಐದು ವರ್ಷ ಮುಂದುವರೆಯಲಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಮ್ಮೂರಿಗೆ ನಮ್ಮ ಶಾಸಕರು ಕಾರ್ಯಕ್ರಮದಡಿ ತಾಲೂಕಿನ ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೂರು ಗ್ರಾಮಗಳಿಗೆ ಮಂಗಳವಾರ ಶಾಸಕ ಪ್ರದೀಪ್ ಈಶ್ವರ್ ತಾಲೂಕು ಆಡಳಿತದ ಆಧಿಕಾರಿಗಳೊಂದಿಗೆ ಭೇಟಿ ನೀಡಿ ಜನಸಾಮಾನ್ಯರ ಅಹವಾಲು ಆಲಿಸಿ ಪರಿಹಾರ ಕಾಣಿಸಬಹುದಾದ ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹರಿಸಿದರು. ತಾಲ್ಲೂಕು ಪಂಚಾಯತಿ, ಆರೋಗ್ಯ, ಕಂದಾಯ, ಆಹಾರ, ಬೆಸ್ಕಾಂ, ಪೋಲಿಸ್ ಮತ್ತು ಗ್ರಾಮ ಪಂಚಾಯತಿ ಇಲಾಖೆಗಳ ಅಧಿಕಾರಿಗಳೊಟ್ಟಿಗೆ ಮಂಗಳವಾರ ಕಮ್ಮಗುಟ್ಟಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯ ಸಿದ್ದಗಾನಹಳ್ಳಿ, ನಾಗಸಾನಹಳ್ಳಿ, ಮತ್ತು ಒಂಟೂರು ಗ್ರಾಮಗಳಿಗೆ ಭೇಟಿ ನೀಡಿದ ಗ್ರಾಮಗಳ ಮನೆ ಮನೆಗೂ ತೆರಳಿ ಅವರ ಕುಂದುಕೊರತೆ, ಸಮಸ್ಯೆಗಳನ್ನು ಆಲಿಸಿದರು.ರಸ್ತೆ, ಚರಂಡಿ. ಸ್ವಚ್ಛತೆಗೆ ಸೂಚನೆ

ಈ ವೇಳೆ ಗ್ರಾಮಸ್ಥರು ತಾವು ಎದುರಿಸುತ್ತಿರುವ ಸಮಸ್ಯೆಗಳಾದ ರಸ್ತೆ, ಚರಂಡಿ, ಕಲ್ಯಾಣಿ ಸ್ವಚ್ಛತೆ,ಸ್ಮಶಾನಕ್ಕೆ ಜಾಗ, ಸ್ಮಶಾನಕ್ಕೆ ರಸ್ತೆ ಒತ್ತುವರಿ , ವಿದ್ಯುತ್, ಜಮೀನು ಖಾತೆ , ಪಿಂಚಣಿ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಖುದ್ಧಾಗಿ ಶಾಸಕರ ಗಮನಕ್ಕೆ ತಂದರು. ಶಾಸಕರು ತಮ್ಮ ಜತೆಗಿದ್ದ ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳ ಗಮನಕ್ಕೆ ತಂದ ಶಾಸಕರು ತುರ್ತಾಗಿ ಪರಿಹರಿಸುವಂತೆ ನಿರ್ದೇಶನ ನೀಡಿದರು. ಸಿದ್ದಗಾನಹಳ್ಳಿ, ನಾಗಸಾನಹಳ್ಳಿ, ಮತ್ತು ಒಂಟೂರು ಗ್ರಾಮಗಳಲ್ಲಿ ಸಾರ್ವಜನಿಕರೊಂದಿಗೆ ಅಹವಾಲು ಆಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ನಾನು ನನ್ನ ಜನರನ್ನು ಭೇಟಿ ಮಾಡಿ ಸಮಸ್ಯೆ ಆಲಿಸುವ ಕೆಲಸ ಮಾಡುತ್ತಿದ್ದು ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ವಿಧಾನಸಭಾ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಬರಲೇಬೇಕು ಎಂದು ನಿರ್ಧರಿಸಿ ಇಂದು ಸಿದ್ದಗಾನಹಳ್ಳಿ, ನಾಗಸಾನಹಳ್ಳಿ, ಮತ್ತು ಒಂಟೂರು ಗ್ರಾಮಗಳಿಗೆ ಬಂದಿದ್ದೇನೆ ಎಂದರು.

ದಲಿತರಿಗೆ ಅಗತ್ಯ ಸೌಲಭ್ಯಕ್ಷೇತ್ರದ ಬಹುತೇಕ ಗ್ರಾಮಗಳಲ್ಲಿ ಸ್ವಾತಂತ್ರ‍್ಯ ಬಂದಾಗಿನಿಂದ ದಲಿತರಿಗೆ ಕನಿಷ್ಠ ಸ್ಮಶಾನಕ್ಕೆ ಜಾಗಗಳಿಲ್ಲ. ಜಾಗಗಳಿರುವ ಕಡೆ ಬಲಾಢ್ಯರು ಒತ್ತುವರಿ ಮಾಡಿ ಕೊಂಡಿದ್ದಾರೆ.ಅದರ ತೆರವಿಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇನ್ನು ನೀರು ನೈರ್ಮಲ್ಯದಂತಹ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.ಗ್ರಾಮೀಣ ಭಾಗದ ಬಡವರು ದಲಿತ,ಹಿಂದುಳಿದ, ಅಲ್ಪಸಂಖ್ಯಾತರು ಕಷ್ಟ ಪರಿಹಾರಕ್ಕೆ ಮುಂದಾಗಿದ್ದು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಉತ್ತಮ ಭವಿಷ್ಯ ಕೊಡಲು ಮುಂದಾಗಿದ್ದೇನೆ. ಈಗಾಗಲೇ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಜನಕ್ಕೆ ಆಸರೆಯಾಗಿದ್ದು, ಇದು ಐದು ವರ್ಷ ಮುಂದುವರೆಯಲಿವೆ ಎಂದರು.

ಪ್ರತಾಪ್ ಸಿಂಹಗೆ ಎಚ್ಚರಿಕೆಇಸ್ಲಾಂ ಧರ್ಮದ ಬಗ್ಗೆ ಕೀಳಾಗಿ ಮಾತನಾಡೋದು‌ ಬಿಡಿ ಪ್ರತಾಪ ಸಿಂಹ, ನಾನು ಹಿಂದೂ, ನನ್ನ ಧರ್ಮದ ಬಗ್ಗೆ ಕೀಳಾಗಿ ಯಾರಾದರೂ ಮಾತಾನಾಡಿದ್ರೆ ಬೇಜಾರಾಗಲ್ವಾ. ಇಸ್ಲಾಂ ಧರ್ಮದ ಬಗ್ಗೆ ಮಾತನಾಡಿದ್ರೆ ಹೇಗೆ. ಮುಸಲ್ಮಾನರೂ ಸಹಾ ನಮ್ಮ ದೇಶದಲ್ಲೇ ಹುಟ್ಟಿ ಬೆಳೆದಿದ್ದಾರೆ. ಅವರ ಧರ್ಮವನ್ನೂ ನಾವು ಗೌರವಿಸಬೇಕಲ್ವಾ. ಬಾಯಿಗ ಬಂದ ಹಾಗೆ ಮಾತನಾಡಬೇಡಿ. ನೀವು ಬಾಯಿಗೆ ಬಂದ ಹಾಗೆ ಮಾತಾಡಿದ್ರೆ ಸುಮ್ಮನಿರೋಕೆ ನಾನೇನು ವಿಜಯೇಂದ್ರ ಅಲ್ಲ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ತಾಸಿಲ್ದಾರ್ ಅನಿಲ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ಕಾಂಗ್ರೆಸ್ ಜಿಲ್ಲಾದ್ಯಕ್ಷ ಹಾಗೂ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಪರೇಸಂದ್ರ ಪಿಎಸ್ಐ ಜಗದೀಶ್ ರೆಡ್ಡಿ, ಮುಖಂಡರಾದ ಎಸ್.ಪಿ.ಶ್ರೀನಿವಾಸ್,ಶಂಕರ್, ಮೋಹನ್ ರೆಡ್ಡಿ, ರವಿಕುಮಾರ್, ವೆಂಕಟೇಶ್, ಮುರಳಿ, ರಮೇಶ್, ವಿವಿಧ ಇಲಾಖಾ ಅಧಿಕಾರಿಗಳು,ಮತ್ತಿತರರು ಇದ್ದರು.