ಬಿಎಸ್‌ವೈ ಅವಹೇಳನ ಬಗ್ಗೆ ಹಿರಿಯರು ಸುಮ್ಮನಿರುವುದು ಅಪರಾಧ : ಬಿ. ವೈ. ವಿಜಯೇಂದ್ರ

| N/A | Published : Feb 07 2025, 05:49 AM IST

BY vijayendraa

ಸಾರಾಂಶ

 ಪಕ್ಷದ ಕೆಲವರು  ಬಿ.ಎಸ್‌.ಯಡಿಯೂರಪ್ಪ ಅವರ ಬಗ್ಗೆ ಬಹಿರಂಗವಾಗಿ ತೇಜೋವಧೆ ಮಾಡುತ್ತಿದ್ದರೂ ಪಕ್ಷದ ಹಿರಿಯರು ಸುಮ್ಮನಿರುವುದು ದುರ್ದೈವದ ಸಂಗತಿ. ಈ ವಿಚಾರದಲ್ಲಿ ಸುಮ್ಮನೆ ಕುಳಿತುಕೊಳ್ಳುವುದೂ ಒಂದು ಅಪರಾಧವೇ ಸರಿ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀಕ್ಷ್ಣವಾಗಿ ಹೇಳಿದ್ದಾರೆ.

 ಬೆಂಗಳೂರು : ‘ಕಳೆದ ಒಂದು ವರ್ಷದಿಂದ ಪಕ್ಷದ ಕೆಲವರು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಬಗ್ಗೆ ಬಹಿರಂಗವಾಗಿ ತೇಜೋವಧೆ ಮಾಡುತ್ತಿದ್ದರೂ ಪಕ್ಷದ ಹಿರಿಯರು ಸುಮ್ಮನಿರುವುದು ದುರ್ದೈವದ ಸಂಗತಿ. ಈ ವಿಚಾರದಲ್ಲಿ ಸುಮ್ಮನೆ ಕುಳಿತುಕೊಳ್ಳುವುದೂ ಒಂದು ಅಪರಾಧವೇ ಸರಿ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀಕ್ಷ್ಣವಾಗಿ ಹೇಳಿದ್ದಾರೆ.

‘ನನ್ನ ಕೆಲಸದ ಬಗ್ಗೆ ಪಕ್ಷದ ಲಕ್ಷಾಂತರ ಕಾರ್ಯಕರ್ತರಿಗೆ ತೃಪ್ತಿ ಇದೆ. ರಾಷ್ಟ್ರೀಯ ನಾಯಕರು ಕೆಲ ತೀರ್ಮಾನ ಮಾಡುವಾಗ ಕಾರ್ಯಕರ್ತರ ಅಭಿಪ್ರಾಯಗಳನ್ನೂ ಪರಿಗಣಿಸುತ್ತಾರೆ’ ಎಂದು ಹೇಳುವ ಮೂಲಕ ಅವರು ಪರೋಕ್ಷವಾಗಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ತಾವೇ ಮುಂದುವರೆಯುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.

ಗುರುವಾರ ಪಕ್ಷದ ಕಚೇರಿಯಲ್ಲಿ ದಿಢೀರ್ ಪತ್ರಿಕಾಗೋಷ್ಠಿ ನಡೆಸಿದ ಅವರು ಯಡಿಯೂರಪ್ಪ ಅವರ ವಿರುದ್ಧ ಪಕ್ಷದ ಕೆಲ ನಾಯಕರು ನೀಡುತ್ತಿರುವ ಹೇಳಿಕೆಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ವಾಗ್ದಾಳಿ ನಡೆಸಿದರು. ತಮ್ಮ ವಿರುದ್ಧದ ಟೀಕೆಗಳಿಗೂ ಉತ್ತರ ನೀಡುವ ಪ್ರಯತ್ನ ಮಾಡಿದರು.

ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಯಡಿಯೂರಪ್ಪ ಅವರನ್ನು ಪಕ್ಷದ ಕೆಲವರು ಕಳೆದ ಒಂದು ವರ್ಷದಿಂದ ಅವಮಾನಿಸುವ ಹಾಗೂ ತೇಜೋವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಆದರೂ ಪಕ್ಷದ ಹಿರಿಯರು ಅವರ ಬಾಯಿ ಮುಚ್ಚಿಸದಿರುವುದು ದುರ್ದೈವ. ನಾನೂ ಕೆಲ ಮುಖಂಡರ ಹೇಳಿಕೆ ಗಮನಿಸಿದ್ದೇನೆ. ಕಾರಣಾಂತರಗಳಿಂದ ಆ ಹೇಳಿಕೆಗಳಿಗೆ ಪ್ರತಿಕ್ರಿಯಿಸಿಲ್ಲ. ರಾಜ್ಯಾಧ್ಯಕ್ಷನಾಗಿ ನಾನು ಪ್ರತಿಕ್ರಿಯಿಸಿದರೆ ಪಕ್ಷ ಹಾಗೂ ಕಾರ್ಯಕರ್ತರಿಗೆ ಮುಜುಗರವಾಗಲಿದೆ ಎಂದರು.

ಕೆಲವರು ನನ್ನ ಬಗ್ಗೆ ಹಗುರವಾಗಿ ಮಾತನಾಡಿದರೆ ಸಹಿಸಿಕೊಳ್ಳುವೆ. ಆದರೆ, ಪಕ್ಷ ಕಟ್ಟಿದ ರೈತ ನಾಯಕ ಯಡಿಯೂರಪ್ಪ ಬಗ್ಗೆ ಮಾತನಾಡುವಾಗ ಕೀಳುಮಟ್ಟದ ಭಾಷೆ ಪ್ರಯೋಗಿಸುತ್ತಿದ್ದಾರೆ. ಇದನ್ನು ನೋಡಿಕೊಂಡು ಕೂರುವುದು ಅಪರಾಧವೇ ಸರಿ. ಇಲ್ಲಿ ಯಾರು ತಪ್ಪು ಅಥವಾ ಸರಿ ಎಂಬುದು ಮುಖ್ಯವಲ್ಲ. ಬಹಿರಂಗವಾಗಿ ತೇಜೋವಧೆ, ಅವಮಾನಕಾರಿ ಹೇಳಿಕೆ ನೀಡುತ್ತಿದ್ದರೂ ಪಕ್ಷದ ಹಿರಿಯರು ಸುಮ್ಮನಿರುವುದು ದುರ್ದೈವ. ಒಮ್ಮೆಯೂ ಅವರ ಬಾಯಿ ಮುಚ್ಚುವ ಕೆಲಸವಾಗಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ನಾನು ಯಾರನ್ನೂ ಅಪಮಾನಿಸಿಲ್ಲ:

ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ, ಏಕಪಕ್ಷೀಯ ನಿರ್ಧಾರ ಮಾಡುತ್ತಿದ್ದಾರೆ ಎಂದು ಕೆಲವರು ನನ್ನನ್ನುಅಪರಾಧಿ ರೀತಿ ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ. ನಾನು ರಾಜ್ಯಾಧ್ಯಕ್ಷನಾಗಿ ಯಾವ ಹಿರಿಯರಿಗೂ ಅವಮಾನಿಸುವ ರೀತಿ ನಡೆದುಕೊಂಡಿಲ್ಲ. ಬಹಳ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇನೆ ಎಂದು ಇದೇ ವೇಳೆ ವಿಜಯೇಂದ್ರ ಪ್ರತಿಪಾದಿಸಿದರು.

ಗಲಾಟೆ ನಿಲ್ಲಿಸಿ ಎನ್ನುತ್ತಿದ್ದಾರೆ:

ಪಕ್ಷದೊಳಗಿನ ಗಲಾಟೆ ನಿಲ್ಲಿಸಿ ಎಂದು ಹೋದ ಕಡೆ ಬಂದ ಕಡೆ ಕಾರ್ಯಕರ್ತರು ಹೇಳುತ್ತಿದ್ದಾರೆ. ಕಾರ್ಯಕರ್ತರ ಅಭಿಪ್ರಾಯ ಅರ್ಥ ಮಾಡಿಕೊಳ್ಳಬೇಕು. ಕಾರ್ಯಕರ್ತರನ್ನು ಅವಮಾನಿಸುವ ಅಧಿಕಾರ ನನ್ನನ್ನೂ ಸೇರಿ ಯಾರಿಗೂ ಇಲ್ಲ. ಏನೇ ಅಸಮಾಧಾನ ಇದ್ದರೂ ಪಕ್ಷದ ವರಿಷ್ಠರ ಬಳಿ ಹೇಳಬೇಕು. ದಿನ ಬೆಳಗಾದರೆ ಯಡಿಯೂರಪ್ಪ ಅವರನ್ನು ಟೀಕಿಸುವುದು ಹಿರಿತನಕ್ಕೆ ಗೌರವ ಬರುವುದಿಲ್ಲ. ಪಕ್ಷಕ್ಕೂ ಗೌರವವಿರುವುದಿಲ್ಲ. ಕೆಲವರ ಹೇಳಿಕೆಗಳಿಂದ ಕಾರ್ಯಕರ್ತರು ತಲೆ ಎತ್ತಿ ನಡೆಯದಂತೆ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ಹೊರಹಾಕಿದರು.

ತಡೆಯವ ಕೆಲಸ ಆಗಲಿ:

ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವವರನ್ನು ತಡೆಯುವ ಕೆಲಸವಾಗಬೇಕು. ಸಮಸ್ಯೆಗಳು ಇದ್ದಲ್ಲಿ ವರಿಷ್ಠರ ಗಮನಕ್ಕೆ ತರಬೇಕು. ಇದನ್ನು ಯಾರೂ ತಡೆಯುವುದಿಲ್ಲ. ಆದರೆ, ರೀತಿ ಮಾತನಾಡುವುದು ಖಂಡಿತಾ ಸರಿಯಲ್ಲ. ಕಳೆದೊಂದು ವರ್ಷದಿಂದ ಯಡಿಯೂರಪ್ಪರನ್ನು ಅವಮಾನಿಸಿ, ತೇಜೋವಧೆ ಮಾಡಲಾಗುತ್ತಿದೆ. ಈಗಲೂ ಕಾಲ ಮಿಂಚಿಲ್ಲ. ಈ ರೀತಿಯ ಹೇಳಿಕೆ ತಡೆಯಬೇಕು. ಈಗಾಗಲೇ ಪಕ್ಷದ ನಾಯಕರು ನೊಂದಿದ್ದಾರೆ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಯಡಿಯೂರಪ್ಪ ಬಗ್ಗೆ ಮಾತನಾಡುತ್ತಿರುವವರಿಗೆ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ ಅಥವಾ ಹೈಕಮಾಂಡ್‌ನ ಕೆಲ ನಾಯಕರ ಬೆಂಬಲವಿದೆ ಎಂಬುದು ಸತ್ಯಕ್ಕೆ ದೂರುವಾದದು. ಇಂಥದ್ದನ್ನು ಅವರು ಬೆಂಬಲಿಸಲು ಸಾಧ್ಯವೇ ಇಲ್ಲ. ಆದರೂ ಕೆಲವರ ವಿರುದ್ಧ ಏಕೆ ನಿರ್ಧಾರ ತೆಗೆದುಕೊಂಡಿಲ್ಲ ಎಂಬ ಪ್ರಶ್ನೆ ಕಾಡುವುದು ಸಹಜ. ಇದಕ್ಕೆಲ್ಲ ಶೀಘ್ರ ಉತ್ತರ ಸಿಕ್ಕಿ ಸುಖ್ಯಾಂತವಾಗಲಿದೆ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ಗೊಂದಲಗಳಿಗೆ ಯಡಿಯೂರಪ್ಪ ಮಧ್ಯಸ್ಥಿಕೆ ವಹಿಸುವ ಬಗ್ಗೆ ಸಂಸದ ಬಸವರಾಜ ಬೊಮ್ಮಾಯಿ ಹೇಳಿಕೆ ಬಗ್ಗೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ನನ್ನನ್ನು ವಿರೋಧಿಸುವವರಿಗೆ ಇಷ್ಟೊಂದು ಭಿನ್ನಾಭಿಪ್ರಾಯ ಇರುತ್ತದೆ ಎಂಬುದು ಗೊತ್ತಿರಲಿಲ್ಲ. ಇನ್ನು ತಟಸ್ಥ ಬಣದ ಬಗ್ಗೆ ನನಗೂ ಗೊತ್ತಿದೆ. ಈಗ ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಯಡಿಯೂರಪ್ಪ ಅವರ ತೇಜೋವಧೆ ನಿಲ್ಲಿಸಿ ಎಂದು ಕೇಂದ್ರ ವರಿಷ್ಠರು ಬಂದು ಹೇಳಬೇಕಾ? ಯಡಿಯೂರಪ್ಪಗೆ ಅವಮಾನ ಆಗುತ್ತಿದ್ದರೂ ಆಲ್‌ ಈಸ್‌ ವೆಲ್‌ ಎಂದು ಸಹಿಸುತ್ತೀರಿ ಎಂದರೆ, ಅಕ್ಷಮ್ಯ ಅಪರಾಧ ಎಂದು ಹರಿಹಾಯ್ದರು.

ಅಡ್ರೆಸ್‌ ಇಲ್ಲದವರನ್ನೂ ಬೆಳೆಸಿದ್ದಾರೆ:

ಪಕ್ಷದ ಹೈಕಮಾಂಡ್‌ ಚರ್ಚಿಸಿ ನನ್ನನ್ನು ಪಕ್ಷದ ರಾಜ್ಯಾಧ್ಯಕ್ಷನಾಗಿ ನೇಮಿಸಿದೆ. ಯಡಿಯೂರಪ್ಪ ಅವರು ಪಕ್ಷ ಸಂಘಟಿಸಿದ್ದಾರೆ. ಕಾರ್ಯಕರ್ತರಿಗೆ ಗೌರವ ನೀಡಿದ್ದಾರೆ. ಹಲವರನ್ನು ಬೆಳೆಸಿದ್ದಾರೆ. ಅಡ್ರೆಸ್‌ ಇಲ್ಲದ ಕೆಲವರನ್ನು ಮೇಲೆತ್ತಿರುವುದನ್ನೂ ನಾನು ನೋಡಿದ್ದೇನೆ ಎಂದು ವಿಜಯೇಂದ್ರ ಹೇಳಿದರು.

 20ರೊಳಗೆ ಅಧ್ಯಕ್ಷ ಆಯ್ಕೆ: ವಿಜಯೇಂದ್ರ

ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯ ಆಯ್ಕೆ ಪ್ರಕ್ರಿಯೆ ಈ ತಿಂಗಳ 20ರೊಳಗೆ ಮುಗಿಯುವ ಸೂಚನೆಯಿದೆ ಎಂದು ವಿಜಯೇಂದ್ರ ಹೇಳಿದ್ದಾರೆ. ಆಯ್ಕೆ ಪ್ರಕ್ರಿಯೆ ಯಾವುದೇ ಕ್ಷಣದಲ್ಲಾದರೂ ಶುರುವಾಗಬಹುದು. ಮುಂದಿನ 8-10 ದಿನಗಳಲ್ಲಿ ಈ ಗೊಂದಲಗಳಿಗೆ ತೆರೆ ಬೀಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಹೊಂದಾಣಿಕೆ ಇದ್ದಿದ್ದರೆ ಪಾದಯಾತ್ರೆ ಆಗ್ತಿರಲಿಲ್ಲ

ಬೆಂಗಳೂರು: ಹೊಂದಾಣಿಕೆ ರಾಜಕಾರಣ ಮಾಡಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬೆಂಗಳೂರಿನಿಂದ ಮೈಸೂರಿನವರೆಗೆ ಮುಡಾ ಪಾದಯಾತ್ರೆ ಮಾಡುತ್ತಿರಲಿಲ್ಲ ಎಂದು ಬಿ.ವೈ.ವಿಜಯೇಂದ್ರ ತಮ್ಮ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

ಎಲ್ಲವರನ್ನೂ ವರಿಷ್ಠರ ಗಮನಕ್ಕೆ ತಂದಿದ್ದೇನೆ

ತೇಜೋವಧೆ ಮಾಡುವುದು, ಏಕಪಕ್ಷೀಯ ನಿರ್ಧಾರ ಎಂದು ಆರೋಪಿಸುವುದನ್ನು ನಾನು ಒಪ್ಪಲ್ಲ. ರಾಜ್ಯಾಧ್ಯಕ್ಷನಾಗಿ ನನಗೆ ನನ್ನ ಕರ್ತವ್ಯ ಇದೆ. ಜವಾಬ್ದಾರಿಯಿಂದ ನಡೆದುಕೊಂಡಿದ್ದೇನೆ. ಆದರೂ ಪದೇ ಪದೆ ನನ್ನನ್ನು ಅಪರಾಧಿ ರೀತಿ ಬಿಂಬಿಸುವ ಕೆಲಸವಾಗುತ್ತಿದೆ. ಇದನ್ನು ವರಿಷ್ಠರ ಗಮನಕ್ಕೂ ತಂದಿದ್ದೇನೆ. ಎಲ್ಲಿ ಹೇಳಬೇಕೋ ಅಲ್ಲಿ ಹೇಳಿದ್ದೇನೆ.

- ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ