ಸಾರಾಂಶ
ಚಿಕ್ಕಬಳ್ಳಾಪುರ: ಹಿಂದಿನ ಬಿಜೆಪಿ ಸರ್ಕಾರ ತಾಲೂಲೂಕಿನ ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಹಾಗೂ ಸಂಶೋಧನಾ ಕೇಂದ್ರಕ್ಕೆ ಮಂಜೂರು ಮಾಡಿದ್ದ 50 ಹಾಸಿಗೆಗಳ ತೀವ್ರ ನಿಗಾ ಘಟಕವನ್ನು ಜಿಲ್ಲಾ ಉಸ್ತುವಾರಿ ಸಚಿವರು ಚಿಂತಾಮಣಿ ತಾಲೂಕಿಗೆ ಸ್ಥಳಾಂತರಿಸಿದ್ದಾರೆ ಎಂದು ಸಂಸದ ಡಾ.ಕೆ.ಸುಧಾಕರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ ರಾಷ್ಟ್ರೀಯ ಆರೋಗ್ಯ ಅಭಿಯಾನದ (ಎನ್ ಹೆಚ್ ಎಂ) ಪಿಎಂ ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ (ಪಿಎಂಎಬಿಹೆಚ್ ಐಎಂ) ಯೋಜನೆಯಡಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಹಾಗೂ ಸಂಶೋಧನಾ ಕೇಂದ್ರಕ್ಕೆ 50 ಹಾಸಿಗೆಗಳ ತೀವ್ರ ನಿಗಾ ಘಟಕ ಸ್ಥಾಪಿಸಲು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುಮೋದನೆ ನೀಡಲಾಗಿತ್ತು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆದರೆ ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರು ಎಂದಿನಂತೆ ತಮ್ಮ ಸೇಡಿನ ರಾಜಕಾರಣ ಮುಂದುವರೆಸಿದ್ದು, ಅ.10ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಯನ್ನ ಚಿಂತಾಮಣಿ ತಾಲೂಕಿಗೆ ಸ್ಥಳಾಂತರ ಮಾಡಲು ನಿರ್ಧರಿಸುವ ಮೂಲಕ ಚಿಕ್ಕಬಳ್ಳಾಪುರಕ್ಕೆ ಮತ್ತೊಮ್ಮೆ ದ್ರೋಹ ಬಗೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಂತಾಮಣಿಗೆ ಹೊಸ ಯೋಜನೆ ತರಲಿ
ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ತಮ್ಮ ಕ್ಷೇತ್ರಕ್ಕೆ ಸಚಿವರೋ ಅಥವಾ ಇಡೀ ಜಿಲ್ಲೆಗೆ ಸಚಿವರೋ, ಜಿಲ್ಲಾ ಉಸ್ತುವಾರಿ ಸಚಿವರು ಬೇಕಾದರೆ ತಮ್ಮ ಕ್ಷೇತ್ರಕ್ಕೆ ಹೊಸ ಯೋಜನೆ, ಅನುದಾನ ತರಲಿ. ಐಸಿಯು ಘಟಕ ಅಲ್ಲ ತಮ್ಮ ಕ್ಷೇತ್ರದಲ್ಲಿ ಹೈಟೆಕ್ ಆಸ್ಪತ್ರೆಯನ್ನೇ ನಿರ್ಮಿಸಲಿ. ಆದರೆ ಈಗಾಗಲೇ ಚಿಕ್ಕಬಳ್ಳಾಪುರ ತಾಲ್ಲೂಕಿಗೆ ಅನುಮೋದನೆ ಆಗಿರುವ ಐಸಿಯು ಘಟಕವನ್ನ ಕಸಿದುಕೊಂಡು ತಮ್ಮ ಕ್ಷೇತ್ರಕ್ಕೆ ಸ್ಥಳಾಂತರ ಮಾಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.
ಇನ್ನು ಕ್ಷೇತ್ರದ ಶಾಸಕರ ಹಣೆಬರಹ ಗೊತ್ತೇ ಇದೆ. ಹೊಸ ಯೋಜನೆ, ಅನುದಾನ ತರುವ ಸಾಮರ್ಥ್ಯವಂತೂ ಇಲ್ಲ, ಕನಿಷ್ಠ ಪಕ್ಷ ಹಿಂದಿನ ಸರ್ಕಾರದಲ್ಲಿ ನಾನು ತಂದಿರುವ ಯೋಜನೆಗಳನ್ನಾದರೂ ಉಳಿಸಿಕೊಳ್ಳುವ ಯೋಗ್ಯತೆಯೂ ಸ್ಥಳೀಯ ಶಾಸಕರಿಗಿಲ್ಲ. ಇದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜನತೆಯ ದೌರ್ಭಾಗ್ಯ ಎಂದಿದ್ದಾರೆ.ಚಿಕ್ಕಬಳ್ಳಾಪುರ ಜಿಲ್ಲೆಗೆ ನಾನು ತಂದಿದ್ದ ಪ್ರತ್ಯೇಕ ಹಾಲು ಒಕ್ಕೂಟ ರದ್ದು ಮಾಡಿ, ರೈತರ ಹೊಟ್ಟೆಗೆ ಹೊಡೆದಿದ್ದಾಯ್ತು. ಈಗ ಚಿಕ್ಕಬಳ್ಳಾಪುರಕ್ಕೆ ನಾನು ತಂದಿದ್ದ ಐಸಿಯು ಘಟಕವನ್ನ ಕಿತ್ತುಕೊಳ್ಳುವ ಮೂಲಕ ಕ್ಷೇತ್ರದ ಜನತೆಗೆ ಮತ್ತೊಮ್ಮೆ ಮೋಸ ಮಾಡುತ್ತಿದೆ ಈ ವಿಶ್ವಾಸದ್ರೋಹಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಎಂದಿದ್ದಾರೆ.
ಎರಡು ರಾಜ್ಯಗಳಿಗೆ ಅನುಕೂಲ
ಚಿಕ್ಕಬಳ್ಳಾಪುರದ ಸರ್ಕಾರಿ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಈ ಐಸಿಯು ಘಟಕ ಸ್ಥಾಪನೆ ಮಾಡುವುದಕ್ಕೆ ಎರಡು ಪ್ರಮುಖ ಕಾರಣಗಳಿವೆ. ಇಲ್ಲಿ ಐಸಿಯು ಘಟಕ ಸ್ಥಾಪನೆ ಆದರೆ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಕೂಲ ಆಗುವುದರ ಜೊತೆಗೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವುದರಿಂದ ಕರ್ನಾಟಕ ಮತ್ತು ಆಂಧ್ರಪ್ರದೇಶ ಈ ಎರಡೂ ರಾಜ್ಯಗಳ 3-4 ಜಿಲ್ಲೆಗಳ ಜನರಿಗೆ ಅನುಕೂಲವಾಗುವಂತಹ ಆಯಕಟ್ಟಿನ ಸ್ಥಳವಾಗಿದೆ.ನನ್ನ ಮೇಲಿನ ದ್ವೇಷಕ್ಕೆ, ನನ್ನ ಮೇಲಿನ ಸೇಡಿಗೆ, ಜನ ಸಾಮಾನ್ಯರಿಗೆ ಯಾಕೆ ಪದೇ ಪದೇ ಅನ್ಯಾಯ ಮಾಡುತ್ತೀರಿ? ಬಡವರಿಗೆ ಸಿಗುವ ವೈದ್ಯಕೀಯ ಸೇವೆಯನ್ನ ಯಾಕೆ ಕಸಿದುಕೊಳ್ಳುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ನಿರ್ಧಾರ ಕೈಬಿಡಲು ಆಗ್ರಹ
ಈ ಸಂಪುಟ ನಿರ್ಧಾರವನ್ನ ಈ ಕೂಡಲೇ ರದ್ದು ಮಾಡಿ, ಈ ಹಿಂದೆ ರೂಪಿಸಲಾಗಿದ್ದ ಯೋಜನೆಯನ್ನ ಹಿಂತಿರುಗಿಸುವ ಮೂಲಕ ಸರ್ಕಾರ ತನ್ನ ತಪ್ಪನ್ನ ಸರಿಪಡಿಸಿಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವರನ್ನು, ಜಿಲ್ಲಾ ಉಸ್ತುವಾರಿ ಸಚಿವರನ್ನು ಮತ್ತು ಮುಖ್ಯ ಕಾರ್ಯದರ್ಶಿಗಳನ್ನ ಆಗ್ರಹಿಸುತ್ತೇನೆ. ಇಲ್ಲವಾದರೆ ಚಿಕ್ಕಬಳ್ಳಾಪುರಕ್ಕೆ ನ್ಯಾಯ ಒದಗಿಸಲು ಕಾನೂನು ಹೋರಾಟ ಸೇರಿದಂತೆ ಎಲ್ಲ ರೀತಿಯ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಸಿದ್ದವಾಗಬೇಕಾಗುತ್ತದೆ. ಕಾಂಗ್ರೆಸ್ ಸರ್ಕಾರದ ಮಲತಾಯಿ ಧೋರಣೆಯ ವಿರುದ್ಧ ಚಿಕ್ಕಬಳ್ಳಾಪುರದ ಜನತೆ ದಂಗೆ ಏಳುವ ಮುನ್ನ ಸರ್ಕಾರ ಎಚ್ಚೆತ್ತುಕೊಂಡರೆ ಒಳ್ಳೆಯದು. ಎಚ್ಚರಿಕೆ ಎಂದು ತಿಳಿಸಿದ್ದಾರೆ.