ಸಾರಾಂಶ
ನಾನು ಬಿಜೆಪಿಗೆ ಹತ್ತಿರವಾಗುತ್ತಿದ್ದೇನೆ ಎಂಬುದೆಲ್ಲ ಸುಳ್ಳು. ಅದೆಲ್ಲವೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆಯಷ್ಟೇ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು : ನಾನು ಬಿಜೆಪಿಗೆ ಹತ್ತಿರವಾಗುತ್ತಿದ್ದೇನೆ ಎಂಬುದೆಲ್ಲ ಸುಳ್ಳು. ಅದೆಲ್ಲವೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆಯಷ್ಟೇ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ಹುಟ್ಟಾ ಕಾಂಗ್ರೆಸಿಗ. ಆದರೂ, ನನ್ನ ವೈಯಕ್ತಿಕ ನಂಬಿಕೆ ನಾನು ಪಾಲಿಸುತ್ತೇನೆ. ನಾನು ಎಲ್ಲ ಧರ್ಮವನ್ನೂ ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ. ನಾನು ಜನ್ಮತಃ ಹಿಂದುವಾಗಿದ್ದು, ಹಿಂದುವಾಗಿಯೇ ಜೀವಿಸಿ, ಹಿಂದುವಾಗಿಯೇ ಸಾಯುತ್ತೇನೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಇಶಾ ಫೌಂಡೇಷನ್‌ನ ಸದ್ಗುರು ಜಗ್ಗಿ ವಾಸುದೇವ ಅವರು ಶಿವರಾತ್ರಿ ಕಾರ್ಯಕ್ರಮಕ್ಕೆ ಆಹ್ವಾನಿಸಲು ಭೇಟಿಯಾಗಿದ್ದರು. ಅದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ಪಾಲ್ಗೊಳ್ಳುತ್ತಿದ್ದಾರೆ. ಹಾಗೆಯೇ ನಾನು ಇತ್ತೀಚೆಗೆ ಮಹಾಕುಂಭ ಮೇಳದಲ್ಲಿ ಪಾಲ್ಗೊಂಡಿದ್ದೆ. ಈ ಎಲ್ಲ ಕಾರಣದಿಂದಾಗಿ ನಾನು ಬಿಜೆಪಿಗೆ ಹತ್ತಿರವಾಗುತ್ತಿದ್ದೇನೆ ಎಂಬುದೆಲ್ಲ ಸುಳ್ಳು ಎಂದು ಹೇಳಿದರು.
ದೆಹಲಿ ಪ್ರವಾಸದ ವೇಳೆ ಎಐಸಿಸಿ ಕಚೇರಿ ಭೇಟಿ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಕೆಪಿಸಿಸಿ ಅಧ್ಯಕ್ಷ. ಎಐಸಿಸಿ ಕಚೇರಿ ನನಗೆ ದೇವಸ್ಥಾನವಿದ್ದಂತೆ. ಯಾವುದೇ ನಾಯಕರನ್ನೂ ಭೇಟಿ ಮಾಡದಿದ್ದರೂ ಎಐಸಿಸಿ ಕಚೇರಿಗೆ ಹೋಗಿ ಬರುತ್ತೇನೆ. ಆ ಕಚೇರಿಯೇ ನನ್ನನ್ನು ಈ ಸ್ಥಾನದಲ್ಲಿ ಕೂರಿಸಿದೆ. ನಾನು ಕಾಂಗ್ರೆಸ್ ಕಚೇರಿಗೆ ಹೋಗದೆ ಬಿಜೆಪಿ ಕಚೇರಿಗೆ, ಕೇಶವ ಕೃಪಕ್ಕೆ ಹೋಗಲು ಸಾಧ್ಯವೇ? ಎಂದರು.
ಆ ದೇವಸ್ಥಾನದಲ್ಲಿ ಏನು ಪ್ರಾರ್ಥಿಸಿದಿರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ನಾನು ಯಾವುದೇ ಪ್ರಾರ್ಥನೆ ಮಾಡುವ ಅವಶ್ಯಕತೆಯಿಲ್ಲ. ಎಐಸಿಸಿ ಕಚೇರಿ ಸಿಬ್ಬಂದಿಯನ್ನು ಮಾತನಾಡಿಸಿಕೊಂಡು ಬರುತ್ತೇನೆ. ಆದರೂ, ಪ್ರಯತ್ನಗಳು ವಿಫಲವಾದರೂ, ಪ್ರಾರ್ಥನೆ ವಿಫಲವಾಗುವುದಿಲ್ಲ ಎಂದು ಸೂಚ್ಯವಾಗಿ ತಿಳಿಸಿದರು.