ಸದಸ್ಯತ್ವ ಅಭಿಯಾನ : ಕೋಲಾರ ಬಿಜೆಪಿಗೆ ಗುರಿ ತಲುಪುವ ಸವಾಲು - ಕಾರ್ಯಕರ್ತರಿಗೆ ಮುನ್ನೆಚ್ಚರಿಕೆ

| Published : Sep 19 2024, 01:57 AM IST / Updated: Sep 19 2024, 04:45 AM IST

ಸಾರಾಂಶ

ಕೋಲಾರದಲ್ಲಿ ಬಿಜೆಪಿ ಸದಸ್ಯತ್ವ ನೋಂದಣಿ ನಿರೀಕ್ಷೆ ಮಟ್ಟದಲ್ಲಿಲ್ಲ ಎಂದು ಪಕ್ಷದ ಮುಖಂಡರು ಕಳವಳ ವ್ಯಕ್ತಪಡಿಸಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷ ಸದಸ್ಯತ್ವ ಮಾಡುವ ಗುರಿ ತಲುಪಲು ಕಾರ್ಯಕರ್ತರು ಶ್ರಮಿಸಬೇಕೆಂದು ಕರೆ ನೀಡಿದ್ದಾರೆ.

 ಕೋಲಾರ  : ಒಂದು ವಿಧಾನಸಭೆ ಕ್ಷೇತ್ರದಲ್ಲಿ ಒಂದು ಲಕ್ಷ ಸದಸ್ಯತ್ವ ಮಾಡುವುದು ಅಸಾಧ್ಯವೇನಲ್ಲ, ಪಕ್ಷದ ಕಾರ್ಯಕರ್ತರು ಶೇ.೧೦೦ರಷ್ಟು ಬದ್ಧತೆಯಿಂದ ಕೆಲಸ ಮಾಡಬೇಕು, ಈ ಮೂಲಕ ಬಿಜೆಪಿ ಸದಸ್ಯತ್ವ ಹೆಚ್ಚಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿಜಯ ರಾವಟ್ಕರ್ ಸೂಚನೆ ನೀಡಿದರು.ನಗರದ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ನಿರೀಕ್ಷೆ ಮಟ್ಟದಲ್ಲಿ ಬಿಜೆಪಿ ಸದಸ್ಯತ್ವ ನೋಂದಣಿ ಆಗಿಲ್ಲ, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು ಜವಾಬ್ದಾರಿಯಿಂದ, ಸವಾಲಾಗಿ ತೆಗೆದುಕೊಳ್ಳಬೇಕು. ತಮಗೆ ವಹಿಸಿರುವ ಗುರಿ ತಲುಪಬೇಕು, ಸದಸ್ಯತ್ವ ಪ್ರಕ್ರಿಯೆ ತ್ವರಿತಗೊಳಿಸಿ ಎಂದು ತಿಳಿಸಿದರು.

ದಿನಕ್ಕೆ 2000 ಸದಸ್ಯತ್ವ

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ಮಾತನಾಡಿ, 2019ರಲ್ಲಿ ನಡೆದ ಸದಸ್ಯತ್ವ ಅಭಿಯಾನ ವೇಳೆ ಜಿಲ್ಲೆಯಲ್ಲಿ 2 ಲಕ್ಷ ಮಾಡಲಾಗಿತ್ತು, ಈ ಬಾರಿ ತೀರಾ ಕಡಿಮೆ ಆಗಿದೆ, ಹೀಗಾದರೆ ಗುರಿ ಮುಟ್ಟುವುದು ಕಷ್ಟ, ಜಿಲ್ಲೆಯಲ್ಲಿ ೩೩೯ ಶಕ್ತಿಕೇಂದ್ರಗಳಿವೆ. ಏಕೆ ಹೆಚ್ಚು ಮಾಡಿಲ್ಲ. ಪ್ರತಿ ಮಂಡಲದಲ್ಲಿ ದಿನಕ್ಕೆ ಎರಡು ಸಾವಿರ ಸದಸ್ಯತ್ವ ಆಗಬೇಕು, ಕೆಲಸಕ್ಕೆ ಫಲ ಸಿಗಬೇಕು, ಮುಂದಿನ ಬರುತ್ತೇನೆ ಅಷ್ಟರಲ್ಲಿ ಪ್ರಗತಿ ಆಗಿರಬೇಕು, ನಾಳೆಯಿಂದಲೇ ಪ್ರವಾಸ ಮಾಡಿ ಸದಸ್ಯತ್ವ ಹೆಚ್ಚಿಸಿ ಎಂದು ನಿರ್ದೇಶನ ನೀಡಿದರು.

ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ ಕೇವಲ ೯ ಸಾವಿರ ಸದಸ್ಯತ್ವ ಆಗಿದೆ, ನಾನೇ ಸಾವಿರಕ್ಕೂ ಅಧಿಕ ಸದಸ್ಯತ್ವ ಮಾಡಿದ್ದೇನೆ, ಹಳ್ಳಿಗಳಿಗೆ ಹೋಗಿ ತಿರುಗಾಡದಿದ್ದರೆ ಸದಸ್ಯತ್ವ ಹೆಚ್ಚಿಸಲು ಆಗಲ್ಲ ಎಂದರು.ಮನೆ ಮನೆಗೆ ತೆರಳಿ ನೋಂದಣಿ

ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್ ಮಾತನಾಡಿ, ಜಿಲ್ಲೆಯಲ್ಲಿ ಸದಸ್ಯತ್ವ ಪ್ರಮಾಣ ತುಂಬಾ ಕಡಿಮೆ ಇದೆ, ಗಣೇಶ ಚತುರ್ಥಿ ಹಾಗೂ ವಿವಿಧ ಕೆಲಸ ಇದಕ್ಕೆ ಕಾರಣ ಇರಬಹುದು, ಇನ್ನು ಮುಂದೆ ಪಕ್ಷದ ಕೆಲಸಕ್ಕೂ ಗಮನ ಕೊಡಬೇಕು, ಮನೆಮನೆಗೆ ತೆರಳಿ ನೋಂದಣಿ ಮಾಡಿಸಬೇಕು, ಇನ್ನು ೧೩ ದಿನ ಬಾಕಿ ಇದೆ, ಸಕ್ರಿಯ ಕಾರ್ಯಕರ್ತರಾಗಲು ಕನಿಷ್ಠ 100 ಸದಸ್ಯರನ್ನು ಮಾಡಬೇಕು ಎಂದು ಹೇಳಿದರು.ಬೆಂಗಳೂರು ಗ್ರಾಮಾಂತರ ಬಿಜೆಪಿ ಅಧ್ಯಕ್ಷ ರಾಮಕೃಷ್ಣಪ್ಪ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಓಂಶಕ್ತಿ ಚಲಪತಿ, ಬಿ.ವಿ.ಮಹೇಶ್, ಮುಖಂಡರಾದ ವಿಜಯಲಕ್ಷ್ಮಿ, ಮಾಜಿ ಶಾಸಕ ನಾರಾಯಣಸ್ವಾಮಿ, ಜಿಲ್ಲಾ ಮಾಧ್ಯಮ ಪ್ರಮುಖ್ ಪ್ರವೀಣ್ ಗೌಡ, ರಾಜೇಶ್ ಸಿಂಗ್ ಇದ್ದರು.