ಸಂಸದೆ ಸುಮಲತಾ ‘ಸ್ವಾಭಿಮಾನ’ದ ‘ಶಸ್ತ್ರ ತ್ಯಾಗವೇ’..?

| Published : Apr 04 2024, 01:04 AM IST / Updated: Apr 04 2024, 05:07 AM IST

ಸಾರಾಂಶ

ಸ್ವಾಭಿಮಾನದ ಮಾತುಗಳನ್ನಾಡುತ್ತಲೇ ಸ್ವಾಭಿಮಾನಿ ಸಂಸದೆ ಎಂದು ಹೆಸರು ಗಳಿಸಿದ್ದ ಸುಮಲತಾ ಅಂಬರೀಶ್‌, ಬಿಜೆಪಿ-ಜೆಡಿಎಸ್‌ ಮೈತ್ರಿ ಟಿಕೆಟ್‌ ಎಚ್‌.ಡಿ.ಕುಮಾರಸ್ವಾಮಿ ಅವರ ಪಾಲಾದ ನಂತರದಲ್ಲಿ ಸ್ವಾಭಿಮಾನವನ್ನು ತೀವ್ರವಾಗಿ ಪ್ರತಿಪಾದಿಸುವ ಗೋಜಿಗೆ ಹೋಗುತ್ತಿಲ್ಲ. 

ಮಂಡ್ಯ ಮಂಜುನಾಥ

 ಮಂಡ್ಯ :  ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ವಾಭಿಮಾನದ ಅಸ್ತ್ರ ಪ್ರಯೋಗಿಸಿ ಅದರ ತೀವ್ರತೆಯಲ್ಲಿ ಗೆದ್ದುಬಂದಿದ್ದ ಸಂಸದೆ ಸುಮಲತಾ ಅಂಬರೀಶ್‌ ಪ್ರಸ್ತುತ ಸಂದರ್ಭದಲ್ಲಿ ಮುಂದಿನ ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಸ್ವಾಭಿಮಾನದ ಶಸ್ತ್ರತ್ಯಾಗ ಮಾಡಿದವರಂತೆ ಕಂಡುಬರುತ್ತಿದ್ದಾರೆ.

ಸ್ವಾಭಿಮಾನದ ಮಾತುಗಳನ್ನಾಡುತ್ತಲೇ ಸ್ವಾಭಿಮಾನಿ ಸಂಸದೆ ಎಂದು ಹೆಸರು ಗಳಿಸಿದ್ದ ಸುಮಲತಾ ಅಂಬರೀಶ್‌, ಬಿಜೆಪಿ-ಜೆಡಿಎಸ್‌ ಮೈತ್ರಿ ಟಿಕೆಟ್‌ ಎಚ್‌.ಡಿ.ಕುಮಾರಸ್ವಾಮಿ ಅವರ ಪಾಲಾದ ನಂತರದಲ್ಲಿ ಸ್ವಾಭಿಮಾನವನ್ನು ತೀವ್ರವಾಗಿ ಪ್ರತಿಪಾದಿಸುವ ಗೋಜಿಗೆ ಹೋಗುತ್ತಿಲ್ಲ. ಇದರಿಂದ ಐದು ವರ್ಷಕಾಲ ಜಿಲ್ಲೆಯೊಳಗೆ ಝೇಂಕರಿಸಿದ್ದ ಸ್ವಾಭಿಮಾನ ಈಗ ಮಸುಕಾದಂತಾಗಿದೆ.

ಸ್ವಾಭಿಮಾನದ ಸಲುವಾಗಿ ರಾಜಕೀಯದಲ್ಲಿ ಯಾರನ್ನು ಪ್ರಬಲವಾಗಿ ವಿರೋಧಿಸಿಕೊಂಡು ಬಂದಿದ್ದರೋ, ಯಾರನ್ನು ಬದ್ಧ ದ್ವೇಷಿಯಾಗಿ ಕಂಡಿದ್ದರೋ ಈಗ ಅವರೊಂದಿಗೆ ಸ್ನೇಹದ ರಾಜಕಾರಣ ಮಾಡುವ ಪರಿಸ್ಥಿತಿಯನ್ನು ಸುಮಲತಾ ಎದುರಿಸುತ್ತಿದ್ದಾರೆ. ಈಗ ಸುಮಲತಾ ಅವರಿಗೆ ಅನಿವಾರ್ಯವೂ ಆಗಿದೆ. ಏಕೆಂದರೆ, 2019ರ ಚುನಾವಣಾ ಸಂದರ್ಭದಲ್ಲಿ ಸುನಾಮಿಯಂತೆ ಎದ್ದಿದ್ದ ಸ್ವಾಭಿಮಾನ ಅಲೆ ಈಗ ಜಿಲ್ಲೆಯೊಳಗೆ ತಣ್ಣಗಾಗಿದೆ. ಅದಕ್ಕೆ ತೀವ್ರತೆ ತುಂಬಬೇಕಿದ್ದ ಸ್ವಾಭಿಮಾನಿ ಸಂಸದೆಯೂ ಶಾಂತವಾಗಿದ್ದಾರೆ. ಇದರ ಪರಿಣಾಮ ಸ್ವಾಭಿಮಾನದ ಕಹಳೆ ಮೊಳಗಿಸುವವರೇ ಇಲ್ಲದೆ ಅನಾಥವಾಗಿದೆ.

ಸುಮಲತಾ ರಾಜಕೀಯ ಪ್ರವೇಶದ ಸಮಯದಲ್ಲಿ ಜೆಡಿಎಸ್‌ನವರ ಕಠೋರವಾದ ಮಾತುಗಳು, ನಿಂದನಾತ್ಮಕ ನುಡಿಗಳು, ವೈಯಕ್ತಿಕ ತೇಜೋವಧೆ ಸೇರಿದಂತೆ ಅವಮಾನ, ಅಪಹಾಸ್ಯದ ಮಾತುಗಳನ್ನು ಸಹಿಸಿಕೊಂಡು, ಅವೆಲ್ಲವನ್ನೂ ಒಂದೇ ಬಾರಿಗೆ ಮರೆತು ಜೆಡಿಎಸ್‌ ನಾಯಕರೊಂದಿಗೆ ಮಿತೃತ್ವದ ರಾಜಕಾರಣ ಮಾಡುವುದು ಸಂಸದೆ ಸುಮಲತಾ ಅವರಿಗೆ ಈಗ ಅನಿವಾರ್ಯವಾಗಿದೆ.

2019ರಲ್ಲಿ ಸುಮಲತಾ ಅವರ ಬೆನ್ನಿಗೆ ಹಲವಾರು ಶಕ್ತಿಗಳು ನಿಂತಿದ್ದವು. ಈಗ ಆ ಎಲ್ಲಾ ಶಕ್ತಿಗಳು ಚದುರಿಹೋಗಿವೆ. ಸುಮಲತಾ ಏಕಾಂಗಿಯಾಗಿದ್ದಾರೆ. ಸ್ವಾಭಿಮಾನವನ್ನು ಕೆಣಕುವ ಸ್ಥಿತಿಯಲ್ಲಿ ಅವರಿಲ್ಲ. ಅವರಿಗೆ ರಾಜಕೀಯ ಭವಿಷ್ಯ ಮುಖ್ಯವಾಗಿರುವುದರಿಂದ ಪ್ರಮುಖ ರಾಜಕೀಯ ಪಕ್ಷದಲ್ಲಿ ನೆಲೆ ಕಂಡುಕೊಳ್ಳುವ ಅವಶ್ಯಕತೆ ಇದೆ. ಅದಕ್ಕಾಗಿ ಅವರು ಬಿಜೆಪಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಬಿಜೆಪಿ ಜೆಡಿಎಸ್‌ನ್ನು ಮಿತ್ರ ಪಕ್ಷವಾಗಿ ಮಾಡಿಕೊಂಡಿರುವುದರಿಂದ ಜೆಡಿಎಸ್‌ ಜೊತೆಗಿನ ಹಗೆತನವನ್ನು ಸುಮಲತಾ ಮುಂದುವರೆಸಲಾಗುತ್ತಿಲ್ಲ. ಹೀಗಾಗಿ ಸ್ವಾಭಿಮಾನ ಪರ ದನಿ ಎತ್ತಲಾಗದೆ ಶಸ್ತ್ರತ್ಯಾಗ ಮಾಡಿದ್ದಾರೆ.

ದ್ವೇಷವನ್ನು ಬದಿಗಿಟ್ಟು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರೇ ಸಂಸದೆ ಸುಮಲತಾ ಅವರ ಮನೆಗೆ ತೆರಳಿ ಬೆಂಬಲ ಕೋರಿದ್ದಾರೆ. ಅಷ್ಟೇ ಗೌರವಯುತವಾಗಿ ಸುಮಲತಾ ಕೂಡ ಸ್ವಾಭಿಮಾನದ ಕ್ಷೇತ್ರವನ್ನು ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಬಿಟ್ಟುಕೊಟ್ಟಿದ್ದಾರೆ. ಐದು ವರ್ಷಗಳಿಗೆ ಸೀಮಿತವಾಗಿ ಜಿಲ್ಲೆಯ ಸ್ವಾಭಿಮಾನ ಈಗ ಮರೆಯಾಗಿಹೋಯಿತೇ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಪ್ರಶ್ನೆಯಾಗಿದೆ.